ಗಾಳಿಪಟ ಉತ್ಸವ ಜ.19ರಿಂದ

7
ಈ ಬಾರಿ ಮಾಲಿನಿ ಸಿಟಿಯಲ್ಲಿ ಆಯೋಜನೆ

ಗಾಳಿಪಟ ಉತ್ಸವ ಜ.19ರಿಂದ

Published:
Updated:
Prajavani

ಬೆಳಗಾವಿ: ‘ಈ ಬಾರಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಇಲ್ಲಿನ ಬಿ.ಎಸ್. ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯ ಖಾಲಿ ಜಾಗದಲ್ಲಿ ಜ. 19ರಿಂದ 22ರವರೆಗೆ ಆಯೋಜಿಸಲಾಗಿದೆ’ ಎಂದು ಉತ್ಸವದ ರೂವಾರಿ, ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತಿಳಿಸಿದರು.

‘9ನೇ ವರ್ಷದ ಈ ಉತ್ಸವದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ 20 ಮಂದಿ ವಿದೇಶಿಯರು ಹಾಗೂ ದೇಶದ ವಿವಿಧ ರಾಜ್ಯಗಳ 21 ಮಂದಿ ಪರಿಣಿತರು ಪಾಲ್ಗೊಂಡು, ಗಾಳಿಪಟಗಳನ್ನು ಹಾರಿಸಲಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘40 ಮಳಿಗೆಗಳು, 25 ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ, ಸಿಂಗಾಪುರ, ಮಲೇಷಿಯಾ, ಜರ್ಮನಿ, ಅಮೆರಿಕ, ಇಟಲಿ ಮೊದಲಾದ ಕಡೆಗಳಿಂದ ಪತಂಗ ಪರಿಣತರು ಭಾಗವಹಿಸುವರು’ ಎಂದು ಹೇಳಿದರು.

‘ಉತ್ಸವವು ನಗರದ ವಾಣಿಜ್ಯ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಅಲ್ಲದೇ, ಯುವಜನರು, ಮಕ್ಕಳು ಹಾಗೂ ಮಹಿಳೆಯರು ತಮ್ಮ ಕಲೆ ಮತ್ತು ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ’ ಎಂದು ವಿವರಿಸಿದರು.

‘ಯುವಕ, ಯುವತಿಯರಿಗಾಗಿ ಯುವಜನೋತ್ಸವ ಹಮ್ಮಿಕೊಳ್ಳಲಾಗಿದೆ. ಭಾಷಣ, ಸಂವಾದ, ಚರ್ಚೆ, ನೃತ್ಯ, ಗುಂಪು ನೃತ್ಯ, ಗಾಯನ, ಫ್ಯಾಷನ್ ಷೋ, ಪ್ರತಿಭಾನ್ವೇಷಣೆ, ಡೋಲ್ ತಾಶೆ ಮೊದಲಾದ ಸ್ಪರ್ಧೆಗಳು ನಡೆಯಲಿವೆ. ಹುಬ್ಬಳ್ಳಿ, ಧಾರವಾಡ, ವಿಜಯಪುರ, ಉತ್ತರ ಕನ್ನಡ, ಬಾಗಲಕೋಟೆ, ಮಂಗಳೂರು, ಕೊಲ್ಹಾಪುರ, ಸಾಂಗ್ಲಿ ಹಾಗೂ ಗೋವಾದ ವಿವಿಧ 45 ಕಾಲೇಜುಗಳಿಂದ 1200 ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಈ ಬಾರಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಡಿಜೆ ಕಾರ್ಯಕ್ರಮವನ್ನು ಜ. 19ರಂದು ಸಂಜೆ ಹಮ್ಮಿಕೊಳ್ಳಲಾಗಿದೆ. ಸಾವಯವ ಅಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಜ.22ರಂದು ಸಿಡಿಮದ್ದುಗಳ ಪ್ರದರ್ಶನ ನಡೆಯಲಿದೆ’ ಎಂದು ತಿಳಿಸಿದರು.

‘ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಬಲೂನ್ ಉತ್ಸವ ನಡೆಯಲಿದೆ. ಮಕ್ಕಳಿಗೆ ಉಚಿತವಾಗಿ ಗಾಳಿಪಟಗಳನ್ನು ನೀಡಲಾಗುವುದು. ಅವರಿಗೆ ಗುಂಪು ನೃತ್ಯ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ. 11 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಈಚೆಗೆ ಶಾಲಾ ಮಕ್ಕಳಿಗೆ ನಡೆಸಿದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬೈಸಿಕಲ್ ಮೊದಲಾದ ಬಹುಮಾನಗಳನ್ನು ಜ. 21ರಂದು ನೀಡಲಾಗುವುದು’ ಎಂದು ಹೇಳಿದರು.

‘ಇಲ್ಲಿಗೆ ಪೂರ್ವಭಾವಿಯಾಗಿ, ಜ. 17 ಹಾಗೂ 18ರಂದು ಗೋವಾದಲ್ಲಿ 4ನೇ ಬಾರಿಗೆ ಹಾಗೂ ಜ. 22 ಮತ್ತು 23ರಂದು ಹುಬ್ಬಳ್ಳಿಯಲ್ಲಿ 2ನೇ ಬಾರಿಗೆ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿದೆ’ ಎಂದರು.

ಸಂಘಟಕರಾದ ಅಶೋಕ ನಾಯಕ, ಚೈತನ್ಯ ಕುಲಕರ್ಣಿ, ಗಣೇಶ ಮಳಲಿಕರ, ದೀಪಕ ಗೋಜಗೆಕರ, ಸತೀಶ ಕುಲಕರ್ಣಿ, ಸಂದೇಶ ಕಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !