ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರೇ ಸಿ.ಎಂ. ಆದರೂ ಸ್ವಾಗತ–ಲಕ್ಷ್ಮಿ ಹೆಬ್ಬಾಳಕರ

ನಾಯಕತ್ವ ಚರ್ಚೆ: ಶಾಸಕಿ ಲಕ್ಷ್ಮಿ ಪ್ರತಿಕ್ರಿಯೆ
Last Updated 25 ಜೂನ್ 2021, 12:52 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯ ಕಾಂಗ್ರೆಸ್‌ ನಾಯಕತ್ವಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧಳಿದ್ದೇನೆ. ಯಾರೇ ಮುಖ್ಯಮಂತ್ರಿಯಾದರೂ ಹೃದಯಪೂರ್ವಕವಾಗಿ ಸ್ವೀಕಾರ ಮಾಡುತ್ತೇನೆ’ ಎಂದು ಕೆಪಿಸಿಸಿ ವಕ್ತಾರೆಯೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯ್ತಿಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಶುಕ್ರವಾರ ಅವರು ಮಾತನಾಡಿದರು.

‘ಮಧ್ಯಂತರ ಚುನಾವಣೆ ಅಥವಾ ರಾಜಕೀಯ ಪರಿಸ್ಥಿತಿ ಬಗ್ಗೆ ಭವಿಷ್ಯ ಹೇಳುವುದು ಗೊತ್ತಿಲ್ಲ. ನಾಯಕತ್ವಕ್ಕೆ ಸಂಬಂಧಿಸಿ ಪಕ್ಷದಲ್ಲಿ ನಡೆದಿರುವ ಚರ್ಚೆಗಳ ಬಗ್ಗೆಯೂ ಪ್ರತಿಕ್ರಿಯಿಸುವುದಿಲ್ಲ’ ಎಂದರು.

‘ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದೆ. ನಮಗೊಂದು ಹೈಕಮಾಂಡ್ ಇದೆ. ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ’ ಎಂದರು.

‘ಪಕ್ಷದಿಂದ ಹೊರ ಹೋದವರು ಮರಳಿ ಬರುವ ವಿಷಯದ ಬಗ್ಗೆ ನಾನೇನೂ ಹೇಳುವುದಿಲ್ಲ. ಅದನ್ನೆಲ್ಲಾ ಪಕ್ಷದ ಹಿರಿಯರು ತೀರ್ಮಾನಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಪ್ರಗತಿ ಪರಿಶೀಲನೆ:

ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಲಕ್ಷ್ಮಿ ಪರಿಶೀಲಿಸಿದರು. ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಅನುದಾನವನ್ನು ಅಭಿವೃದ್ಧಿ ಕೆಲಸಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕಾಮಗಾರಿ ವಿಳಂಬ ಆಗದಂತೆ ನೋಡಿಕೊಳ್ಳಬೇಕು. ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಾರದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಜಲ ಜೀವನ ಮಿಷ‌ನ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, 14ನೇ ಮತ್ತು 15ನೇ ಹಣಕಾಸು ಯೋಜನೆ, ವಿವಿಧ ವಸತಿ ಯೋಜನೆಗಳು, ಸ್ವಚ್ಛ ಭಾರತ್ ಮಿಷನ್, ಕರ ವಸೂಲಿ ಮೊದಲಾದವುಗಳ ಬಗ್ಗೆ ಮಾಹಿತಿ ಪಡೆದರು.

ತಾ.ಪಂ. ಅಧ್ಯಕ್ಷ ಶಂಕರಗೌಡ ಪಾಟೀಲ, ತಹಶೀಲ್ದಾರ್‌ ಆರ್.ಕೆ. ಕುಲಕರ್ಣಿ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಇದ್ದರು.

‘ಮುಂದಿನ ಸಿ.ಎಂ.: ಬೀದಿಯಲ್ಲಿ ಚರ್ಚೆ ಬೇಡ’

ಬೆಳಗಾವಿ: ‘ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಬಗ್ಗೆ ಕಾಂಗ್ರೆಸ್ ಪಕ್ಷದವರು ಹಾದಿ ಬೀದಿಯಲ್ಲಿ ಚರ್ಚಿಸುವುದು ಬೇಡ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೊಂದಿಗೆ ಶುಕ್ರವಾರ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಾವೆಲ್ಲರೂ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುವುದಕ್ಕೆ ಗಮನ ಕೊಡಬೇಕು’ ಎಂದರು.

‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನಡುವೆ ಹೊಂದಾಣಿಕೆ ಇದೆ’ ಎಂದು ಸಮರ್ಥಿಸಿಕೊಂಡರು.

‘ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಕೆಲವು ಶಾಸಕರು ಮಾತನಾಡುತ್ತಿದ್ದಾರೆ. ಇದು ಸೂಕ್ತವಲ್ಲ. ಈಗ ಮಾತನಾಡುತ್ತಿರುವವರೇ ಮುಂದಿನ ಚುನಾವಣೆಯಲ್ಲಿ ಶಾಸಕರಗಿ ಆಯ್ಕೆ ಆಗದೆ ಹೋದರೆ? ಆಗ ಅವರಿಗೆ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೇಳಲು ಯಾವುದೇ ಅರ್ಹತೆ ಇರುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT