ಶನಿವಾರ, ಸೆಪ್ಟೆಂಬರ್ 25, 2021
24 °C

ಬಿಜೆಪಿ, ಆರ್‌ಎಸ್ಎಸ್‌ ಮೇಲಿನ ಸುಳ್ಳು ಕೇಸ್ ವಾಪಸ್ ಪಡೆದೇ ತೀರುತ್ತೇವೆ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಳಗಾವಿ: ‘ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆದೇ ತೀರುತ್ತೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮವರ ಮೇಲೆ ಹಲವೆಡೆ ಸುಳ್ಳು ಪ್ರಕರಣಗಳನ್ನು ಹಾಕಲಾಗಿದೆ. ಈಗ ನಮಗೂ ಶಕ್ತಿ ಇದೆ. ವಾಪಸ್ ತಗೊತೀವಿ’ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ತೆಗೆಯುತ್ತಾರೆ, ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಓಡಿಸ್ತಾರೆ ಎಂದೆಲ್ಲಾ ಕಾಂಗ್ರೆಸ್‌ನವರು ಹಬ್ಬಿಸಿದ್ದರು. ಎಷ್ಟು ಜನ ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರು? ಮೀಸಲಾತಿ ಕಿತ್ತುಕೊಂಡಿದ್ದೇವೆಯೇ? ವೈದ್ಯಕೀಯ ಶಿಕ್ಷಣದಲ್ಲಿ ಇತರ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಟ್ಟಿದ್ದೇವೆ. ಹಿಂದುಳಿದ ವರ್ಗದವರು ಹಾಗೂ ಪರಿಶಿಷ್ಟರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ಸಿಕ್ಕಿದೆ’ ಎಂದು ಸಮರ್ಥಿಸಿಕೊಂಡರು.

‘ಕಾಂಗ್ರೆಸ್ ಪಕ್ಷದವರು ಏನನ್ನೂ ಮಾಡಿಲ್ಲ ಎನ್ನುವುದಿಲ್ಲ. ಆದರೆ, ರಾಜಕಾರಣಕ್ಕಾಗಿ ಬಿಜೆಪಿಯವರು ಮೀಸಲಾತಿ ವಿರೋಧಿಗಳು ಎನ್ನುವುದು ಸರಿಯೇ?’ ಎಂದು ಕೇಳಿದರು.

‘ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದಾಗ ದಲಿತ ಮುಖ್ಯಮಂತ್ರಿ ಮಾಡಿ ಎಂದು ಸಿದ್ದರಾಮಯ್ಯ ಹೇಳಿದರು. ಪುಕ್ಸಟ್ಟೆ ಹೇಳೋಕೇನು? ಸ್ವಾತಂತ್ರ್ಯ ಬಂದಾಗಿನಿಂದ ಆಡಳಿತ ನಡೆಸಿದ ಕಾಂಗ್ರೆಸ್‌ನವರು ಎಷ್ಟು ಜನ ದಲಿತರನ್ನು ಮುಖ್ಯಮಂತ್ರಿ ಮಾಡಿದರು? ನಾವು ಈಗ ಕಣ್ಣು ಬಿಡುತ್ತಿದ್ದೇವೆ. ನಮಗೆ ಪೂರ್ಣ ಬಹುಮತವನ್ನು ಜನರು ಕೊಟ್ಟಿಲ್ಲ. ಅವರಿವರನ್ನು ತಗೊಂಡು ಸರ್ಕಾರ ರಚಿಸಿದ್ದೇವೆ. ಅವಕಾಶ ಬಂದಾಗ ದಲಿತ ಮುಖ್ಯಮಂತ್ರಿ ಮಾಡೇ ಮಾಡುತ್ತೇವೆ’ ಎಂದು ತಿರುಗೇಟು ನೀಡಿದರು.

‘ದಲಿತರು ನಿಮ್ಮನ್ನು (ಕಾಂಗ್ರೆಸ್‌ನವರನ್ನು) ಬಹಳ ವರ್ಷದಿಂದಲೂ ನಂಬಿ ಮತ ಕೊಟ್ಟರು. ಅವರೀಗ ನಿಮ್ಮಿಂದ ದೂರಾಗುತ್ತಿದ್ದಾರೆ. ಸ್ವಲ್ಪ ಮುಸ್ಲಿಮರು ಕಾಂಗ್ರೆಸ್‌ನವರನ್ನು ಅಂಟಿಕೊಂಡಿದ್ದಾರೆ. ಅವರೂ ಬಿಡುತ್ತಾರೆ. ಮುಂಚೆ ನಮ್ಮದು ಬ್ರಾಹ್ಮಣರ ಪಕ್ಷ ಎಂದು ಕರೆಯುತ್ತಿದ್ದರು. ಈಗ ಇಡೀ ಹಿಂದೂ ಸಮಾಜ ನಮ್ಮ ಜೊತೆಗಿದೆ’ ಎಂದರು.

‘ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಷಯದಲ್ಲಿ ಸಾಮೂಹಿಕ ಚಿಂತನೆ, ಸಾಮೂಹಿಕ ತೀರ್ಮಾನಕ್ಕೆ ಬದ್ಧವಾಗಿರುವೆ’ ಎಂದು ಪ್ರತಿಕ್ರಿಯಿಸಿದರು.

‘ಕೊಲೆ ಮಾಡಿದ್ದರೂ ವಿಚಾರಣೆ ನಂತರವೇ ಶಿಕ್ಷೆ ಕೊಡಲಾಗುತ್ತದೆ. ಸಚಿವೆ ಶಶಿಕಲಾ ಜೊಲ್ಲೆ ಅವರ ವಿರುದ್ಧ ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ. ಹೀಗಾಗಿ, ಅವರ ವಿರುದ್ಧ ತನಿಖೆ ಅಗತ್ಯವಿಲ್ಲ’ ಎಂದು ಸಮರ್ಥಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು