ಗುರುವಾರ , ಮಾರ್ಚ್ 23, 2023
31 °C

ನಮ್ಮ ಸರ್ಕಾರದಲ್ಲಿ ಮಾಫಿಯಾಗಳಿಗೆ ಯಾವುದೇ ಅವಕಾಶವಿಲ್ಲ: ಗೋವಿಂದ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಮಹದಾಯಿ ಯೋಜನೆಯಲ್ಲಿ ಕರ್ನಾಟಕಕ್ಕೆ ಹಂಚಿಕೆಯಾದ ನೀರು ಬಳಸಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ನಮ್ಮ ಪಾಲಿನ ನೀರು ಹಂಚಿಕೆ ಸಂಬಂಧ ಅಧಿಸೂಚನೆ ಆಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ಇರುವುದರಿಂದಾಗಿ ಕಾಮಗಾರಿ ಆರಂಭಿಸಲು ಸಾಧ್ಯವಾಗುತ್ತಿಲ್ಲ. ನ್ಯಾಯಾಲಯದಲ್ಲಿ ನಮ್ಮ ಪರವಾಗಿ ಆಗುವಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನ ನಡೆಸಿದ್ದೇವೆ. ಅಂತರರಾಜ್ಯ ವ್ಯಾಜ್ಯಗಳು ಬಹಳ ಸೂಕ್ಷ್ಮ ವಿಚಾರವಾದ್ದರಿಂದ ಬಗೆಹರಿಸಲು ಸಮಯ ಬೇಕಾಗುತ್ತದೆ. ರೈತರು ಮತ್ತು ಹೋರಾಟಗಾರರು ಕಾಯಬೇಕು ಎಂದು ತಿಳಿಸಿದರು.

‘ಗೆಜೆಟ್‌ನಲ್ಲಿ ಅಧಿಸೂಚನೆ ಪ್ರಕಟವಾಗಿರುವುದರಿಂದಾಗಿ, ಮಹದಾಯಿ ವಿಚಾರದಲ್ಲಿ ನಾವು ಒಂದು ಹೆಜ್ಜೆ ಮುಂದಿದ್ದೇವೆ. ಕೃಷ್ಣಾ, ಮಹದಾಯಿ ವಿಚಾರದಲ್ಲಿ ನಮ್ಮ ಪಾಲಿನ ನೀರು ಉಪಯೋಗಿಸಿಕೊಳ್ಳಲು ಯೋಜನೆ ರೂಪಿಸುವ ನಿಟ್ಟಿನಲ್ಲಿ ಹಿಂದೆ ಮುಂದೆ ನೋಡುವುದಿಲ್ಲ’ ಎಂದರು.

‘ನಾನು ಖಾತೆ ವಹಿಸಿಕೊಂಡು ತಿಂಗಳಾಗಿದೆ. ಈ ಅವಧಿಯಲ್ಲಿ 2 ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ದೆಹಲಿಗೆ ಹೋಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರ ಜೊತೆಗೆ ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ಸಭೆ ಮಾಡಿದ್ದೇವೆ. ಕಾನೂನು ತಜ್ಞರ ಜೊತೆಯೂ ಚರ್ಚಿಸಿದ್ದೇವೆ. ಅಂತರರಾಜ್ಯ ಜಲವಿವಾದಗಳಲ್ಲಿ ನಮ್ಮ ಪರವಾಗಿ ತೀರ್ಪು ಬರುವಂತೆ ವಾದ ಮಾಡುವಂತೆ ನಮ್ಮ ವಕೀಲರಿಗೆ ಮುಖ್ಯಮಂತ್ರಿ ಖಡಕ್ ಸೂಚನೆ ಕೊಟ್ಟಿದ್ದಾರೆ. ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೂ ಕ್ರಮ ವಹಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಿ ಎರಡೂವರೆ ತಿಂಗಳಲ್ಲಿ ಟ್ರಯಲ್ ರನ್ ಆರಂಭಿಸಲಾಗುವುದು’ ತಿಳಿಸಿದರು.

‘ನಮ್ಮ ಸರ್ಕಾರದಲ್ಲಿ ಮಾಫಿಯಾಗಳಿಗೆ ಯಾವುದೇ ರೀತಿಯ ಅವಕಾಶವಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಕರ್ನಾಟಕದ ಒಂದಿಂಚು ನೆಲ, ಹನಿ ನೀರನ್ನೂ ಬಿಟ್ಟು ಕೊಡುವುದಿಲ್ಲ. ಗಡಿ ವಿಚಾರದಲ್ಲಿ ಮಹಾಜನ ವರದಿಯೇ ಅಂತಿಮ. ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಸಂಘ–ಸಂಸ್ಥೆಗಳು ಮಾಡುವ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಶಾಂತಿ ಕದಡುವುದೇ ಕೆಲವರ ಕೆಲಸ. ಅವರು ಇರುವುದೇ ಅದಕ್ಕಾಗಿ. ಅಂಥವರಿಗೆ ಬೆಲೆ ಕೊಡುವ ಅಗತ್ಯವಿಲ್ಲ’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯವರನ್ನು ಟೀಕಿಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಾರನಹಳ್ಳಿ ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಅವರೊಬ್ಬ ನಾಸ್ತಿಕ ಎಂದು ತಿಳಿದುಕೊಂಡಿದ್ದೆ. ಆದರೆ, ಅವರು ಆದಷ್ಟು ಬೇಗ ಮುಖ್ಯಮಂತ್ರಿ ಆಗಬೇಕೆಂದು ಜ್ಯೋತಿಷ ಕೇಳುತ್ತಿರುವ ಬಗ್ಗೆ ಗೊತ್ತಿರಲಿಲ್ಲ ಎಂದು ಲೇವಡಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು