ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಮಾತು ಕಡಿಮೆ, ಕೆಲಸ ಹೆಚ್ಚು ಮಾಡುವೆ: ಜಗದೀಶ ಶೆಟ್ಟರ್‌

ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಹೊಸ ಶೆಕೆ ಆರಂಭ, ‘ಪ್ರಜಾವಾಣಿ’ ಜತೆ ಮನದಾಳದ ಮಾತು
Published : 15 ಜೂನ್ 2024, 5:10 IST
Last Updated : 15 ಜೂನ್ 2024, 5:10 IST
ಫಾಲೋ ಮಾಡಿ
Comments
ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಅವರ ಪಾಲಿಗೆ ಈಗ ಹೊಸ ಶೆಕೆ ಆರಂಭವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಜನರೂ ಹೊಸ ಹೆಜ್ಜೆ ಇಟ್ಟಿದ್ದಾರೆ.  ನಾಲ್ಕು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿದ್ದ ಅವರು, ಈಗ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದ್ದಾರೆ. ಬೆಳಗಾವಿ ಕ್ಷೇತ್ರದ ಅಭಿವೃದ್ಧಿಗೆ ಕನಸು ಕಟ್ಟಿಕೊಂಡಿರುವ ಶೆಟ್ಟರ್‌ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರ

ಮೊದಲ ಪ‍್ರಯತ್ನದಲ್ಲೇ ಗೆದ್ದಿದ್ದೀರಿ. ಹೇಗೆನಿಸುತ್ತಿದೆ?

ತುಂಬಾ ಖುಷಿಯಾಗಿದೆ. ಚುನಾವಣೆ ಪ್ರಚಾರಕ್ಕೆ ಕಡಿಮೆ ಸಮಯವಿತ್ತು. ಆದರೆ, ಪಕ್ಷದ ನಾಯಕರು, ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿದು, ಮತದಾರರ ಮನೆ–ಮನೆಗೆ ತಲುಪಿದರು. ಅಲ್ಲದೆ, ಪ್ರತಿಪಕ್ಷದವರು ತೋರಿಸಿದ ಹಣ ಬಲ ಮತ್ತು ಅಧಿಕಾರದ ಬಲವನ್ನು ಮತದಾರರೂ ತಿರಸ್ಕರಿಸಿದರು. ಈ ಚುನಾವಣೆಯಷ್ಟೇ ಅಲ್ಲ. ಹಿಂದಿನ ಎಲ್ಲ ಲೋಕಸಭೆ ಚುನಾವಣೆಗಳಲ್ಲೂ ಬೆಳಗಾವಿ ಕ್ಷೇತ್ರದ ಎಲ್ಲ ಭಾಷೆಗಳ, ಎಲ್ಲ ಸಮುದಾಯಗಳ ಮತದಾರರು, ರಾಷ್ಟ್ರೀಯತೆಗೆ ಮಹತ್ವ ಕೊಟ್ಟು ಮತ ಚಲಾಯಿಸಿದ್ದಾರೆ. ಈ ಬಾರಿಯೂ ಅದು ಮುಂದುವರಿದ ಕಾರಣ, ನನಗೆ ಗೆಲುವು ದಕ್ಕಿತು.

ಪ್ರ

ದೊಡ್ಡ ಗೆಲುವಿನ ನಿರೀಕ್ಷೆ ಇತ್ತೆ?

ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸವಿತ್ತು. ನಾನು ನಾಮಪತ್ರ ಸಲ್ಲಿಸುವಾಗ ಅಪಾರ ಸಂಖ್ಯೆಯಲ್ಲಿ ಜನ ಸೇರಿದರು. ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ಪಾಲ್ಗೊಂಡಿದ್ದ ಪ್ರಚಾರ ಸಭೆಯಲ್ಲಿ 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದರು. ಇದರಿಂದ ಕಣದ ಚಿತ್ರಣವೇ ಬದಲಾಯಿತು. ಈ ಹಿಂದೆ ನಾಲ್ಕು ಬಾರಿ ಸಂಸದರಾಗಿದ್ದ ಸುರೇಶ ಅಂಗಡಿ ಅವರಿಗೆ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಯಾವ ರೀತಿ ಬೆಂಬಲ ವ್ಯಕ್ತವಾಗುತ್ತಿತ್ತೋ, ಅಂಥದ್ದೇ ಬೆಂಬಲ ನನಗೂ ಸಿಕ್ಕಿತು. ಬೆಳಗಾವಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಆರರಲ್ಲಿ ಬಿಜೆಪಿಗೆ ಮುನ್ನಡೆ ದೊರೆಯಿತು. ಯಾರೂ ನಿರೀಕ್ಷೆ ಮಾಡಲಾರದಷ್ಟು ಹೆಚ್ಚಿನ(1.78 ಲಕ್ಷ) ಮತಗಳ ಅಂತರದ ಗೆಲುವು ನನ್ನದಾಯಿತು.

ಪ್ರ

ಯಾವ ಭರವಸೆಗಳಿಗೆ ಮೊದಲು ರೂಪ ಸಿಗಲಿದೆ?

ಬೆಳಗಾವಿ ಕ್ಷೇತ್ರ ಮಾದರಿಯಾಗಿ ಅಭಿವೃದ್ಧಿಪಡಿಸಬೇಕು ಎನ್ನುವ ಸಂಕಲ್ಪ ನನ್ನದು. ಕ್ಷೇತ್ರದ ಸುಧಾರಣೆಗೆ ಪೂರಕವಾಗಿ ಹಲವು ಕನಸುಗಳಿವೆ. ಈಗ ಪ್ರಗತಿಯಲ್ಲಿರುವ ಕೇಂದ್ರದ ಯೋಜನೆಗಳ ಪ್ರಗತಿ ಪರಿಶೀಲಿಸುತ್ತೇನೆ. ಏನೇ ಸಮಸ್ಯೆಗಳಿದ್ದರೂ ಬಗೆಹರಿಸಿ, ಕಾಮಗಾರಿಗೆ ವೇಗ ನೀಡುತ್ತೇನೆ. ಮುಖ್ಯವಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತು ನೀಡುತ್ತೇನೆ. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬಲ್ಲ ಕೈಗಾರಿಕೆಗಳನ್ನು ತರಲು ಯತ್ನಿಸುತ್ತೇನೆ. ಕೈಗಾರಿಕೆಗಳ ಸ್ಥಾಪನೆಗಾಗಿ ಬೆಳಗಾವಿ ತಾಲ್ಲೂಕಿನಲ್ಲಿರುವ ರಕ್ಷಣಾ ಇಲಾಖೆಗೆ ಸೇರಿದ ಜಮೀನು ಪಡೆಯುವತ್ತ ಶ್ರಮಿಸುತ್ತೇನೆ. ಅಭಿವೃದ್ಧಿ ಕೆಲಸಗಳನ್ನು ಚುರುಕುಗೊಳಿಸಿ, ಅಲ್ಪಾವಧಿಯಲ್ಲಿ ನಾನು ಏನು ಎಂಬುದನ್ನು ತೋರಿಸುತ್ತೇನೆ.

ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌
ಪ್ರ

ಪ್ರವಾಸೋದ್ಯಮದ ಬೆಳವಣಿಗೆಗೆ ಒತ್ತು ನೀಡುತ್ತೀರಾ?

ಗೋಕಾಕ ಜಲಪಾತ ಸೇರಿದಂತೆ ಬೆಳಗಾವಿ ಕ್ಷೇತ್ರದ ಎಲ್ಲ ಪ್ರವಾಸಿತಾಣಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತೇನೆ. ಸವದತ್ತಿಯ ಯಲ್ಲಮ್ಮನಗುಡ್ಡಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅದನ್ನು ಇನ್ನಷ್ಟು ಆಕರ್ಷಣೀಯ ಪ್ರವಾಸಿತಾಣವಾಗಿ ರೂಪಿಸಲು ಶ್ರಮಿಸುತ್ತೇನೆ. ಪ್ರವಾಸೋದ್ಯಮ ಚಟುವಟಿಕೆಗೆ ಬಲ ತುಂಬುತ್ತೇನೆ.

ಪ್ರ

ಸಚಿವ ಸ್ಥಾನದ ನಿರೀಕ್ಷೆ ಇತ್ತೆ?

ಕೆಲಸ ಮಾಡಲು ಮಂತ್ರಿ ಸ್ಥಾನವೇ ಸಿಗಬೇಕು ಅಂತೇನಿಲ್ಲ. ಸಚಿವನಾಗಿ ಏನೇನು ಕೆಲಸ ಮಾಡಬೇಕಿತ್ತೋ, ಅವುಗಳನ್ನೆಲ್ಲ ಸಂಸದನಾಗಿಯೇ ಮಾಡುತ್ತೇನೆ. ಬಿಜೆಪಿ ಮಾತ್ರವಲ್ಲ; ಎಲ್ಲ ಪಕ್ಷಗಳ ಶಾಸಕರನ್ನು ಒಗ್ಗೂಡಿಸಿಕೊಂಡೇ ಅಭಿವೃದ್ಧಿಯತ್ತ ಹೆಜ್ಜೆ ಇರಿಸುತ್ತೇನೆ. ಇಷ್ಟು ದಿನ ಭರವಸೆ ನೀಡಿ ಗೆದ್ದಿದ್ದೇವೆ. ಈಗ ಕೇವಲ ಭರವಸೆ ನೀಡುವ ದಿನಗಳಿಲ್ಲ. ಕೆಲಸ ಮಾಡಿ ತೋರಿಸುವ ಸಮಯ ಬಂದಿದೆ.

ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌
ಪ್ರ

ಮೊದಲ ಮೂರು ಆದ್ಯತೆಗಳೇನು?

ಸುರೇಶ ಅಂಗಡಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ವೇಳೆ ಬೆಳಗಾವಿ– ಚನ್ನಮ್ಮನ ಕಿತ್ತೂರು– ಧಾರವಾಡ ನೇರ ರೈಲ್ವೆ ಮಾರ್ಗ ನಿರ್ಮಾಣ ಯೋಜನೆ ಮಂಜೂರಾಗಿತ್ತು. ಈಗ ಅದರ ಭೂಸ್ವಾಧೀನ ಪ್ರಕ್ರಿಯೆಗೆ ಸಮಸ್ಯೆಯಾಗಿದೆ. ಅದನ್ನು ಆದ್ಯತೆ ಮೇಲೆ ಬಗೆಹರಿಸಿ ಕಾಮಗಾರಿ ಆರಂಭಿಸುತ್ತೇನೆ. ಜತೆಗೆ ಕಳಸಾ– ಬಂಡೂರಿ ನಾಲೆ ಯೋಜನೆಗಿರುವ ತೊಡಕುಗಳನ್ನು ನಿವಾರಿಸಲು ಯತ್ನಿಸುತ್ತೇನೆ. ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೇಲ್ದರ್ಜೆಗೇರಿಸಲು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತೇನೆ. ಬೆಳಗಾವಿಯಿಂದ ವಿವಿಧ ಮಹಾನಗರಗಳಿಗೆ ಹೆಚ್ಚಿನ ವಿಮಾನಸೇವೆ ಒದಗಿಸುವತ್ತ ಕ್ರಮ ವಹಿಸುತ್ತೇನೆ.

ಪ್ರ

ಹುಬ್ಬಳ್ಳಿ ಶೆಟ್ಟರ್‌ ಬೇರೆ; ಬೆಳಗಾವಿ ಶೆಟ್ಟರ್‌ ಬೇರೆ...

ಬೆಳಗಾವಿ ಹುಬ್ಬಳ್ಳಿ ಎರಡೂ ಕಡೆ ರಾಜಕಾರಣ ಮಾಡುತ್ತೀರಾ? –ಬೆಳಗಾವಿಯಲ್ಲಿ ಈಗ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಸ್ವಂತ ಮನೆ ನಿರ್ಮಿಸುವ ವಿಚಾರವಿದ್ದು ಜಾಗ ಹುಡುಕುತ್ತಿದ್ದೇನೆ.  ಇಲ್ಲಿಯೇ ಇದ್ದುಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತೇನೆ. ಹುಬ್ಬಳ್ಳಿ ಶೆಟ್ಟರ್‌ ಬೇರೆ. ಬೆಳಗಾವಿಯ ಶೆಟ್ಟರ್‌ ಅವರೇ ಬೇರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT