ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ | 312 ಮತಗಟ್ಟೆ, 1600 ಸಿಬ್ಬಂದಿ

Published 6 ಮೇ 2024, 14:07 IST
Last Updated 6 ಮೇ 2024, 14:07 IST
ಅಕ್ಷರ ಗಾತ್ರ

ಖಾನಾಪುರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆಯಲಿರುವ ಚುನಾವಣೆಗೆ ಖಾನಾಪುರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 312 ಮತಗಟ್ಟೆಗಳಿದ್ದು, 2,17,171 ಮತದಾರರಿದ್ದಾರೆ. 3600 ಜನ ಅಂಗವಿಕಲ ಮತದಾರರಿದ್ದು, 8 ಜನ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ 1637 ಜನ 85ಕ್ಕೂ ಹೆಚ್ಚಿನ ವಯೋಮಾನದ ಮತದಾರರಿದ್ದಾರೆ.

ಸೋಮವಾರ ಪಟ್ಟಣದ ಸಿದ್ಧಿವಿನಾಯಕ ಶಾಲೆಯಿಂದ ಇವಿಎಂ ಮತ್ತು ವಿವಿಪ್ಯಾಟ್ ಸೇರಿದಂತೆ ಚುನಾವಣಾ ಪರಿಕರಗಳನ್ನು ಹೊತ್ತ 1600ಕ್ಕೂ ಹೆಚ್ಚು ಸಿಬ್ಬಂದಿ ಮತ್ತು 500 ಪೊಲೀಸರು ತಾವು ಕರ್ತವ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆಗಳಿಗೆ ತೆರಳಿದರು.

ಸ್ವೀಪ್ ಸಮಿತಿ ಅಧ್ಯಕ್ಷೆ ಭಾಗ್ಯಶ್ರೀ ಜಹಗೀರದಾರ ಮಾತನಾಡಿ,  ‘ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ತಲುಪಿಸಲು 40 ಮಾರ್ಗಗಳಲ್ಲಿ 19 ಟ್ರ್ಯಾಕ್ಸ್, 22 ಬಸ್ ಹಾಗೂ 5 ಮಿನಿ ಬಸ್‌ಗಳನ್ನು ಬಳಸಲಾಗಿದೆ. 8 ರಿಂದ 10 ಮತಗಟ್ಟೆಗಳಿಗೆ ಒಬ್ಬರಂತೆ ಒಟ್ಟು 32 ಸೆಕ್ಟರ್ ಅಧಿಕಾರಿಗಳನ್ನು ನೇಮಕಮಾಡಲಾಗಿದೆ’ ಎಂದರು.

‘ಖಾನಾಪುರ ಪಟ್ಟಣದ ಉರ್ದು ಶಾಲೆ, ಲೋಂಡಾ ಮತ್ತು ಪ್ರಭುನಗರ ಶಾಲೆಗಳಲ್ಲಿ ಸಖಿ ಪಿಂಕ್ ಬೂತ್ ತೆರೆಯಲಾಗಿದೆ. ಕೇರವಾಡ ಗ್ರಾಮದಲ್ಲಿ ಯುವ ಮತಗಟ್ಟೆ, ದೇವಲತ್ತಿ, ಲಕ್ಕೆಬೈಲಗಳಲ್ಲಿ ಅಳಗವಿಕಲ ಸ್ನೇಹಿ ಮತಗಟ್ಟೆ, ರುಮೇವಾಡಿ ಮತ್ತು ಹೆಬ್ಬಾಳಗಳಲ್ಲಿ ವಿಶೇಷ ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿದೆ’ ಎಂದು ಹೇಳಿದರು.

ಖಾನಾಪುರ ಠಾಣೆಯ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯ್ಕ ಮಾತನಾಡಿ, ‘ಮಂಗಳವಾರ ನಡೆಯಲಿರುವ ಚುನಾವಣೆಯ ಸಿದ್ಧತೆಗಳನ್ನು ಬೆಳಗಾವಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ ಪರಿಶೀಲನೆ ಮಾಡಿದ್ದು, ಚುನಾವಣೆಗೆ ನೇಮಕಗೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ’ ಎಂದರು.

‘ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಡಿ.ಎಸ್.ಪಿ ಕೇಡರ್‌ ಅಧಿಕಾರಿಯ ನೇತೃತ್ವದಲ್ಲಿ ಮೂವರು ಇನ್‌ಸ್ಪೆಕ್ಟರ್, ಐವರು ಪಿಎಸ್ಐ, 19 ಎಎಸ್ಐ ಸೇರಿದಂತೆ ಗುಜರಾತ್ ಪೊಲೀಸ್, ಕೆ.ಎಸ್.ಆರ್.ಪಿ ಬೆಳಗಾವಿ, ಬೆಳಗಾವಿ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೊಲೀಸರನ್ನು ಚುನಾವಣೆಗೆ ನೇಮಕಗೊಳಿಸಿದ್ದು, ಪೊಲೀಸರು ಚುನಾವಣಾ ಸಿಬ್ಬಂದಿಯೊಂದಿಗೆ ಮತಗಟ್ಟೆಗೆ ತೆರಳಿದ್ದಾರೆ’ ಎಂದು ತಿಳಿಸಿದರು.

ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ತಲಾ 2 ಶಸ್ತ್ರ ಸಜ್ಜಿತ ಪೊಲೀಸರು ಹಾಗೂ ಉಳಿದ ಮತಗಟ್ಟೆಗಳಲ್ಲಿ ತಲಾ 1 ಪೊಲೀಸ್ ಮತ್ತು ಹೋಂ ಗಾರ್ಡ್ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT