ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡಗಲ್: ಸ್ವಚ್ಛತೆಯೇ ಮರೀಚಿಕೆ, ಊರಲ್ಲಿ ಹೆಜ್ಜೆ ಹೆಜ್ಜೆಗೂ ಸಮಸ್ಯೆ–ಜನರ ಪರದಾಟ

Published 17 ಜನವರಿ 2024, 6:21 IST
Last Updated 17 ಜನವರಿ 2024, 6:21 IST
ಅಕ್ಷರ ಗಾತ್ರ

ರಾಮದುರ್ಗ: ತಾಲ್ಲೂಕಿನ ಇಡಗಲ್‌ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಶೌಚಕ್ಕಾಗಿ ಬಹುತೇಕರು ಬಯಲಿನತ್ತಲೇ ಮುಖಮಾಡುತ್ತಾರೆ. ‘ಊರಲ್ಲಿ ನೈರ್ಮಲ್ಯಕ್ಕೆ ಒತ್ತು ನೀಡಬೇಕು’ ಎನ್ನುವ ಸರ್ಕಾರದ ಆದೇಶ ಗಾಳಿಗೆ ತೂರಲಾಗಿದೆ.

ಗ್ರಾಮ ಪ್ರವೇಶಿಸುವ ಮುನ್ನವೇ, 20ರಿಂದ 25 ಸಾಮೂಹಿಕ ಶೌಚಗೃಹ ನಿರ್ಮಿಸಲಾಗಿದೆ. ಆದರೆ, ಅವು ಬಳಕೆಯಾಗದೆ ಪಾಳು ಬಿದ್ದಿವೆ. ಜನರು ಮುಖ್ಯರಸ್ತೆ ಬದಿಯೇ ಶೌಚಕ್ಕೆ ಹೋಗುತ್ತಿರುವುದರಿಂದ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಜನರು ಮೂಗಿಗೆ ಕರವಸ್ತ್ರ ಕಟ್ಟಿಕೊಂಡೇ ಊರು ಪ್ರವೇಶಿಸುವ ಸ್ಥಿತಿ ನಿರ್ಮಾಣವಾಗಿದೆ.

‘ಹಲವು ವರ್ಷಗಳ ಹಿಂದೆ ನಿರ್ಮಿಸಿದ ಸಾರ್ವಜನಿಕ ಶೌಚಗೃಹಗಳನ್ನು ಬಳಸಲು ಗ್ರಾಮ ಪಂಚಾಯ್ತಿಯವರು ಈವರೆಗೆ ಅನುಮತಿ ಕೊಟ್ಟಿಲ್ಲ. ಕೇಳಿದರೆ ಸಣ್ಣ–ಪುಟ್ಟ ನೆಪ ಹೇಳಿ ದಿನದೂಡುತ್ತಿದ್ದಾರೆ’ ಎಂಬ ಆರೋಪ ಸಾರ್ವಜನಿಕರದ್ದು.

ಅಂತ್ಯಸಂಸ್ಕಾರಕ್ಕೆ ತೊಂದರೆ: ಗ್ರಾಮದಲ್ಲಿನ ಸ್ಮಶಾನಭೂಮಿ ಅವ್ಯವಸ್ಥೆಯ ಆಗರವಾಗಿದ್ದು, ಹೇರಳವಾಗಿ ಗಿಡಗಂಟಿ ಬೆಳೆದಿವೆ. ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಹದಗೆಟ್ಟಿದೆ. ಹಾಗಾಗಿ ಅಂತ್ಯಕ್ರಿಯೆಗಾಗಿ ಹೋಗುವವರು ಪರದಾಡುವಂತಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.

ಊರಲ್ಲಿ ಹರಿದುಬರುವ ಚರಂಡಿ ನೀರನ್ನು ಹಿಡಿದಿಡಲು ಒಂದು ಇಂಗು ಗುಂಡಿ ನಿರ್ಮಿಸಲಾಗಿದೆ. ಆದರೆ, ಅದು ಒಂದು ದಿನದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನೂ ಹೊಂದಿಲ್ಲ. ಹೆಚ್ಚಿನ ನೀರು ಸ್ಮಶಾನದ ತುಂಬೆಲ್ಲ ಹರಡುತ್ತಿದೆ.

ಒಳರಸ್ತೆಗಳು ನಿರ್ಮಾಣವಾಗದ್ದರಿಂದ ಮೋರಿ ನೀರು ಮಣ್ಣಿನ ರಸ್ತೆ ತುಂಬೆಲ್ಲ ಹರಿಯುತ್ತಿದೆ. ಜಲಜೀವನ ಮಿಷನ್‌ ಯೋಜನೆ ಕಾಮಗಾರಿಗಾಗಿ ಗುತ್ತಿಗೆದಾರರು ಎಲ್ಲೆಂದರಲ್ಲಿ ರಸ್ತೆ ಅಗೆದಿದ್ದಾರೆ. ಇದರಿಂದ ರಸ್ತೆ ಕೆಸರುಮಯವಾಗಿ ಮಾರ್ಪಡುತ್ತಿದ್ದು, ಜನರ ಸಂಚಾರಕ್ಕೆ ತೊಡಕಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕವೂ ನಿರುಪಯುಕ್ತವಾಗಿದೆ. ಒಂದೇಒಂದು ಮೂತ್ರಾಲಯವೂ ಇಲ್ಲದ್ದರಿಂದ ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಲ್ಲಲ್ಲಿ ಮಲಿನ ನೀರು ನಿಲ್ಲುತ್ತಿದ್ದು, ಸೊಳ್ಳೆಗಳ ಕಾಟ ವಿಪರೀತವಾಗಿದೆ. ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.

ನಮ್ಮೂರಿನಲ್ಲಿ ಗ್ರಾಮ ಪಂಚಾಯ್ತಿ ಇದ್ದೂ ಇಲ್ಲದಂತಾಗಿದೆ. ಅಭಿವೃದ್ಧಿ ಕೆಲಸ ಕಳಪೆಯಾಗಿವೆ. ಪಂಚಾಯ್ತಿಯವರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ
–ಶಿವಾನಂದ ಬರದೇಲಿ ಗ್ರಾಮಸ್ಥ
ಗ್ರಾಮಸ್ಥರ ಬೇಡಿಕೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಶುಚಿತ್ವಕ್ಕೆ ಆದ್ಯತೆ ನೀಡಲಾಗುವುದು
– ಆರ್‌.ವಿ.ಅಂಗಡಿ ಪಿಡಿಒ ಇಡಗಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT