ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಬಿಜೆಪಿ ಅಭ್ಯರ್ಥಿಗೆ ಹುಮ್ಮಸ್ಸು ತುಂಬಿದ ಯಡಿಯೂರಪ್ಪ

ಚುನಾವಣಾ ಪ್ರಚಾರ ಆರಂಭಿಸಿದ ಜಗದೀಶ ಶೆಟ್ಟರ್‌, ಒಡಕು ಬಿಟ್ಟು ಬಂದ ಮುಖಂಡರು
Published 27 ಮಾರ್ಚ್ 2024, 15:57 IST
Last Updated 27 ಮಾರ್ಚ್ 2024, 15:57 IST
ಅಕ್ಷರ ಗಾತ್ರ

ಬೆಳಗಾವಿ: ಮಂಗಳವಾರ ರಾತ್ರಿಯೇ ಬೆಳಗಾವಿಗೆ ಬಂದು ನೆಲೆಸಿದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ; ಬೆಳಕಾಗುವಷ್ಟರಲ್ಲಿ ಕಾರ್ಯಕರ್ತರು, ನಾಯಕರನ್ನು ಒಗ್ಗೂಡಿಸಿದರು. ಪರಿಣಾಮ, ಬುಧವಾರ ಬೆಳಿಗ್ಗೆ ಮೊದಲಬಾರಿಗೆ ನಗರಕ್ಕೆ ಬಂದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಅವರಿಗೆ ಅದ್ದೂರಿ ಸ್ವಾಗತ ಕೋರಿದರು. ಬೃಹತ್‌ ಪ್ರಮಾಣದ ಬೈಕ್‌ ರ್‍ಯಾಲಿ ನಡೆಸಿ ಅಖಾಡ ರಂಗೇರಿಸಿದರು.

ಇಲ್ಲಿನ ಕೋಟೆ ಹೆಬ್ಬಾಗಿಲಲ್ಲಿರುವ ದುರ್ಗಾಮಾತೆಗೆ ಪೂಜೆ ಸಲ್ಲಿಸುವ ಮೂಲಕ ಜಗದೀಶ ಶೆಟ್ಟರ್‌ ಭರ್ಜರಿ ಪ್ರಚಾರಕ್ಕೆ ನಾಂದಿ ಹಾಡಿದರು. ಅಪಾರ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಬೈಕ್‌, ಸ್ಕೂಟರ್‌, ಕಾರ್‌ಗಳ ಮೂಲಕ ನಗರದಲ್ಲಿ ಸಂಚರಿಸಿದರು.

ಯಡಿಯೂರಪ್ಪ ಅವರು ಕೋಟೆ ಆವರಣಕ್ಕೆ ಬರುತ್ತಿದ್ದಂತೆಯೇ ಜೈ ಶ್ರೀರಾಮ್‌ ಘೋಷಣೆಗಳು ಮೊಳಗಿದವು. ‘ಅಬ್‌ ಕಿ ಬಾರ್‌ ಚಾರ್‌ ಸೌ ಪಾರ್‌’, ‘ಹರ್‌ ಘರ್‌ ಮೋದಿ’, ‘ಔರ್ ಏಕ್‌ಬಾರ್‌ ಮೋದಿ...’ ಘೋಷಣೆಗಳು ನಿರಂತರ ಮೊಳಗಿದವು. ಬಿಜೆಪಿ ಧ್ವಜ, ಭಗವಾಧ್ವಜಗಳನ್ನು ದ್ವಿಚಕ್ರ ವಾಹನಗಳಿಗೆ ಕಟ್ಟಿಕೊಂಡು, ತಲೆಗೆ ಕೇಸರಿ ಪೇಟ ಹಾಕಿಕೊಂಡು ಮೆರವಣಿಗೆ ನಡೆಸಿದರು.

ಉರಿಬಿಸಿಲನ್ನೂ ಲೆಕ್ಕಿಸದೇ ಯಡಿಯೂರಪ್ಪ, ಶೆಟ್ಟರ್, ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್, ಮಾಜಿ ಶಸಕರಾದ ಅನಿಲ ಬೆನಕೆ, ಜಗದೀಶ ಮೆಟಗುಡ್ಡ, ಸಂಜಯ ಪಾಟೀಲ, ಮುಖಂಡ ಶಂಕರಗೌಡ ಪಾಟೀಲ ತೆರೆದ ವಾಹನ ಏರಿದರು. ಸಂಸದೆ ಮಂಗಲಾ ಅಂಗಡಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಮೇಯರ್ ಸವಿತಾ ಕಾಂಬಳೆ, ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಸುತಾರ, ಗ್ರಾಮಾಂತರ ಜಿಲ್ಲಾ ಘಟಜದ ಅಧ್ಯಕ್ಷ ಸುಭಾಷ ಪಾಟೀಲ ಬೈಕ್ ಸಂಚಾರ ಮಾಡಿದರು.

ಅಲ್ಲಿಂದ ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ, ಡಾ.ಅಂಬೇಡ್ಕರ್‌, ಛತ್ರಪತಿ ಶಿವಾಜಿ, ಛತ್ರಪತಿ ಸಂಭಾಜಿ, ಬಸವೇಶ್ವರ ಪುತ್ಥಳಿಗೆ ಶೆಟ್ಟರ್‌ ಮಾಲಾರ್ಪಣೆ ಮಾಡಿದರು. ಉರಿ ಬಿಸಿಲಿನ ಕಾರಣ ಯಡಿಯೂರಪ್ಪ ಅವರು ಚನ್ನಮ್ಮ ವೃತ್ತದಿಂದ ಕಾರ್‌ನಲ್ಲಿ ತೆರಳಿದರು.

ಈ ವೇಳೆ ಮಾತನಾಡಿದ ಶೆಟ್ಟರ್, ‘ಬೆಳಗಾವಿಗೆ ಬಂದ ಮೊದಲ ದಿನವೇ ಬಹಳ ಅದ್ದೂರಿ ಸ್ವಾಗತ ಸಿಕ್ಕಿದೆ. ಇಂಥ ಸಂಭ್ರಮ ಹಿಂದೆ ನಾನು ಕಂಡಿರಲಿಲ್ಲ. ಅಪಾರ ಸಂಖ್ಯೆಯ ಯುವಜನರು, ಅಭಿಮಾನಿಗಳು ಸೇರಿದ್ದು ಬಿಜೆಪಿಯ ಸಾಮರ್ಥ್ಯಕ್ಕೆ ಸಾಕ್ಷಿ. ಯಡಿಯೂರಪ್ಪ ಅವರು ಬಂದು ಆಶೀರ್ವಾದ ಮಾಡಿದ್ದಾರೆ. ಗೆಲುವು ನಿಶ್ಚಯವಾಗಿದೆ’ ಎಂದರು.

‘ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಸುರೇಶ ಅಂಗಡಿ ನಾಲ್ಕು ಬಾರಿ ಗೆದ್ದು ಅಭಿವೃದ್ಧಿ ಮಾಡಿದ್ದಾರೆ. ಮಂಗಲಾ ಅಂಗಡಿ ಅವರು ಉಪಚುನಾವಣೆಯಲ್ಲಿ ಗೆದ್ದು ಸ್ಮಾರ್ಟ್‌ಸಿಟಿ, ರೈಲು ನಿಲ್ದಾಣ ಅಭಿವೃದ್ಧಿ ಮಾಡಿದ್ದಾರೆ. ಜನ ಇವುಗಳನ್ನು ಗಮನಿಸಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT