ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ಜೈನ ಮುನಿ ನಂದಿ ಮಹಾರಾಜ ಸ್ವಾಮೀಜಿಯ ದೇಹ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆ!

ಮಠದಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಮೇಲೆ ಕೊಲೆ ಆರೋಪ: ಸಾಲ ವಾಪಸ್‌ ಕೇಳಿದ್ದಕ್ಕೆ ಕೃತ್ಯದ ಶಂಕೆ
Published 8 ಜುಲೈ 2023, 10:54 IST
Last Updated 8 ಜುಲೈ 2023, 10:54 IST
ಅಕ್ಷರ ಗಾತ್ರ

ಕಟಕಬಾವಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ನಂದಿಪರ್ವತ ಆಶ್ರಮದ ಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಶವ ಕತ್ತರಿಸಿದ ಸ್ಥಿತಿಯಲ್ಲಿ, ರಾಯಬಾಗ ತಾಲ್ಲೂಕಿನ ಕಟಕಬಾವಿಯ ಕೊಳವೆಬಾವಿಯಲ್ಲಿ ಶನಿವಾರ ಪತ್ತೆಯಾಗಿದೆ.

ಕಟಕಬಾವಿ ಹೊರವಲಯದ ಕಬ್ಬಿನ ಗದ್ದೆಯಲ್ಲಿರುವ ಕೊಳವೆಬಾವಿಯಲ್ಲಿ ಅವರ ಶವ ಎಸೆಯಲಾಗಿತ್ತು. ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಿ, ಚೀಲದಲ್ಲಿ ಹಾಕಿ ಕೊಳವೆಬಾವಿಯೊಳಗೆ ಹಾಕಲಾಗಿತ್ತು. ಮಾಹಿತಿ ಆಧಾರದಲ್ಲಿ ಶೋಧ ನಡೆಸಿದ ಪೊಲೀಸರು, ನಿರಂತರ 10 ತಾಸು ಕಾರ್ಯಾಚರಣೆ ನಡೆಸಿ ಶವದ ತುಂಡುಗಳನ್ನು ಪತ್ತೆ ಮಾಡಿದರು.

‘ಬೋರ್‌ವೆಲ್‌ನ ಸುಮಾರು 25 ಅಡಿ ಆಳದಲ್ಲಿ ಒಂದು ಸೀರೆ, ಒಂದು ಟವಲ್‌ ಸಿಕ್ಕಿತು. 30 ಅಡಿ ಆಳದಲ್ಲಿ ಮುನಿಶ್ರೀ ಅವರ ದೇಹದ ಭಾಗಗಳು ಸಿಕ್ಕಿವೆ. ಕೊಲೆಯನ್ನು ಹೇಗೆ ಮಾಡಲಾಗಿದೆ, ಏಕೆ ಮಾಡಲಾಗಿದೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ತನಿಖೆ ಬಳಿಕ ನೀಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದರು.

ಪತ್ತೆಯಾಗಿದ್ದು ಹೇಗೆ?: ಕೊಲೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿ ಗಳನ್ನು ವಶಕ್ಕೆ ಪಡೆಯಲಾಗಿದೆ. ಮುನಿಶ್ರೀ ಅವರೊಂದಿಗೆ ಒಬ್ಬ ಆರೋಪಿ ಸಂಪರ್ಕದಲ್ಲಿದ್ದ. ಹಿರೇಕೋಡಿಯ ಆಶ್ರಮದಲ್ಲಿಯೇ ಗುರುವಾರ (ಜುಲೈ 6) ರಾತ್ರಿ ಮುನಿ ಮಹಾರಾಜರನ್ನು ಕೊಲೆ ಮಾಡಿದ್ದ. ಇನ್ನೊಬ್ಬ ಆರೋಪಿ ಶವವನ್ನು ಕಟಕಬಾವಿಯವರೆಗೆ ಸಾಗಿಸಲು ನೆರವಾಗಿದ್ದ. ತನಿಖೆಯಲ್ಲಿ ಕೊಲೆ ವಿಚಾರ ಬಯಲಿಗೆ ಬಂತು. ಎಂದು ಮೂಲಗಳು ಹೇಳಿವೆ

ಗುರುವಾರ ರಾತ್ರಿಯಿಂದಲೇ ಮುನಿಶ್ರೀ ಅವರು ಕಾಣೆಯಾಗಿದ್ದರು. ಅವರು ಮಲಗುವ ಕೋಣೆಯಲ್ಲೇ ದಂಡ, ಕಮಂಡಲ ಮುಂತಾದ ಸಾಮಗ್ರಿಗಳು ಪತ್ತೆಯಾಗಿದ್ದವು. ಆಶ್ರಮದ ಮುಖಂಡರು ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮುನಿ ಅವರೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ವಿಚಾರಣೆ ಮಾಡುವಾಗ ಮುಖ್ಯ ಆರೋಪಿ ಸಿಕ್ಕಿಬಿದ್ದ. ‘ಆಶ್ರಮದ ಪಕ್ಕದಲ್ಲಿಯೇ ಆರೋಪಿ ಕೃಷಿ ಕೆಲಸ ಮಾಡಿಕೊಂಡಿದ್ದ. ಮುನಿ ಅವರ ಸೇವೆ ಮಾಡುವುದಾಗಿ ಹೇಳಿ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ. ಸುಮಾರು ಆರು ವರ್ಷಗಳಿಂದ ಅವರ ಜೊತೆಗಿದ್ದ. ತನಗೆ ಕಷ್ಟವಿದೆ ಎಂದು ಹೇಳಿ ಮುನಿ ಅವರ ಟ್ರಸ್ಟ್‌ನಿಂದ ಸಾಲ ಪಡೆದಿದ್ದ. ಈ ಹಣವನ್ನು ವಾಪಸ್‌ ನೀಡುವಂತೆ ಮುನಿಶ್ರೀ ಪದೇಪದೇ ಕೇಳಿದ್ದರಿಂದ, ಕೋಪಗೊಂಡ ಆರೋಪಿ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

‘ಕೊಲೆ ಮಾಡಿದ ಆರೋಪಿ ಮರಳಿ ಆಶ್ರಮಕ್ಕೆ ಬಂದಿದ್ದ. ಎರಡು ದಿನಗಳಿಂದ ಮುನಿಗಳನ್ನು ಹುಡುಕಾಡಿದಂತೆ ನಾಟಕ ಮಾಡಿದ್ದ’ ಎಂದು ಮುನಿಶ್ರೀ ಅವರ ಪೂರ್ವಾಶ್ರಮದ ಸಂಬಂಧಿ ಪ್ರದೀಪ ನಂದಗಾಂವ ಮಾಹಿತಿ ನೀಡಿದರು.

‘ಜೈನ ಮುನಿಗಳು ಜಗತ್ತಿಗೆ ಶಾಂತಿ, ಅಹಿಂಸೆ ಸಂದೇಶ ನೀಡಿದವರು. ಇತರ ಧರ್ಮದವರಿಗೂ ಆಶ್ರಮದಲ್ಲಿ ಆಶ್ರಯ ನೀಡಿದ್ದರು. ಅವರ ಸಹಾಯವನ್ನು ದುರುಪಯೋಗ ಮಾಡಿಕೊಂಡು ಕೊಲೆ ಮಾಡಲಾಗಿದೆ. ಸಲ್ಲೇಖನ, ಸಮಾಧಿ ಸ್ಥಿತಿಯ ಮೂಲಕ ಪ್ರಾಣ ಬಿಡಲು ಇಚ್ಛಿಸಿದ್ದರು. ಅಂಥವರನ್ನು ಬರ್ಬರವಾಗಿ ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಕೊಡಿಸಬೇಕು’ ಎಂದು ಸಮಾಜದ ಮುಖಂಡರಾದ ವೀಣಾ ಪಟ್ಟಣಖೋಡಿ ಆಗ್ರಹಿಸಿದರು.

ಅಪಾರ ಭಕ್ತ ವೃಂದ ಹೊಂದಿದ್ದ ಮುನಿಶ್ರೀ ಹತ್ಯೆಯಿಂದಾಗಿ ಹಿರೇಕೋಡಿಯಲ್ಲಿ ನೀರವ ಮೌನ ಆವರಿಸಿದೆ. ಆಶ್ರಮದಲ್ಲಿ ಮುಖಂಡರು, ಕೆಲಸದವರು ದುಃಖ ತಾಳದೇ ಕಣ್ಣೀರು ಹಾಕಿದರು.

ಮುಂಜಾಗ್ರತಾ ಕ್ರಮವಾಗಿ ಹಿರೇ ಕೋಡಿ ಹಾಗೂ ಕಟಕಬಾವಿಯಲ್ಲಿ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದೆ.

ದಿಗಂಬರರಾಗಿ 25 ವರ್ಷಗಳ ಸೇವೆ

ಹಿರೇಕೋಡಿ: ಕಾಮಕುಮಾರ ನಂದಿ ಮಹಾರಾಜ ಅವರು ಸನ್ಯಾಸತ್ವ ಸ್ವೀಕರಿಸಿ ಸುಮಾರು 25 ವರ್ಷ ಕಳೆದಿವೆ. ಹಿರೇಕೋಡಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ 13 ವರ್ಷಗಳ ಆಚೆ ನಂದಿ ಪರ್ವತ ಎಂಬ ಆಶ್ರಮ ಸ್ಥಾಪಿಸಿದ ಮುನಿಗಳು, ಹಂತ ಹಂತವಾಗಿ ಅಭಿವೃದ್ಧಿಪಡಿಸಿದ್ದಾರೆ. ಅಥಣಿ ತಾಲ್ಲೂಕಿನ ಖವಟಕೊಪ್ಪ ಗ್ರಾಮದವರು. ಅವರ ಪೂರ್ವಾಶ್ರಮದ ಹೆಸರು ಭರಮಪ್ಪ ಭೀಮಪ್ಪ ಉಗಾರ. 1967ರಲ್ಲಿ ಅವರು ಜನಿಸಿದ್ದು, ಅವರಿಗೆ 7 ಜನ ಸಹೋದರರು, ಮೂರು ಜನ ಸಹೋದರಿಯರಿದ್ದು, ಇಬ್ಬರು ಸಹೋದರರು ತೀರಿಕೊಂಡಿದ್ದಾರೆ.

ಬಿ.ಇ ಪದವಿ ಪಡೆದ ಅವರು 22ನೇ ವರ್ಷದಲ್ಲಿ ಅಧ್ಯಾತ್ಮದತ್ತ ಒಲವು ತೋರಿ ಅಕಲುಜ್ದಲ್ಲಿ ಕುಂತುಸಾಗರ ಮಹಾರಾಜರಿಂದ ಸನ್ಯಾಸ ದೀಕ್ಷೆ ಪಡೆದರು. ದೆಹಲಿ, ಹಿಮಾಲಯ, ಡೆಹರಾಡೂನ್ ಮೊದಲಾದೆಡೆ ಸಂಚರಿಸಿ ಧರ್ಮ ಪ್ರಸಾರ ಮಾಡಿದ್ದಾರೆ. ಕನ್ನಡ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಪ್ರಾವೀಣ್ಯ ಹೊಂದಿದ್ದ ಅವರು ಹಲವು ಧಾರ್ಮಿಕ ಗ್ರಂಥಗಳನ್ನೂ ರಚಿಸಿದ್ದಾರೆ.

ಇಂದು ಅಂತ್ಯಸಂಸ್ಕಾರ

‘ಕಾಮಕುಮಾರ ನಂದಿ ಮಹಾರಾಜರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿಗೆ ಸಾಗಿಸಲಾಗಿದೆ. ಹೀಗಾಗಿ, ಅವರ ಅಂತ್ಯಸಂಸ್ಕಾರವನ್ನು ಹಿರೇಕೋಡಿಯ ಆಶ್ರಮದಲ್ಲಿ ಭಾನುವಾರ ಮಧ್ಯಾಹ್ನದ ವೇಳೆಗೆ ಮುಗಿಸಲಾಗುವುದು’ ಎಂದು ನಂದಿಪರ್ವತ ಆಶ್ರಮ ಟ್ರಸ್ಟ್‌ನ ಅಧ್ಯಕ್ಷ ಡಾ.ಭೀಮಪ್ಪ ಉಗಾರೆ ಹೇಳಿದರು.

ಉಪವಾಸಕ್ಕೆ ನಿರ್ಧಾರ

ಹುಬ್ಬಳ್ಳಿ: ‘ಜೈನಮುನಿ ಕಾಮಕುಮಾರ ನಂದಿ‌ ಸ್ವಾಮೀಜಿ ಹತ್ಯೆ ಖಂಡನೀಯ. ಜೈನಮುನಿಗಳಿಗೆ ರಕ್ಷಣೆ ಸಿಗುವವರೆಗೂ ಆಮರಣ ಉಪವಾಸ ನಡೆಸುತ್ತೇನೆ’ ಎಂದು ವರೂರ ನವಗ್ರಹ ತೀರ್ಥ ಕ್ಷೇತ್ರದ 108 ಆಚಾರ್ಯ ಗುಣಧರ ನಂದಿ ಮಹಾರಾಜರು ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೈನರು ಶಾಂತಿಪ್ರಿಯರು. ಇಂತಹ ಸಮಾಜದ ಸ್ವಾಮೀಜಿಯ ಬರ್ಬರ ಹತ್ಯೆ ತೀವ್ರ ನೋವು ತಂದಿದೆ’ ಎಂದು ಕಣ್ಣೀರಿಟ್ಟರು.

‘ಸರ್ಕಾರ ನಮ್ಮಂತಹ ಅಲ್ಪಸಂಖ್ಯಾತರನ್ನು ಕಡೆಗಣಿಸಿದೆ. ಜೈನ ಬಸದಿಗಳು, ಜೈನಮುನಿಗಳು, ಜೈನ ಸಮಾಜಕ್ಕೆ ಸುರಕ್ಷತೆ ಇಲ್ಲವಾಗಿದೆ. ಜೈನಮುನಿಗಳ ಸುರಕ್ಷತೆ ಬಗ್ಗೆ ಮುಖ್ಯಮಂತ್ರಿಗಳು ಅಥವಾ ಅಧಿಕಾರಿಗಳು ಲಿಖಿತವಾಗಿ ಭರವಸೆ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT