ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತಾಂತರಗೊಳಿಸಿದರೆ ಕಾನೂನು ಕ್ರಮ: ರಾಮದುರ್ಗ ತಹಶೀಲ್ದಾರ್‌ ಎಚ್ಚರಿಕೆ

Published 28 ಡಿಸೆಂಬರ್ 2023, 15:08 IST
Last Updated 28 ಡಿಸೆಂಬರ್ 2023, 15:08 IST
ಅಕ್ಷರ ಗಾತ್ರ

ರಾಮದುರ್ಗ: ‘ಯಾವುದೇ ಆಮಿಷವೊಡ್ಡಿ ಬಲವಂತದಿಂದ ಮತಾಂತರ ಮಾಡಿದರೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಎಚ್ಚರಿಕೆ ನೀಡಿದರು.

ಓಬಳಾಪುರ ಅಂಗನವಾಡಿ ಕೇಂದ್ರದಲ್ಲಿ ಮತಾಂತರ ಯತ್ನ ಆರೋಪದ ಹಿನ್ನೆಲೆಯಲ್ಲಿ, ತಾಲ್ಲೂಕಿನ ಓಬಳಾಪುರ ತಾಂಡೆಯಲ್ಲಿ ಗುರುವಾರ ಅವರು ಸಭೆ ನಡೆಸಿದರು.

‘ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಆರೋಗ್ಯ ಸುಧಾರಿಸುತ್ತದೆ. ಆರ್ಥಿಕವಾಗಿ ಸಬಲರಾಗಬಹುದು ಎಂದು ಯಾರಾದರೂ ಆಮಿಷವೊಡ್ಡಿದರೆ, ಒತ್ತಡ ಹೇರಿದರೆ ತಾಲ್ಲೂಕು ಆಡಳಿತಕ್ಕೆ ಮಾಹಿತಿ ಕೊಡಬೇಕು. ಅವರ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ. ಆದರೆ, ಮತಾಂತರಕ್ಕೆ ಪ್ರಚೋದಿಸಿದ ಮಹಿಳೆ ಕುಟುಂಬಕ್ಕೆ ಬಹಿಷ್ಕಾರ ಹಾಕುವಂತಹ ತೀರ್ಮಾನಕ್ಕೆ ಗ್ರಾಮಸ್ಥರು ಮುಂದಾಗಬಾರದು. ಇದು ಕಾನೂನುಬಾಹಿರ ಪ್ರಕ್ರಿಯೆಯಾಗಿದೆ’ ಎಂದರು.

ರಾಮದುರ್ಗ ಸಿಪಿಐ ಐ.ಆರ್.ಪಟ್ಟಣಶೆಟ್ಟಿ, ‘ಮತಾಂತರ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಸ್ಥರು ಕಾನೂನು ಕೈಗೆತ್ತಿಕೊಳ್ಳಬಾರದು. ಊರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು’ ಎಂದು ಕೋರಿದರು.

‘ಗ್ರಾಮಸ್ಥರು ಮಾಡಿದ ಆರೋಪಗಳ ಕುರಿತು ಪರಿಶೀಲಿಸಿ, ಕ್ರಮ ವಹಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.

ಪಿಎಸ್‍ಐ ಸುನೀಲಕುಮಾರ ನಾಯಕ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶುರಾಮ ಪತ್ತಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಕರ ಕುಂಬಾರ, ಮುದೇನೂರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸದಾಶಿವ ಹಲಗಿ, ಧನಲಕ್ಷ್ಮಿ ಶುಗರ್ಸ್‌ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಲಕ್ಷ್ಮಿ ಲಮಾಣಿ, ಸಾವಿತ್ರಿ  ಲಮಾಣಿ, ಚಂದು ಲಮಾಣಿ, ಸೋಮಪ್ಪ ಲಮಾಣಿ, ಪರಶುರಾಮ ಲಮಾಣಿ, ಚಂದು ಲಮಾಣಿ, ಆನಂದ ಲಮಾಣಿ, ಪುಂಡಲೀಕ ಲಮಾಣಿ ಇತರರಿದ್ದರು.

Cut-off box - ಮತಾಂತರ ಸಹಿಸುವುದಿಲ್ಲ: ಹೆಬ್ಬಾಳಕರ ಬೆಳಗಾವಿ: ‘ಓಬಳಾಪುರದಲ್ಲಿ ಮತಾಂತರ ನಡೆಯುತ್ತಿರುವ ಬಗ್ಗೆ ನನಗೆ ತಿಳಿದಿರಲಿಲ್ಲ. ಒತ್ತಾಯಪೂರ್ವಕವಾಗಿ ಮಾಡಲಾಗುವ ಮತಾಂತರವನ್ನು ನಾನು ಸಹಿಸುವುದಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ಓಬಳಾಪುರ ಅಂಗನವಾಡಿ ಕೇಂದ್ರದಲ್ಲಿ ಮತಾಂತರ ಯತ್ನ ಆರೋಪದ ಕುರಿತು ಇಲ್ಲಿ ಗುರುವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು. ‘ನಾವೆಲ್ಲರೂ ನಮ್ಮ ಧರ್ಮಗಳನ್ನು ಪ್ರೀತಿಸುತ್ತೇವೆ. ಒಂದು ವೇಳೆ ಮತಾಂತರವಾಗಿದ್ದರೆ ತನಿಖೆ ನಡೆಸಲಾಗುವುದು. ತಪ್ಪು ಎಸಗಿರುವುದು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು’ ಎಂದರು. ‘ಬರಗಾಲದ ಹಿನ್ನೆಲೆಯಲ್ಲಿ ತಾಂಡೆಗಳ ಲಂಬಾಣಿ ಕುಟುಂಬಗಳನ್ನು ಕ್ರೈಸ್ತ ಮಿಷನರಿಗಳು ಟಾರ್ಗೆಟ್ ಮಾಡುತ್ತಿವೆಯೇ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವೆ ‘ಮತಾಂತರ ವಿಷಯ ಈಗಷ್ಟೇ ಗಮನಕ್ಕೆ ಬಂದಿದೆ. ಈ ಆರೋಪದ ಕುರಿತಾಗಿಯೂ ತನಿಖೆ ಮಾಡಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT