ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿಯಮ ಪಾಲಿಸಿದರೆ ಚಿಕ್ಕೋಡಿಗೆ ಜಿಲ್ಲಾ ನ್ಯಾಯಾಲಯ: ಪಿ.ಎಸ್. ದಿನೇಶಕುಮಾರ ಹೇಳಿಕೆ

Published 19 ಫೆಬ್ರುವರಿ 2024, 5:02 IST
Last Updated 19 ಫೆಬ್ರುವರಿ 2024, 5:02 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಚಿಕ್ಕೋಡಿಗೆ ಜಿಲ್ಲಾ ನ್ಯಾಯಾಲಯ ಮಂಜೂರು ಮಾಡಲು ಸಾಧ್ಯವಿದೆ. ಆದರೆ, ಕೆಲವು ನಿಯಮಗಳ ವ್ಯಾಪ್ತಿಗೆ ಈ ಪಟ್ಟಣ ಒಳ‍ಡಬೇಕು. ಆಗ ಜಿಲ್ಲಾ ನ್ಯಾಯಾಲಯ ಸ್ಥಾಪನೆ ಆಗಲಿದೆ’ ಎಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶಕುಮಾರ ಹೇಳಿದರು.

ಪಟ್ಟಣದಲ್ಲಿ ಭಾನುವಾರ ವಕೀಲರ ಸಂಘದ ನೂತನ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ‘1935ರಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಚಿಕ್ಕೋಡಿ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡುವ ಮೂಲಕ ಚಿಕ್ಕೋಡಿ ನ್ಯಾಯಾಲಯಕ್ಕೆ ಐತಿಹಾಸಿಕ ಮಹತ್ವ ತಂದು ಕೊಟ್ಟಿದ್ದಾರೆ’ ಎಂದು ಸ್ಮರಿಸಿದರು.

‘ಕೇಂದ್ರ ಸರ್ಕಾರ ನ್ಯಾಯಾಲಯಗಳಿಗೆ ಸಾಕಷ್ಟು ಅನುದಾನ ನೀಡಿದ್ದು, ವಕೀಲರಿಗೆ ಕಂಪ್ಯೂಟರ್ ಸೇರಿದಂತೆ ನೂತನ ತಂತ್ರಜ್ಞಾನದ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಹೀಗಾಗಿ ವಕೀಲರು ತ್ವರಿತವಾಗಿ ಕೇಸ್ ಮುಗಿಸಿ ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು’ ಎಂದೂ ಅವರು ಕಿವಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ, ‘₹2.5 ಕೋಟಿ ಅನುದಾನದಲ್ಲಿ ವಕೀಲರ ಸಂಘದ ಕಟ್ಟಡವನ್ನು ನಿರ್ಮಾಣ ಮಾಡಲು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಅವರು ಅನುದಾನ ನೀಡಿದ್ದಾರೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ಸಚಿನ ಮಗದುಮ್ ಮಾತನಾಡಿದರು.

ಚಿಕ್ಕೋಡಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಹೇಮಲೇಖಾ, ಅನಿಲ ಕಟ್ಟಿ, ರಾಮಚಂದ್ರ ಹುದ್ದಾರ, ವಿಜಯಕುಮಾರ ಪಾಟೀಲ, ಜಯಶ್ರೀ ದಿನೇಶಕುಮಾರ, ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್.ಎಲ್.ಚವ್ಹಾಣ, ಹರೀಶ ಪಾಟೀಲ, ಆರ್.ಎಚ್.ಅಶೋಕ, ನಾಗೇಶ ಪಾಟೀಲ ಹೈಕೋರ್ಟ್ ರಜಿಸ್ಟ್ರಾರ್ ಆಫ್ ಜನರಲ್ ಕೆ.ಎಸ್. ಭರತಕುಮಾರ, ರಾಜ್ಯ ವಕೀಲರ ಸಂಘದ ಉಪಾಧ್ಯಕ್ಷ ವಿನಯ ಮಾಂಗಲೇಕರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸುನೀಲಕುಮಾರ ಬಳೋಲ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ರಾಜಕುಮಾರ, ಉಪಾಧ್ಯಕ್ಷ ನಂದಕುಮಾರ ದರಬಾರೆ ಮುಂತಾದವರು ಉಪಸ್ಥಿತರಿದ್ದರು.

ಬೆಳಗಾವಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಸ್ವಾಗತಿಸಿದರು. ಎಂ.ಬಿ. ಪಾಟೀಲ ನಿರೂಪಿಸಿದರು. ಎಸ್.ಆರ್. ವಾಲಿ ವಂದಿಸಿದರು.

ಚಿಕ್ಕೋಡಿಯಲ್ಲಿ ಜಿಲ್ಲಾಮಟ್ಟದ ನ್ಯಾಯಾಲಯ ಪ್ರಾರಂಭಿಸಬೇಕು ಹಾಗೂ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಬೇಡಿಕೆ ಹಿಂದಿನಿಂದಲೂ ಇದೆ
ಪ್ರಕಾಶ ಹುಕ್ಕೇರಿ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2
ಈಗ ವಕೀಲರಿಗೆ ವಿಫುಲ ಅವಕಾಶಗಳಿವೆ. ಎಲ್ಲ ನ್ಯಾಯಾಲಯಗಳಿಗೂ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಿ
ಸಚಿನ ಮಗದುಮ್ ಹೈಕೋರ್ಟ್‌ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT