ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಜಾತ್ರೆಗೆ ಗಡಿ ನಾಡು ಸಜ್ಜು

ಕಾಗವಾಡದಲ್ಲಿ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.30ರಿಂದ
Last Updated 29 ಜನವರಿ 2021, 13:48 IST
ಅಕ್ಷರ ಗಾತ್ರ

ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಜ. 30 ಹಾಗೂ 31ರಂದು ಹಮ್ಮಿಕೊಂಡಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗಡಿ ನಾಡು ಕಾಗವಾಡ ಸಜ್ಜಾಗಿದೆ. ನಾಡು–ನುಡಿಯ ಮಹತ್ವ ಸಾರಲು ಕ್ಷಣಗಣನೆ ಆರಂಭವಾಗಿದೆ.

ಪ್ರತ್ಯೇಕ ತಾಲ್ಲೂಕು ರಚನೆಯಾದ ನಂತರ ಕಾಗವಾಡದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ನೆರೆಯ ಮಹಾರಾಷ್ಟ್ರದಿಂದ ಗಡಿ ತಗಾದೆ ಪ್ರಸ್ತಾಪ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವ ಈ ಸಂದರ್ಭದಲ್ಲಿ ಅಕ್ಷರ ಉತ್ಸವ ನಡೆಯುತ್ತಿರುವುದು ಹೆಚ್ಚಿನ ಮಹತ್ವ ಪಡೆದಿದೆ. ಅದರಲ್ಲೂ ಗಡಿಯಲ್ಲಿ ಕನ್ನಡದ ಅಭಿಮಾನ ಜಾಗೃತಿಗೊಳಿಸುವುದಕ್ಕಾಗಿ ಕಹಳೆ ಮೊಳಗಿಸಲು ಉದ್ದೇಶಿಸಲಾಗಿದೆ. ಆ ಭಾಗದವರೇ ಆಗಿರುವ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸಮ್ಮೇಳನಾಧ್ಯಕ್ಷರಾಗಿ ಸಮ್ಮೇಳನವನ್ನು ಮುನ್ನೆಡೆಸಲಿದ್ದಾರೆ.

ಮಲ್ಲಿಕಾರ್ಜುನ ವಿದ್ಯಾಲಯದ ಆವರಣದಲ್ಲಿ ಭವ್ಯ ವೇದಿಕೆ ಸಜ್ಜಗೊಂಡಿದೆ. ಪಟ್ಟಣದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕನ್ನಡ ಬಾವುಟಗಳು ಹಾರಾಡುತ್ತಿದ್ದು, ಉತ್ಸವದ ಮೆರುಗು ಹೆಚ್ಚಿಸುತ್ತಿವೆ. ಇದರೊಂದಿಗೆ ಇಡೀ ಪಟ್ಟಣ ಕನ್ನಡ ಕಂಪು ಬೀರುತ್ತಿದೆ. ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಗೌಡ ಕಾಗೆ ನೇತೃತ್ವದ ತಂಡಗಳು ಸಮ್ಮೇಳನದ ಯಶಸ್ಸಿಗೆ ಶ್ರಮಿಸಿವೆ. ಸಾವಿರಾರು ಮಂದಿ ಕನ್ನಡ ಪ್ರೇಮಿಗಳು ಪಾಲ್ಗೊಳ್ಳಲಿದ್ದು, ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಬೆಳಿಗ್ಗೆ 8ಕ್ಕೆ ರಾಷ್ಟ್ರ ಧ್ವಜ, ನಾಡ ಧ್ವಜ ಹಾಗೂ ಪರಿಷತ್ತಿನ ಧ್ವಜಾರೋಹಣ ನೆರವೇರಲಿದೆ. ಬೆಳಿಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ಕನ್ನಡ ಮಾತೆ ಭುವನೇಶ್ವರಿ ದೇವಿಯ ಮೆರವಣಿಗೆ ಕಳೆಗಟ್ಟಲಿದೆ. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಕೃಷ್ಣಾಬಾಯಿ ಬಂಡು ಉದ್ಘಾಟಿಸುವರು. ಗ್ರಾಮ ಪಂಚಾಯ್ತಿ ಆವರಣದಿಂದ ಹನುಮಾನ್ ಮಂದಿರ, ಮುಖ್ಯ ರಸ್ತೆ, ಚನ್ನಮ್ಮ ವೃತ್ತದ ಮೂಲಕ ಮಲ್ಲಿಕಾರ್ಜುನ ವಿದ್ಯಾಲಯದವರೆಗೆ ಮೆರವಣಿಗೆ ನಡೆಯಲಿದೆ. ವಿವಿಧ ಕಲಾತಂಡದವರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಶಾಲಾ–ಕಾಲೇಜುಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಸಂಘ– ಸಂಸ್ಥೆಗಳವರು, ನಾಗರಿಕರರು ಪಾಲ್ಗೊಳ್ಳಲಿದ್ದಾರೆ.

ಉದ್ಘಾಟನಾ ಸಮಾರಂಭ ಬೆಳಿಗ್ಗೆ 11ಕ್ಕೆ ನಡೆಯಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಚಾಲನೆ ನೀಡುವರು. ಮಲ್ಲಿಕಾರ್ಜುನ ಗುರುದೇವಾಶ್ರಮದ ಬಸವಲಿಂಗ ಸ್ವಾಮೀಜಿ, ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ, ಮಲ್ಲಿಕಾರ್ಜುನ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕ್ಷೇತ್ರದ ಶಾಸಕರೂ ಆಗಿರುವ ಜವಳಿ ಸಚಿವ ಶ್ರೀಮಂತ ಪಾಟೀಲ ಅಧ್ಯಕ್ಷತೆ ವಹಿಸುವರು. ಪುಸ್ತಕ ಮಳಿಗೆ, ಚಿತ್ರಕಲಾ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸುವರು. ಸಮ್ಮೇಳನದ ಸಂಚಿಕೆ ಹಾಗೂ ಗ್ರಂಥಗಳನ್ನು ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಮತ್ತು ಈರಣ್ಣ ಕಡಾಡಿ ಬಿಡುಗಡೆ ಮಾಡುವರು.

ಎರಡು ದಿನಗಳವರೆಗೆ ವಿವಿಧ ವಿಷಯಗಳ ಬಗ್ಗೆ ಗೋಷ್ಠಿಗಳು, ನಾಡು–ನುಡಿ ಸಂರಕ್ಷಣೆಗೆ ಚಿಂತನೆ, ಕವಿಗೋಷ್ಠಿ, ಮಹಿಳಾ ಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ ಹಾಗೂ ಬಹಿರಂಗ ಅಧಿವೇಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT