ಮಂಗಳವಾರ, ಸೆಪ್ಟೆಂಬರ್ 21, 2021
27 °C
ಗಡಿಯಲ್ಲಿನ ಕನ್ನಡ ಹೋರಾಟಗಾರರ ಆತಂಕ

ಬೆಳಗಾವಿ: ಪಕ್ಷಗಳ ಪ್ರತಿ‌ಷ್ಠೆಯಲ್ಲಿ ಕನ್ನಡಕ್ಕೆ ಹೊಡೆತ?

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಇದೇ ಪ್ರಥಮ ಬಾರಿಗೆ ಚಿಹ್ನೆ ಮೇಲೆ ಅಧಿಕೃತವಾ‌ಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಪ್ರಮುಖ ರಾಜಕೀಯ ಪಕ್ಷಗಳು ಘೋಷಿಸಿವೆ. ಇವರ ನಡುವಿನ ತುರುಸಿನ ಸ್ಪರ್ಧೆಯಲ್ಲಿ ಗಡಿಯಲ್ಲಿ ಕನ್ನಡದ ಅಸ್ಮಿತೆ ಧಕ್ಕೆಯಾಗಬಾರದು ಹಾಗೂ ಕರ್ನಾಟಕದ ಹಿತ ಬಲಿಯಾಗಬಾರದು ಎನ್ನುವ ಕಳಕಳಿ ಇಲ್ಲಿನ ಕನ್ನಡ ಹೋರಾಟಗಾರರದಾಗಿದೆ.

ಒಂದಿಲ್ಲೊಂದು ವಿಷಯದಲ್ಲಿ ತಗಾದೆ ತೆಗೆದು, ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನೆಯನ್ನು ನಿಯಂತ್ರಣದಲ್ಲಿಡಲು ಮಹಾನಗರಪಾಲಿಕೆಯಲ್ಲಿ ಕನ್ನಡಿಗರ ಅಧಿಪತ್ಯ ಅತ್ಯಗತ್ಯವಾಗಿದೆ. ಅದಕ್ಕಾಗಿ ಹಿಂದಿನಿಂದಲೂ ಇಲ್ಲಿ ಭಾಷೆ ಆಧಾರದ ಮೇಲೆಯೇ ಚುನಾವಣೆ ನಡೆದುಕೊಂಡು ಬಂದಿದೆ. ಈವರೆಗೆ ಚಿಹ್ನೆ ಮೇಲೆ ಹಣಾಹಣಿ ನಡೆದ ಉದಾಹರಣೆ ಇಲ್ಲ.

ಈ ಸ್ಥಳೀಯ ಸಂಸ್ಥೆಯಲ್ಲಿ ಕನ್ನಡ ಭಾಷಿಕರನ್ನು ಗೆಲ್ಲಿಸಿಕೊಳ್ಳಲು ಎಲ್ಲ ಪಕ್ಷದವರೂ ಒಗ್ಗಟ್ಟಾಗಿ ಬೆಂಬಲ ಕೊಡುತ್ತಿದ್ದರು. ನಾಡವಿರೋಧಿ ಧೋರಣೆ ತಳೆಯುವವರ ವಿರುದ್ಧ ತೊಡೆ ತಟ್ಟುತ್ತಿದ್ದರು. ಈ ಬಾರಿ ಪಕ್ಷವನ್ನು ಗೆಲ್ಲಿಸಿಕೊಳ್ಳುವ ಭರದಲ್ಲಿ ‘ಕನ್ನಡ ಅಸ್ಮಿತೆ’ಯು ನಗಣ್ಯವಾಗುವುದೇ ಎನ್ನುವುದು ಕನ್ನಡಭಾಷಿಕರ ಆತಂಕವಾಗಿದೆ.

ಬಲ ಕೊಡಬೇಡಿ

ಪ್ರಸ್ತುತ ಎಂಇಎಸ್‌ಗೆ (ಇದೊಂದು ರಾಜಕೀಯ ಪಕ್ಷವಲ್ಲ) ಇಲ್ಲಿ ‘ಬಲ’ ಇಲ್ಲ. ದಕ್ಷಿಣ, ಉತ್ತರ ಹಾಗೂ ಗ್ರಾಮೀಣ ಕ್ಷೇತ್ರಗಳಲ್ಲಿನ (ಕೆಲವು ‍ಬಡಾವಣೆಗಳನ್ನು ಒಳಗೊಂಡಿದೆ) ಜನಪ್ರತಿನಿಧಿಗಳು ಇಬ್ಬರು ಬಿಜೆಪಿ ಹಾಗೂ ಒಬ್ಬರು ಕಾಂಗ್ರೆಸ್‌ನವರಾಗಿದ್ದಾರೆ. ಎಂಇಎಸ್‌ ಈಗ ಹಲ್ಲಿಲ್ಲದ ಹಾವಿನಂತಾಗಿದೆ. ಬಿಜೆಪಿ–ಕಾಂಗ್ರೆಸ್‌ ಜಗಳದಲ್ಲಿ ಎಂಇಎಸ್ ಬೆಂಬಲಿಗರು ಗೆದ್ದುಕೊಳ್ಳಲು ಅವಕಾಶ ಆಗದಂತೆ ನೋಡಿಕೊಳ್ಳುವ ಸವಾಲು ಕೂಡ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಕ್ಷಗಳ ಕಾರ್ಯಸೂಚಿಯು ಮುನ್ನೆಲೆಗೆ ಬಂದು ಭಾಷೆ, ಗಡಿ, ಕನ್ನಡ ಅಸ್ಮಿತೆಯ ವಿಚಾರಗಳು ಹಿನ್ನೆಲೆಗೆ ಸರಿದರೆ ನಾಡವಿರೋಧಿಗಳಿಗೆ ‘ಬಲ’ ಕೊಟ್ಟಂತಾಗುತ್ತದೆ ಎನ್ನಲಾಗುತ್ತಿದೆ.

ಮಹಾನಗರಪಾಲಿಕೆ ಎದುರು ಕನ್ನಡ ಹೋರಾಟಗಾರರು ಕನ್ನಡ ಬಾವುಟ ಹಾರಿಸಿದ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು, ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಂಇಎಸ್–ಶಿವಸೇನೆ ಸಂಘಟನೆಗಳು ಸಿದ್ಧತೆ ನಡೆಸಿವೆ. ರಾಜಕೀಯ ಪಕ್ಷಗಳಿಂದ ಹೊರತಾಗಿದ್ದ ಮಹಾನಗರಪಾಲಿಕೆಯಲ್ಲಿ ಈ ಬಾರಿ ಪಕ್ಷಗಳ ನಡುವಿನ ಹಣಾಹಣಿಯಿಂದ ನಮಗೆ ಲಾಭವಾಗಬಹುದು ಎನ್ನುವ ಲೆಕ್ಕಾಚಾರ ಈ ಸಂಘಟನೆಗಳದ್ದಾಗಿದೆ.

ಭಾಷಾ ಸೂಕ್ಷ್ಮತೆಯನ್ನು ಹೊಂದಿರುವ ಇಲ್ಲಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬೀಸಲಿರುವ ಹೊಸ ಗಾಳಿಯು ಯಾರಿಗೆ ಸಿಹಿ ಮತ್ತು ಯಾರಿಗೆ ಕಹಿ ಹೊತ್ತು ತರಲಿದೆ ಎನ್ನುವ ಕುತೂಹಲವೂ ಮೂಡಿದೆ.

ಚರ್ಚೆ ನಡೆಯುತ್ತಿದೆ

4.28 ಲಕ್ಷ ಮತದಾರರು ಅಭ್ಯರ್ಥಿಗಳ ಜೊತೆಗೆ ರಾಜಕೀಯ ಪಕ್ಷಗಳು ಹಾಗೂ ಎಂಇಎಸ್‌–ಶಿವಸೇನೆಯಂತಹ ಸಂಘಟನೆಗಳ ಭವಿಷ್ಯವನ್ನೂ ನಿರ್ಧರಿಸಲಿದ್ದಾರೆ. ಮರಾಠಿ ಭಾಷಿಕರನ್ನು ಓಲೈಸುವ ಅಭ್ಯರ್ಥಿಗಳು ಗೆಲ್ಲುವುದು ಖಚಿತ. ಈ ಹಾದಿಯಲ್ಲಿ ಕನ್ನಡದ ಸ್ಥಿತಿಗತಿ ಏನಾಗಬಹುದು ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘ಕನ್ನಡ ಸಂಘಟನೆಗಳ ವತಿಯಿಂದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಗೆಲುವೊಂದನ್ನೇ ಮಾನದಂಡವನ್ನಾಗಿ ಮಾಡಿಕೊಂಡು ಪ್ರತಿಷ್ಠೆಯಾಗಿ ಸ್ವೀಕರಿಸಿದರೆ ಶಿವಸೇನೆ ಮತ್ತು ಎಂಇಎಸ್‌ಗೆ ಲಾಭವಾಗುತ್ತದೆ. ಅದಕ್ಕೆ ಅವಕಾಶ ಕೊಡಬಾರದು ಎನ್ನುವುದು ನಮ್ಮ ಮನವಿಯಾಗಿದೆ’ ಎಂದು ಹೇಳಿದರು.

‘ಎಂಇಎಸ್ ವಿರುದ್ಧ ನಿಲುವು ತಳೆಯಲು ಪಕ್ಷಗಳು ಒಗ್ಗಟ್ಟಾಗಬೇಕಾಗುತ್ತದೆ. ಪೈಪೋಟಿಯ ಕಾರಣಕ್ಕೆ ಮತ ವಿಭಜನೆಯಾದರೆ ನಾಡವಿರೋಧಿ ಸಂಘಟನೆಗಳಿಗೆ ಲಾಭವಾಗುವ ಸಾಧ್ಯತೆ ಇದೆ. ಈ ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಕನ್ನಡ ಭಾಷಿಕರ ನಡುವೆಯೇ ಪೈಪೋಟಿ ಸರಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳನ್ನು ಗಮನಿಸಿ ರಾಜಕೀಯ ಪಕ್ಷಗಳಿಗೆ ಪತ್ರ ಬರೆಯಲಾಗುವುದು’ ಎಂದು ತಿಳಿಸಿದರು.

‘ಸದ್ಯ ಎಂಇಎಸ್ ಹಲ್ಲಿಲ್ಲದ ಹಾವಾಗಿದೆ. ಅದಕ್ಕೆ ಶಕ್ತಿ ತುಂಬಲು ‘ಕೊಡುಗೆ’ ಕೊಡಬಾರದು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸೂಕ್ಷ್ಮ ವಿಚಾರಗಳನ್ನು ಕಡೆಗಣಿಸಬಾರದು’ ಎಂಬ ಕೋರಿಕೆ ಅವರದಾಗಿದೆ.

ಬಲಿ ಕೊಡಬಾರದು

ಕರ್ನಾಟಕದ ಪರವಿರುವ ಮರಾಠಿಗರಿಗೆ ನಮ್ಮ ಸ್ವಾಗತವಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಎಚ್ಚರಿಕೆಯ ಹೆಜ್ಜೆ ಇಡಬೇಕು. ಸ್ಪರ್ಧೆಗಾಗಿ ಕರ್ನಾಟಕದ ಹಿತವನ್ನು ಬಲಿ ಕೊಡಬಾರದು.

–ಅಶೋಕ ಚಂದರಗಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

ಮುಖ್ಯಾಂಶಗಳು

ಈವರೆಗೆ ಭಾಷೆ ಮೇಲೆ ಚುನಾವಣೆ

ಪಕ್ಷಗಳ ಪ್ರವೇಶದಿಂದ ಹೊಸ ಗಾಳಿ

ಕನ್ನಡಕ್ಕೆ ಧಕ್ಕೆಯಾಗದಿರಲೆಂಬ ಮನವಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು