ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮದುರ್ಗ: ಬತ್ತಿದ ಮುಳ್ಳೂರು ಕೆರೆ – ನೀರಾವರಿಗೆ ಬರೆ

ಕೆರೆ ಪುನಶ್ಚೇತನ, ಅಭಿವೃದ್ಧಿಗೆ ಮಂಜೂರಾಗಿದೆ ₹1 ಕೋಟಿ, ಇನ್ನೂ ಆರಂಭವಾಗದ ಕಾಮಗಾರಿ
Published 22 ಮೇ 2024, 5:17 IST
Last Updated 22 ಮೇ 2024, 5:17 IST
ಅಕ್ಷರ ಗಾತ್ರ

ರಾಮದುರ್ಗ: ನಾಲ್ಕು ಗ್ರಾಮಗಳ ಕೃಷಿ ಹಾಗೂ ಜಾನುವಾರುಗಳ ಕುಡಿಯುವ ನೀರಿಗೆ ಆಸರೆಯಾಗಿದ್ದ ಐತಿಹಾಸಿಕ ಮುಳ್ಳೂರು ಕೆರೆ ಈಗ ಸಂಪೂರ್ಣ ಖಾಲಿಯಾಗಿದೆ.

ತಾಲ್ಲೂಕಿನ ಮುಳ್ಳೂರು ಗ್ರಾಮದ ಹತ್ತಿರ ಇರುವ ಕೆರೆ 2019ರಲ್ಲಿ ಮಾತ್ರ ಸಂಪೂರ್ಣ ತುಂಬಿತ್ತು. ಆಗ ದನಕರುಗಳು, ಪ್ರಾಣಿ ಪಕ್ಷಿಗಳು ನೀರಿನ ಉಪಯೋಗ ಪಡೆಯುತ್ತಿದ್ದವು. ಒಟ್ಟು 105 ಮೀಟರ್‌ ಉದ್ದ, 8.5 ಮೀಟರ್‌ಎತ್ತರ ಹೊಂದಿರುವ ಕೆರೆಗೆ ಸುಮಾರು 2.19 ಹೆಕ್ಟೇರ್‌ ಪ್ರದೇಶದಿಂದ ನೀರು ಹರಿದು ಸಂಗ್ರಹವಾಗುತ್ತಿತ್ತು. ಆ ನೀರು ಸುಮಾರು 55 ಹೆಕ್ಟೇರ್‌ ಜಮೀನುಗಳಿಗೆ ಉಪಯೋಗವಾಗುತ್ತಿತ್ತು.

ಅಂತರ್ಜಲ ಹೆಚ್ಚಾಗಿ ಮುಳ್ಳೂರು, ಮುದೇನಕೊಪ್ಪ, ಕಡ್ಲಿಕೊಪ್ಪ, ಕಲ್ಲೂರು ಗ್ರಾಮದ ಕೊಳವೆ ಬಾವಿಗಳು ಪುನಶ್ಚೇತನ ಆಗುತ್ತಿದ್ದವು. ಆದರೆ, ಕಳೆದ ಎರಡು ವರ್ಷಗಳಿಂದ ಕೆರೆ ತುಂಬಿಲ್ಲ.

2019ರ ಬಳಿಕ ಆಗಾಗ ಅರ್ಧ ತುಂಬುತ್ತಿದ್ದ ಕೆರೆ ಈಗ ಸಂಪೂರ್ಣ ಬರಡಾಗಿದೆ. ಕೆರೆಯ ಕಟ್ಟೆಯ ಸುತ್ತಮುತ್ತ ಅಲ್ಲಲ್ಲಿ ದುರಸ್ತಿ ಕಾಣಿಸಿಕೊಂಡಿದೆ. ಕೆರೆಯ ವಿಸ್ತೀರ್ಣ ಹೆಚ್ಚಿಸಲು ಕೆಲವರು ವಿರೋಧ ವ್ಯಕ್ತ ಪಡಿಸಿದ್ದಾರೆ. ಕೆಲವು ಕಡೆಗಳಲ್ಲಿ ಸೋರಿಕೆ ಕಂಡಿದೆ. ಇದೆಲ್ಲವನ್ನು ಸರಿ ಪಡಿಸುವುದು ಮುಖ್ಯವಾಗಿದೆ.

ಕೊಳ್ಳಗಳ ನಾಡಲ್ಲೂ ಬರ: ‘ಕೊಳ್ಳಗಳ ನಾಡು’ ಎಂದು ಖ್ಯಾತಿ ಹೊಂದಿರುವ ರಾಮದುರ್ಗ ತಾಲ್ಲೂಕಿನಲ್ಲಿ ಮಲಪ್ರಭಾ ನದಿ ಮತ್ತು ಇತರ 28 ಕೆರೆಗಳು ಕುಡಿಯುವ ನೀರು ಮತ್ತು ನೀರಾವರಿಗಾಗಿ ಲಭ್ಯ ಇವೆ. ಆದರೆ ಮಳೆಯಾಗದ ಹಿನ್ನೆಲೆಯಲ್ಲಿ ಭಾಗಶಃ ಎಲ್ಲ ಕೆರೆಗಳೂ ಬತ್ತಿದೆ. ಕೆರೆಗಳು ಬತ್ತಿ ಅಂತರ್ಜಲವೂ ಕುಸಿದಿದೆ.

ತಾಲ್ಲೂಕಿನಲ್ಲಿರುವ 28 ಕೆರೆಗಳಲ್ಲಿ 14 ಇಂಗು ಕೆರೆಗಳು ಕುಡಿಯುವ ನೀರು ಮತ್ತು ನೀರಾವರಿ ಉದ್ದೇಶಕ್ಕಾಗಿ ಮೀಸಲಿವೆ. ಸಣ್ಣ ನೀರಾವರಿ ಯೋಜನೆಯಡಿ ನಿರ್ಮಿಸಿದ ಉಳಿದ 14 ಕೆರೆಗಳು ನೀರಾವರಿ ಉದ್ದೇಶಕ್ಕಾಗಿ ಮಾತ್ರ ಬಳಕೆಯಾಗುತ್ತವೆ. ನೀರಾವರಿಗಾಗಿ ಕೆರೆಯ ನೀರನ್ನು ನೇರವಾಗಿ ಪಡೆಯದೇ ಅಂತರ್ಜಲ ವೃದ್ಧಿಸಿಕೊಂಡು ನೀರಾವರಿ ಮಾಡಿಕೊಳ್ಳುವುದು ನಿಯಮವಿದೆ.

ರಾಮದುರ್ಗ ತಾಲ್ಲೂಕು ಬರ ಪೀಡಿತ ಎಂದು ಘೋಷಣೆ ಆಗಿರುವುದಕ್ಕೆ ಪುಷ್ಠಿ ಎಂಬಂತೆ ಇಲ್ಲಿಯ ತನಕ ಒಂದೂ ಉತ್ತಮ ಮಳೆ ಆಗಿಲ್ಲ. ನದಿಯೂ ಬತ್ತಿ ಹೋಗಿದೆ.

ನೀರಾವರಿಗಾಗಿ ಇದ್ದ 14 ಕೆರೆಗಳು ಭಾಗಶಃ ಬತ್ತಿ ಈ ಕೆರೆಗಳ ವ್ಯಾಪ್ತಿಗೆ ಒಳಪಡುವ ಗ್ರಾಮಗಳು ನೀರಾವರಿಯ ಸಮಸ್ಯೆಯಿಂದ ಬಳಲುತ್ತಿವೆ.

ಮುಳ್ಳೂರು ಕೆರೆ ಸುಧಾರಣೆಗೆ ಸರ್ಕಾರವು ₹1ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಕೆರೆಯ ಸೋರುವಿಕೆ ತಡೆ ಮುಂತಾದ ಕಾಮಗಾರಿ ಕೈಗೊಳ್ಳಲಾಗುವುದು.
–ಲಕ್ಷ್ಮಣ ಬಂಡಿವಡ್ಡರ, ಸಹಾಯಕ ಎಂಜಿನಿಯರ್‌ ಸಣ್ಣ ನೀರಾವರಿ ಇಲಾಖೆ
ಈ ಭಾಗದ ಜಮೀನುಗಳಿಗೆ ನೀರಾವರಿಗಾಗಿ ಉಪಯುಕ್ತವಿದ್ದ ಕೆರೆಯನ್ನು ಅಭಿವೃದ್ಧಿಪಡಿಸಬೇಕು. ರೈತರ ಜಮೀನುಗಳು ಜವುಳು ಹತ್ತದ ರೀತಿಯಲ್ಲಿ ಕೆರೆ ಸೋರುವಿಕೆ ನಿಲ್ಲಿಸಬೇಕು.
–ಬಸವರಾಜ ಸೋಮಗೊಂಡ, ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT