ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮೈ ನವಿರೇಳಿಸಿದ ಗಡಿ ಕನ್ನಡಿಗರ ರಾಜ್ಯೋತ್ಸವ

Published 1 ನವೆಂಬರ್ 2023, 9:20 IST
Last Updated 1 ನವೆಂಬರ್ 2023, 9:20 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿಯಲ್ಲಿ ಬುಧವಾರ ಬೆಳಗಾಗುತ್ತಲೇ ರಾಜ್ಯೋತ್ಸವ ವೈಭವ ಆರಂಭವಾಯಿತು. ನಗರದ ಮೂಲೆಮೂಲೆಯಿಂದ, ಹಳ್ಳಿ– ಪಟ್ಟಣಗಳಿಂದ ಅಪಾರ ಸಂಖ್ಯೆಯ ಕನ್ನಡಾಭಿಮಾನುಗಳು ಬಂದು ಸೇರಿದರು. ಇಲ್ಲಿನ ವೀರರಾಣಿ ಚನ್ನಮ್ಮ ವೃತ್ತದಲ್ಲಿ ಕನ್ನಡಿಗರ ಸಂಭ್ರಮ ಮುಗಿಲು ಮುಟ್ಟಿತು. ಎತ್ತ ನೋಡಿದರೂ ಹಳದಿ– ಕೆಂಪು ಬಾವುಟಗಳ ಹಾರಾಟ, ಶಲ್ಯಗಳ ತೂರಾಟ, ಕಿರೀಟ– ಟೋ‍ಪಿ ಧರಿಸಿದ ಜನಸಾಗರ...

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸಾಕ್ಷಾತ್‌ ಕನ್ನಡ ಕುಲದೇವಿ ಭುವನೇಶ್ವರಿಯೇ ಅವತರಿಸಿದಳು. ಪುಟಾಣಿ ಮಕ್ಕಳಿಂದ ಹಿಡಿದು, ಯುವತಿಯರು, ಯುವಕರು, ಮಹಿಳೆಯರು, ಹಿರಿಯರು ಕೂಡ ಕನ್ನಡ ನಾಡಗೀತೆಗೆ ಸೆಲ್ಯೂಟ್‌ ಮಾಡಿದರು. ರಂಗಗೀತೆ, ಜನಪದ ಹಾಡು, ಸಿನಿಗೇತೆಗಳನ್ನು ಹಾಡಿ ನಲಿದರು. ಯುವಜನರಂತೂ ಎದೆ ನಡುಗಿಸುವಂಥ ಡಿ.ಜೆ ಸೌಂಡಿನ ಸದ್ದಿಗೆ ಕುಣಿದು ಕುಪ್ಪಳಿಸಿದರು. ಎಲ್ಲರಲ್ಲೂ ‘ಕನ್ನಡತನದ ಹುಚ್ಚು’ ಮೈ ನವಿರೇಳುವಂತೆ ಮಾಡಿತು.

ಒಂದೆಡೆ ಸ್ತಬ್ಧಚಿತ್ರಗಳ ಮೆರವಣಿಗೆ, ಮತ್ತೊಂದೆಡೆ ಯುವಜನರ ಹಾಡು– ಕುಣಿತ. ನಗರದ ಮನೆಮನೆಯ ಮೇಲೂ, ಬೀದಿಬೀದಿಗಳಲ್ಲೂ ಹಾರಾಡಿದ ಕನ್ನಡ ಬಾವುಟಗಳ ಸಾಲು, ಕಣ್ಣು ಹಾಯಿಸಿದಷ್ಟೂ ಕಿಕ್ಕಿರಿದು ಸೇರಿದ ಜನ, ತನು– ಮನಗಳಲ್ಲೂ ಮೇಳೈಸಿದ ನಾಡು– ನುಡಿಯ ಸಂಭ್ರಮ.

ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಎತ್ತಿನಬಂಡಿಯಲ್ಲಿ ಭುವನೇಶ್ವರಿಯ ಪ್ರತಿಮೆ ಮೆರವಣಿಗೆ ಮಾಡಲಾಯಿತು. ಇದರೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಣ್ಯ ಇಲಾಖೆ, ಅಂಚೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ವೈವಿಧ್ಯಮಯ ಸ್ತಬ್ಧಚಿತ್ರಗಳ ಮೆರವಣಿಗೆ ಮಾಡಿದವು. ಪಂಪ, ರನ್ನ, ಪೊನ್ನ, ಚಂಪ, ಅಕ್ಕ ಮಹಾದೇವಿ, ಶ್ರೀಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಪುನೀತ್ ರಾಜ್‌ಕುಮಾರ್‌, ಮೈಸೂರು ಅಂಬಾರಿ, ಮೈಸೂರು ಮಹಾರಾಜ, ಯಕ್ಷಗಾನ, ದೈವದ ಕೋಲ... ಹೀಗೆ ನಾನಾ ಬಗೆಯ ರೂಪಕಗಳು ಕಣ್ಮನ ಸೆಳೆದವು.

ಅಸ್ತಿತ್ವದ ಕೇಂದ್ರ ಚನ್ನಮ್ಮ ವೃತ್ತ

ರಾಣಿ ಚನ್ನಮ್ಮ ವೃತ್ತವೇ ಗಡಿ ಕನ್ನಡಿಗರ ಅಸ್ತಿತ್ವ ಕೇಂದ್ರವಾಗಿ ಮಾರ್ಪಟ್ಟಿತು. ನಗರದ ಮೂಲೆಮೂಲೆಯಿಂದ ಯುವಜನರ ಸಂಘಟನೆಗಳು ಲಾರಿ, ಟ್ರ್ಯಾಕ್ಟರ್‌, ಟೆಂಪೊಗಳನ್ನು ಅಲಂಕಾರ ಮಾಡಿ, ಡಾಲ್ಬಿಗಳನ್ನು ಕಟ್ಟಿಕೊಂಡು ಹಾಡುತ್ತ ಕುಣಿಯುತ್ತ ಬಂದು ಚನ್ನಮ್ಮ ವೃತ್ತದಲ್ಲೇ ಸಮಾವೇಶಗೊಂಡರು. ಮಧ್ಯಾಹ್ನ 2ರ ಹೊತ್ತಿಗೆ ಬಿಸಿಲಿನ ಝಳ ಏರಿದಂತೆ ಮೆರವಣಿಗೆ ವೈಭವವೂ ಗಗನಕ್ಕೇರಿತು.

ಮತ್ತೆ ಕೆಲವರು ತಮ್ಮ ಬೈಕು, ಆಟೊಗಳಿಗೆ ಕನ್ನಡ ಅಲಂಕಾರ ಮಾಡಿದರು. ಹಲವರು ಇತಿಹಾಸ ಪುರುಷರ, ಪೌರಾಣಿಕ ಪಾತ್ರಗಳ ವೇಷ ಧರಿಸಿದರು. ಇಕ್ಕೆಲಗಳಲ್ಲಿ ಸೇರಿದ್ದ ಜನ ಅವರೊಂದಿಗೆ ಸೆಲ್ಫಿ– ಫೋಟೊಗಾಗಿ ಮುಗಿಬಿದ್ದರು. ಕನ್ನಡ ಬಾವುಟ, ಕೊರಳಪಟ್ಟಿ, ಹಣೆಪಟ್ಟಿ, ಧ್ವಜಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಮೆರವಣಿಗೆ ಮಾರ್ಗದಲ್ಲಿ ಹಲವರು ಕುಡಿಯುವ ನೀರು, ಪಲಾವ್, ಮಜ್ಜಿಗೆ ನೀಡಿದರು.

ತಡರಾತ್ರಿಯೇ ಸಂಭ್ರಮ

ಮಂಗಳವಾರ ರಾತ್ರಿಯೇ ರಾಣಿ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಜನ ಸೇರಿದರು. ವೃತ್ತಕ್ಕೆ ವಿಶೇಷ ವಿದ್ಯುದ್ದೀಪಾಲಂಕಾರ ಮಾಡಿದ್ದನ್ನು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಉದ್ಘಾಟಿಸಿದರು. ಕಣ್ಮನ ಸೆಳೆಯುವ ದೀಪಾಲಂಕಾರದೊಂದಿಗೆ ಚಿತ್ರ ತೆಗೆಸಿಕೊಳ್ಳಲು ತಡರಾತ್ರಿ 2ರ ಸುಮಾರಿಗೂ ಹಲವು ಜನ ಮುಗಿಬಿದ್ದರು.

ರಾತ್ರಿಯೇ ಯುವಕರು ಚಿತ್ರಗೀತೆಗಳನ್ನು ಹಚ್ಚಿಕೊಂಡು ಕುಣಿದು ಕುಪ್ಪಳಿಸಿದರು.

ಪೊಲೀಸ್‌ ಬಂದೋ ಬಸ್ತ್‌

ರಾಜ್ಯದ ಬೇರೆಬೇರೆ ಕಡೆಗಳಿಂದ ಬಂದು ಸೇರಿದ 3,000ಕ್ಕೂ ಹೆಚ್ಚು ಪೊಲೀಸರು ಬಿಗಿ ಭದ್ರತೆ ಕೈಗೊಂಡರು. ಒಂದೆಡೆ ಎಂಇಎಸ್‌ ‍ಪುಂಡರ ಮೆರವಣಿಗೆ ಸುತ್ತ ಸರ್ಪಗಾವಲು ಹಾಕಿದರೆ, ಇನ್ನೊಂದೆಡೆ ಕನ್ನಡಿಗರ ಸಂಭ್ರಮದಲ್ಲೂ ಕುಂದು ಬಾರದಂತೆ ನೋಡಿಕೊಂಡರು. 300 ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಹಲವು ಡ್ರೋನ್‌ಗಳನ್ನು ಅಳವಡಿಸಿ ಹದ್ದಿನ ಕಣ್ಣಿಟ್ಟು ಕಾದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT