ಮಂಗಳವಾರ, ಮಾರ್ಚ್ 2, 2021
23 °C

ಸೀರೆ ಕಟ್ಟಿ ನೀರು ಸಂಗ್ರಹಿಸಿದರು!: ಮಳೆ ನೀರು ಸದ್ಬಳಕೆಗೆ ಸುಲಭ ಉಪಾಯ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಧಾರಾಕಾರ ಮಳೆಯಿಂದ ಎದುರಾಗಿರುವ ಕುಡಿಯುವ ನೀರಿನ ಕೊರತೆ ಈಡೇರಿಸಿಕೊಳ್ಳಲು ಜಿಲ್ಲೆಯ ಹುಕ್ಕೇರಿ ತಾಲ್ಲೂಕು ಯಮಕನಮರಡಿಯ ಅರುಣ್‌ ಕಾಪಸಿ–ಅನುರಾಧಾ ದಂಪತಿ ಸರಳ ಮತ್ತು ಸುಲಭವಾದ ಉಪಾಯ ಕಂಡುಕೊಂಡಿದ್ದಾರೆ. ತಾರಸಿಯಲ್ಲಿ ಸೀರೆ ಕಟ್ಟಿ ಮಳೆ ನೀರು ಸಂಗ್ರಹಿಸಿ, ಅದನ್ನು ಕಾಯಿಸಿ ಬಳಸುತ್ತಿದ್ದಾರೆ. ವ್ಯರ್ಥವಾಗುವ ನೀರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಪ್ರವಾಹದಿಂದ ಪಂಪ್‌ಹೌಸ್ ಮುಳುಗಿರುವುದರಿಂದ ಆ ಭಾಗದ ಸ್ಥಳೀಯ ಸಂಸ್ಥೆಯಿಂದ ಹನ್ನೊಂದು ದಿನಗಳಿಂದಲೂ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ತೊಂದರೆಗೆ ಒಳಗಾಗುವ ಸೂಚನೆ ದೊರೆತಿದ್ದರಿಂದ ಐಡಿಯಾ ಮಾಡಿದ ಅವರು, ಸಮಸ್ಯೆಯಿಂದ ಪಾರಾಗಿದ್ದಾರೆ.

ನೀರ ನೆಮ್ಮದಿ: ತಾರಸಿಯಲ್ಲಿ ಕಟ್ಟಿದ ಬಟ್ಟೆ ಮೇಲೆ ಬೀಳುವ ನೀರನ್ನು ಬಕೆಟ್‌ ಅಥವಾ ಪಾತ್ರೆಗಳಿಗೆ ಬೀಳುವಂತೆ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಹಣ ಖರ್ಚು ಮಾಡುವ ಅಗತ್ಯವಿಲ್ಲ.

‘ಇಲ್ಲಿ ತುಂಬಾ ಮಳೆ ಇರುವುದರಿಂದ ಪಂಪ್‌ಹೌಸ್‌ನಲ್ಲಿ ತೊಂದರೆಯಾಗಿರುವುದರಿಂದ ಕುಡಿಯುವ ನೀರು ಸರಬರಾಜು ಮಾಡಿರಲಿಲ್ಲ. ಮನೆಯಲ್ಲಿದ್ದ ನೀರು ಖಾಲಿಯಾಗುತ್ತಾ ಬಂದಿತ್ತು. ಮುಂದೇನು ಎಂದು ಯೋಚಿಸುತ್ತಿರುವಾಗ ಪತಿ, ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿಯಾಗಿರುವ ಅರುಣ್‌ ಈ ಐಡಿಯಾ ತಿಳಿಸಿದರು. ಮಂಗಳೂರು, ಕೊಡಗು ಕಡೆ ಈ ರೀತಿಯ ಪ್ರಯೋಗ ನೋಡಿದ್ದೇನೆ, ಇಲ್ಲೂ ಮಾಡೋಣ ಎಂದು ತಿಳಿಸಿದರು. ಅದರಂತೆ ‘ನೀರ ನೆಮ್ಮದಿ’ ಕಂಡುಕೊಂಡಿದ್ದೇವೆ. ಇನ್ನೂ ಒಂದು ವಾರ ಬಿಡುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ನಮಗೆ ನೀರಿನ ತೊಂದರೆ ಆಗುವುದಿಲ್ಲ’ ಎಂದು ಅನುರಾಧಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಯಿಸಿ ಬಳಕೆ: ‘ಸಂಗ್ರಹಿಸಿದ ನೀರನ್ನು ಕುದಿಸಿ, ತಣ್ಣಗಾದ ಮೇಲೆ ಕುಡಿಯುತ್ತಿದ್ದೇವೆ. ಮಳೆ ನೀರು ಸಂಗ್ರಹ ವ್ಯವಸ್ಥೆಯಲ್ಲಿ ಪೈಪ್‌ ಅಳವಡಿಸಿರುವುದರಿಂದ ಟ್ಯಾಂಕ್‌ಗೂ ಮಳೆ ನೀರು ಬರುತ್ತದೆ. ಅದು ಬಟ್ಟೆ, ಪಾತ್ರೆ ತೊಳರೆಯುವುದು ಮೊದಲಾದ ನಿತ್ಯದ ಬಳಕೆಗೆ ಆಗುತ್ತದೆ. ತಾರಸಿಯಲ್ಲಿ ಸಂಗ್ರಹಿಸಿದ ನೀರು, 6 ಮಂದಿ ಇರುವ ನಮ್ಮ ಕುಟುಂಬಕ್ಕೆ ಕುಡಿಯಲು ಸಾಕಾಗುತ್ತದೆ. ಇದರಿಂದಾಗಿ ನೀರಿನ ಕ್ಯಾನ್ (ಪ್ಯಾಕೇಜ್ಡ್ ಡ್ರಿಂಕಿಂಗ್‌ ವಾಟರ್‌) ಅವಲಂಬನೆ ಅಥವಾ ಟ್ಯಾಂಕರ್‌ ನೀರಿನ ಪ್ರಮೇಯ ಬರಲಿಲ್ಲ’ ಎಂದು ಮಳೆ ಕಲಿಸಿದ ಹೊಸ ಪಾಠದ ಅನುಭವ ಹಂಚಿಕೊಂಡರು.

ಮಂಡ್ಯ ಜಿಲ್ಲೆ ಮಳವಳ್ಳಿಯವರಾದ ಅವರು, ತುಮಕೂರಿನಲ್ಲಿ ಭಾರತೀಯ ಆಗ್ರೊ ಇಂಡಸ್ಟ್ರಿಯಲ್‌ ಫೌಂಡೇಷನ್‌ ಸಂಸ್ಥೆಯಲ್ಲಿ ಮಳೆ ನೀರು ಸಂಗ್ರಹ ಯೋಜನೆಯಲ್ಲಿ ಕೆಲಸ ಮಾಡಿದ್ದರು. ‘ಆಗಿನ ಅನುಭವ ಇಲ್ಲಿ ನೆರವಿಗೆ ಬಂತು. ಮಳೆಗಾಲದಲ್ಲಿ ಕುಡಿಯುವ ನೀರಿಗೆ ಏನು ಮಾಡಬೇಕು ಎನ್ನುವ ತಲೆನೋವು ದೂರಾಗಿದೆ. ತೊಂದರೆ ಕೂಡ ತಪ್ಪಿದೆ. ಜೋರು ಮಳೆ ಬಂದರೆ 5 ಕೊಡ, ಸಾಧಾರಣ ಇದ್ದರೆ 2 ಕೊಡ ಸಿಗುತ್ತದೆ’ ಎಂದು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು