ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಯೋಜನೆ: ಸಮಿತಿಯಿಂದ ಪರಿಶೀಲನೆ

Last Updated 19 ಮಾರ್ಚ್ 2021, 19:12 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ): ಕಳಸಾ ಬಂಡೂರಿ ಯೋಜನಾ ಪ್ರದೇಶವಾದ ತಾಲ್ಲೂಕಿನ ಕಣಕುಂಬಿಗೆ ಶುಕ್ರವಾರ ಭೇಟಿ ನೀಡಿದ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ನೀರಾವರಿ ಇಲಾಖೆಗಳ ಮೂವರು ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳನ್ನು ಒಳಗೊಂಡ ಜಂಟಿ ಪರಿಶೀಲನಾ ಸಮಿತಿಯು ಸ್ಥಳ ಪರಿಶೀಲನೆ ನಡೆಸಿತು.

ಕರ್ನಾಟಕದಿಂದ ನವಿಲುತೀರ್ಥ ಜಲಾಶಯದ ಎಸ್‌ಇ ಕೃಷ್ಣೋಜಿರಾವ್, ಗೋವಾದ ಎಂ.ಕೆ. ಪ್ರಸಾದ್‌ ಮತ್ತು ಮಹಾರಾಷ್ಟ್ರದ ವಿಜಯಕುಮಾರ ಥೋರಟ್ ಅವರನ್ನು ಒಳಗೊಂಡ ಸಮಿತಿಯು ಕಣಕುಂಬಿ ಪ್ರವಾಸಿ ಮಂದಿರದ ಹಿಂಭಾಗ ಮತ್ತು ಮಾವುಲಿ ದೇವಸ್ಥಾನದ ಮುಂಭಾಗದಲ್ಲಿ ಕರ್ನಾಟಕ ಸರ್ಕಾರದಿಂದ ನಿರ್ಮಿಸಿರುವ ಕಾಲುವೆಯನ್ನು ವೀಕ್ಷಿಸಿತು.

ಬಳಿಕ ಪ್ರವಾಸಿ ಮಂದಿರದಲ್ಲಿ ಮಹದಾಯಿ ಮತ್ತು ಕಳಸಾ ಯೋಜನೆಗಳ ನೀಲನಕ್ಷೆ ಹಾಗೂ ಕಾಮಗಾರಿಯ ಕಡತ ಪರಿಶೀಲಿಸಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿತು.

ಕರ್ನಾಟಕವು ಈಗಾಗಲೇ ಕಳಸಾ ನೀರನ್ನು ತಿರುಗಿಸಿಕೊಂಡಿದೆ ಎಂಬ ಗೋವಾದ ಆರೋಪದ ಹಿನ್ನೆಲೆಯಲ್ಲಿ ಜಂಟಿ ಸಮಿತಿ ರಚಿಸಿ ಪರಿಶೀಲಿಸಲು ಮತ್ತು ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಈ ಪ್ರಕ್ರಿಯೆ ನಡೆಯಿತು.

‘ಸಮಿತಿಯ ಸದಸ್ಯರಿಗೆ ಮಹದಾಯಿ, ಕಳಸಾ ಯೋಜನೆಯ ನೀಲನಕ್ಷೆ ಪ್ರತಿ ನೀಡಿ ಕಾಮಗಾರಿಯ ಕುರಿತು ಅಗತ್ಯ ಮಾಹಿತಿ ನೀಡಲಾಗಿದೆ. ನ್ಯಾಯಾಲಯದ ಸೂಚನೆಯಂತೆ ಸಮಿತಿಯ ಸದಸ್ಯರ ಭೇಟಿಗೆ ಅಗತ್ಯ ವ್ಯವಸ್ಥೆ ಮತ್ತು ಭದ್ರತೆ ಕಲ್ಪಿಸಲಾಯಿತು. ಸಂಜೆವರೆಗೂ ಚರ್ಚೆ ನಡೆಯಿತು’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸಮಿತಿಯ ಭೇಟಿ ಕಾಲಕ್ಕೆ ಮಾಧ್ಯಮದವರಿಗೆ ಅವಕಾಶ ಇರಲಿಲ್ಲ. ವಿಡಿಯೊ ಮಾಡಲು ಅಥವಾ ಫೋಟೊ ತೆಗೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ‘ಸುಪ್ರೀಂ ಕೋರ್ಟ್‌ ಆದೇಶದಂತೆ ನಡೆಸಿದ ಪರಿಶೀಲನೆಯ ವರದಿಯನ್ನು ನೇರವಾಗಿ ನ್ಯಾಯಾಲಯಕ್ಕೇ ಸಲ್ಲಿಸಲಾಗುವುದು. ಮುಂದಿನ ವಿಚಾರಣೆಯು ಏ.4ಕ್ಕೆ ನಿಗದಿಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT