ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಂತ್ರ್ಯ ಹೋರಾಟ: ಬೆದರಿಕೆಗೆ ಬಾಗದ ಅಂದಿನ ಕಿತ್ತೂರು ಕಲಿಗಳು...

ಐತಿಹಾಸಿಕ ಊರಲ್ಲಿ ಬತ್ತದ ಸ್ವಾತಂತ್ರ್ಯ ಹೋರಾಟ
Published 15 ಆಗಸ್ಟ್ 2024, 6:58 IST
Last Updated 15 ಆಗಸ್ಟ್ 2024, 6:58 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ನಾಡಿನ ಸ್ವಾತಂತ್ರ್ಯಕ್ಕಾಗಿ ದೈತ್ಯ ಬ್ರಿಟಿಷ್ ಸೈನ್ಯದ ವಿರುದ್ಧ ಪ್ರಥಮ ಹೋರಾಟದ ಕಿಡಿ ಹೊತ್ತಿಸಿದ್ದು ರಾಣಿ ಚನ್ನಮ್ಮ. ಇದು ಚನ್ನಮ್ಮನ ನಿಧನದ ನಂತರವೂ ನಿರಂತರವಾಗಿತ್ತು. ರಾಣಿಯ ನಂತರದ ಹೋರಾಟದ ವಾರಸುದಾರಿಕೆ ಪಡೆದುಕೊಂಡಿದ್ದವರ ಸ್ಮರಣೆಯೇ ರೋಮಾಂಚನ ಉಂಟು ಮಾಡುವಂಥದ್ದು’ ಎನ್ನುತ್ತಾರೆ ಸ್ವಾತಂತ್ರ್ಯ ಹೋರಾಟಗಾರ ಮನೆತನದ ಪ್ರಭು ಮಾರಿಹಾಳ.

‘ಕ್ರಾಂತಿಯ ನೆಲ ಕಿತ್ತೂರು ಮಣ್ಣಿನ ತೇಜಸ್ಸು ಅಂಥದ್ದು. ರಾಣಿ ಚನ್ನಮ್ಮನ ನಂತರ ಹೋರಾಟದ ನೊಗ ಹೊತ್ತು ಸಾಗಿದವರು ಸಂಗೊಳ್ಳಿ ರಾಯಣ್ಣ ಮತ್ತು ಅವರ ಹತ್ತಾರು ಸಹಚರರು. ರಾಯಣ್ಣನನ್ನು ಬಂಧಿಸಿ ನಂದಗಡದಲ್ಲಿ ನೇಣು ಹಾಕಿದ ನಂತರ ಈ ನಾಡಿನಲ್ಲಿ ಹೋರಾಟದ ಕಾವು ತಣ್ಣಗಾಯಿತು ಎಂದು ಬ್ರಿಟಿಷರು ಭಾವಿಸಿದ್ದರು. ಆದರೆ, ಹಾಗಾಗಲಿಲ್ಲ. ಸ್ವಾತಂತ್ರ್ಯ ಸಿಗುವವರೆಗೂ  ಇಲ್ಲಿಯ ವೀರ ಪರಂಪರೆಯ ಸೇನಾನಿಗಳು ಹೋರಾಟದ ಜ್ಯೋತಿ ನಂದಿಸಲು ಬಿಟ್ಟಿರಲಿಲ್ಲ’ ಎಂದು ಅವರು ಹೇಳಿದರು.

ವಾರ್ ಕೌನ್ಸಿಲ್ ರಚನೆ

ಐತಿಹಾಸಿಕ ಕಿತ್ತೂರು ನೆಲದಲ್ಲಿ 1930ರಲ್ಲಿ ನೇಮಿನಾಥ ಮುನವಳ್ಳಿ ನೇತೃತ್ವದಲ್ಲಿ ‘ವಾರ್‌ ಕೌನ್ಸಿಲ್’ ಸಂಘಟನೆ ಸ್ಥಾಪಿಸಲಾಗಿತ್ತು. ಸಂಘಟನೆಯಲ್ಲಿದ್ದ ರಾಮಚಂದ್ರ ನಾಯ್ಕ, ವೀರಭದ್ರಪ್ಪ(ಅಜ್ಜಪ್ಪ) ಮಾರಿಹಾಳ, ಹನುಮಂತಾಚಾರ್ಯ ಮಿಟ್ಟಿಮನಿ, ರಂಗನಾಥ  ಮೊಸಳಿ, ಸಂಗನಬಸಪ್ಪ ಶರಣ್ಣವರ, ನರಸಿಂಹಚಾರ್ಯ ಭಾರದ್ವಾಜ, ಹನುಮಂತಾಚಾರ್ಯ ಕಟ್ಟಿ, ಭಾವುರಾವ್ ಪಾಗಾದ, ಚಂದ್ರಯ್ಯ ವಸ್ತ್ರದ, ನೇಮಿನಾಥ ಇಂಗಳೆ, ಶಂಕರ ಪದಕಿ, ದೊಂಡಿಭಾ ಪದಕಿ, ಭೀಮಪ್ಪ ಯಲಿಗಾರ, ಗುರುಸಿದ್ಧಯ್ಯ ತಿಮ್ಮಾಪುರ, ನಾನಾಸಾಬ್ ಸರದಾರ, ಚನ್ನಯ್ಯ ವಿಭೂತಿ, ನಿಂಗಪ್ಪ ಕಲ್ಮಠ, ಬೈಲಪ್ಪ ಬಳಿಗಾರ, ನಾಗಪ್ಪ ಹಣಗಿ, ಕಲ್ಲಪ್ಪ ಹಣಗಿ, ಶಂಕ್ರೆಪ್ಪ ಮೋರಕರ, ರುದ್ರಪ್ಪ ಹೊಂಗಲ, ಜೋತೆಪ್ಪ ಸರ್ವದೆ, ಗುರುನಾಥ ಪತ್ತಾರ, ಹುಸೇನಸಾಬ್ ಅರಬ್, ಇಮಾಮಸಾಬ್ ಬಸಾಪುರ, ಗೌಸುಸಾಬ್ ಹೊಂಗಲ, ಹುಸೇನಸಾಬ್ ಬೇಪಾರಿ, ಶೆಟ್ಟೆಪ್ಪ ವಡ್ಡರ, ತಿಮ್ಮಪ್ಪ ವಡ್ಡರ ಸೇರಿ ಅನೇಕ ಹೋರಾಟಗಾರರು ಇದರಲ್ಲಿದ್ದರು.

‘ಮಹಾಬಳೇಶ್ವರಪ್ಪ ಮುತ್ತೂರು, ಪಂಡಿತ ನರಸಿಂಹಾಚಾರ್ಯ ಪುಣೇಕರ, ರಂಗಪ್ಪ ನಾಯ್ಕ, ಗುರುಭಟ್ ಜೋಶಿ ಸೇರಿದಂತೆ ಅನೇಕ ಹಿರಿಯರು ಸ್ವಾತಂತ್ರ್ಯ ಅಂದೋಲನಕ್ಕೆ ಹೆಚ್ಚು ಶಕ್ತಿ ತುಂಬಿದ್ದರು’ ಎಂದು ಅಂದಿನ ದಿನಗಳ ಮೆಲುಕು ಹಾಕಿದರು ಸ್ವಾತಂತ್ರ್ಯ ಹೋರಾಟಗಾರರ ಮನೆತನದ ಗುಂಡಣ್ಣ ನಾಯ್ಕ.

ಸಂಭ್ರಮದ ಆ ದಿನ…

‘1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತಕ್ಕೆ ಸ್ವಾತಂತ್ರ್ಯ ಘೋಷಣೆಯಾದ ಆ ಸಂದರ್ಭ ಪಂಜರು ಕಿತ್ತು ಹಾರಿ ಹೋದ ಹಕ್ಕಿಯಂತಾಗಿದ್ದರು ದೇಶದ ಜನತೆ. ಇಡೀರಾತ್ರಿ ಅಂದು ದೇಶ ‘ಭಾರತ್ ಮಾತಾಕಿ ಜೈ’ ಎಂಬ ಘೋಷಣೆಯಲ್ಲಿ ಮುಳುಗಿತ್ತು. ಎಲ್ಲಿ ನೋಡಿದರೂ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಪಡುತ್ತಿದ್ದ ಕ್ಷಣವದು. ಮುಂಬೈ ನಗರದಲ್ಲಿ ಬಸ್‌, ರೈಲ್ವೆಗಳಲ್ಲಿ ಉಚಿತವಾಗಿ ಸಂಚರಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು’ ಎಂದು ತಂದೆ ರಾಮಚಂದ್ರ ಅವರು ಹೇಳಿದ ಸ್ಮರಣೀಯ ಕ್ಷಣವನ್ನು ಗುಂಡಣ್ಣ ಹಂಚಿಕೊಂಡರು.

1930ರ ಆಸುಪಾಸಿನಲ್ಲಿ ಕಿತ್ತೂರಿನ ಜನಸಂಖ್ಯೆ 4500 ಇತ್ತು. ಇದರಲ್ಲಿ ಎಲ್ಲ ಜಾತಿಯ ಜನರು ಸೇರಿ 45ಕ್ಕೂ ಅಧಿಕ ಯೋಧರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು ದಾಖಲೆಯಾಗಿದೆ.
–ಪ್ರಭು ಮಾರಿಹಾಳ ಸ್ವಾತಂತ್ರ್ಯ ಹೋರಾಟಗಾರ ಕುಟುಂಬದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT