ಶನಿವಾರ, ಸೆಪ್ಟೆಂಬರ್ 25, 2021
22 °C
‘ಇಟಲಿ ವಿಶ್ವವಿದ್ಯಾಲಯ’ದವರ ಸಂಸ್ಕೃತಿ ಏನು?: ಈಶ್ವರಪ್ಪ

ನನ್ನ ತಂಟೆಗೆ ಬಂದವರಿಗೆ ಬಿಪಿ, ಶುಗರ್‌ ಸಮಸ್ಯೆ ಬರುತ್ತದೆ: ಕೆ.ಎಸ್‌. ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಳಗಾವಿ: ‘ನಾನು ನಾಗಪುರದ ವಿಶ್ವವಿದ್ಯಾಲಯದನು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಕರೆದಿದ್ದಾರೆ. ಅಲ್ಲಿ ಕಲಿತಿದ್ದರಿಂದಲೇ ಒಳ್ಳೆಯ ಸಂಸ್ಕಾರ ಬೆಳೆಸಿಕೊಂಡಿದ್ದೇನೆ. ಆದ್ದರಿಂದಲೇ ಶಿವಮೊಗ್ಗದ ಜನರು ನನ್ನನ್ನು 5 ಬಾರಿ ಆಯ್ಕೆ ಮಾಡಿದ್ದಾರೆ. ಇಡೀ ಜಗತ್ತು ಮೆಚ್ಚುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಸುಲಭ ಶೌಚಾಲಯಕ್ಕೆ ಇಡಬೇಕು ಎಂದು ಹೇಳುವ ‘ಇಟಲಿ ವಿಶ್ವವಿದ್ಯಾಲಯ’ದವರ ಸಂಸ್ಕೃತಿ ಎಂಥದು? ಅಂತಹ ಹೇಳಿಕೆಯನ್ನು ಕಾಂಗ್ರೆಸ್‌ನವರು ಒಪ್ಪುತ್ತಾರೆಯೇ?.

– ಹೀಗೆ ಕೇಳಿದವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ನಮ್ಮ ನಾಯಕ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ್ದರಿಂದ ರಕ್ತ ಕುದಿಯಿತು. ಆ ಸಿಟ್ಟಿನಲ್ಲಿ ‘ಆ ಪದ’ ಬಳಸಿದ್ದೆ. ಕೂಡಲೇ ವಾಪಸ್ ಪಡೆದಿದ್ದೇನೆ. ಆದರೂ ಕಾಂಗ್ರೆಸ್‌ನವರು ರಾಜಕಾರಣಕ್ಕೆ ಬಳಸಿಕೊಂಡರೆ ಏನು ಮಾಡಲಾದೀತು?’ ಎಂದು ಕೇಳಿದರು.

‘ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ದೀನದಯಾಳ್ ಉಪಾಧ್ಯಾಯ ಮತ್ತು ವೀರ್‌ಸಾವರ್ಕರ್ ಫೋಟೊಗಳಿಗೆ ಮಸಿ ಬಳಿಯುತ್ತೇವೆ ಎನ್ನುವ ಕಾಂಗ್ರೆಸ್‌ನವರ ಸಂಸ್ಕಾರ–ಸಂಸ್ಕೃತಿ ಏನು’ ಎಂದು ಪ್ರಶ್ನಿಸಿದರು.

ಬಿಜೆಪಿ ಜೆಡಿಎಸ್‌ ಜೊತೆಗೆ ಮೃದು ಧೋರಣೆ ತಳೆದಿದೆಯೇ ಎಂಬ ಪ್ರಶ್ನೆಗೆ, ‘ಏನ್‌ ಮಾಡೋಣ? ಕುಮಾರಸ್ವಾಮಿ ಕರ್ಕೊಂಡು ಬಂದು ಹೊಡೆಯೋಕೆ ಆಗುತ್ತದೆಯೇ? ರಾಜಕೀಯ ಪಕ್ಷವಾಗಿ ನಮ್ಮ ಕೆಲಸ ನಾವು ಅವರ ಕೆಲಸ ಅವರು ಮಾಡುತ್ತಿದ್ದಾರೆ. ಜೆಡಿಎಸ್ ಜೊತೆ ಮೈತ್ರಿಯ ಪ್ರಶ್ನೆಯೇ ಬರುವುದಿಲ್ಲ. ನಮ್ಮ ಸರ್ಕಾರ ಅಧಿಕಾರದ ಅವಧಿ ಪೂರೈಸುತ್ತದೆ’ ಎಂದರು.

‘ಈ ಸರ್ಕಾರ ಪತನಗೊಳ್ಳುತ್ತದೆ ಎಂಬ ಕೆಟ್ಟ ಕನಸನ್ನು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಾಣುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಕೇವಲ ಕೆಟ್ಟ ಕನಸುಗಳೇ ಬರುತ್ತಿವೆ’ ಎಂದು ಟೀಕಿಸಿದರು. ‘ಈ ಜನ್ಮದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಬರೆದಿಟ್ಟುಕೊಳ್ಳಿ’ ಎಂದು ಹೇಳಿದರು.

ಕಾಂಗ್ರೆಸ್‌ನವರು ಹೊಲಸು ರಾಜಕಾರಣ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ‘ಅದನ್ನು ಬಾಯಿ ಬಿಟ್ಟು ಹೇಳಬೇಕೇ’ ಎಂದು ಪ್ರಶ್ನಿಸಿದರು.

‘ನನಗೆ ಬಿಪಿ, ಶುಗರ್ ಸಮಸ್ಯೆ ಇಲ್ಲ. ಆದರೆ, ನನ್ನ ತಂಟೆಗೆ ಬಂದವರಿಗೆ ಅದೆಲ್ಲವೂ ಬರುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು