ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಮರ್ಪಕವಾಗಿರಲಿ ಜಾನುವಾರು ಗಣತಿ’

21ನೇ ರಾಷ್ಟ್ರೀಯ ಜಾನುವಾರು ಗಣತಿ: ದತ್ತಾಂಶ ಸಂಗ್ರಹಿಸಲು ಸಿಇಒ ನಿರ್ದೇಶನ
Published 29 ಆಗಸ್ಟ್ 2024, 15:32 IST
Last Updated 29 ಆಗಸ್ಟ್ 2024, 15:32 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಮೊದಲ ಬಾರಿಗೆ ಆ್ಯಪ್ ಆಧರಿಸಿ ಜಾನುವಾರು ಗಣತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಎಲ್ಲ ಮನೆಗಳಿಗೆ ಗಣತಿದಾರರು ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಸೂಚಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ಸೆ. 1ರಿಂದ ಡಿ. 31ರವರೆಗೆ ನಡೆಯಲಿರುವ 21ನೇ ರಾಷ್ಟ್ರೀಯ ಜಾನುವಾರು ಗಣತಿ–2024ರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಗಣತಿಯಲ್ಲಿ ರೈತರ ಮಾಹಿತಿ, ರೈತರ ವರ್ಗ, ಜಾನುವಾರುಗಳ ವಯಸ್ಸು, ಎಷ್ಟು ಮಹಿಳೆಯರು ಜಾನುವಾರು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿಗಳನ್ನು ಯಾವುದೇ ಲೋಪದೋಷ ಇಲ್ಲದೇ ಕಲೆಹಾಕಬೇಕು’ ಎಂದರು.

‘ಮೊದಲ ಬಾರಿಗೆ ಸ್ಮಾರ್ಟ್‌ಪೋನ್ ಬಳಸಿ ಮನೆ ಮನೆಗೆ ತೆರಳಿ ಗಣತಿಯಲ್ಲಿ ತೊಡಗಿಸಿಕೊಳ್ಳಲಾತ್ತಿದೆ. ಇದಕ್ಕಾಗಿ ಕೇಂದ್ರ ಪಶು ಸಂಗೋಪನ ಇಲಾಖೆಯಿಂದಲೇ ‘21 ಲೈವ್‌ಸ್ಪಾಕ್ ಸೆನ್ಸಸ್’ ಎನ್ನುವ ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ’ ಎಂದರು.

‘ಜಾನುವಾರುಗಳಿಗೆ ವ್ಯಾಕ್ಸಿನ್, ಔಷಧಿಗಳ ಬಳಕೆ ಬಗ್ಗೆ ಸಮಗ್ರ ಮಹಿಸಿ ನೀಡಬೇಕು. ನಿರಂತರ ಸಂಚರಿಸುವ ಅಗತ್ಯ ಇರುವುದರಿಂದ ಗಣತಿದಾರರು, ಮೇಲ್ವಿಚಾರಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಗಣತಿ ಮಾಡಬೇಕು’ ಎಂದೂ ಸೂಚಿಸಿದರು.

ಗೋಶಾಲೆಗಳ ಮಾಹಿತಿ: ‘ದನ, ಎತ್ತು, ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಹಂದಿ ಬಾತುಕೋಳಿ ಹಾಗೂ ಎಮು ಹಕ್ಕಿಗಳ ಮಾಹಿತಿ ಪಡೆಯಲಾಗುವುದು. ಮಾಲೀಕರಿಲ್ಲದ ದನಕರುಗಳು, ನಾಯಿಗಳ ಮಾಹಿತಿಯನ್ನೂ ಸೇರಿಸಲಾಗುತ್ತದೆ. ಅದೇ ರೀತಿ ದೇವಸ್ಥಾನದಲ್ಲಿ ಆನೆ, ದನ ಸಾಕುವುದಿದ್ದರೆ, ಗೋಶಾಲೆಗಳಿದ್ದರೆ ಮಾಹಿತಿ ಪಡೆಯಲಾಗುತ್ತದೆ. 10ಕ್ಕಿಂತ ಜಾಸ್ತಿ ದನಗಳಿದ್ದರೆ, 1,000ಕ್ಕಿಂತ ಜಾಸ್ತಿ ಕೋಳಿ ಸಾಕಿದರೆ, 50ರ ಮೇಲ್ಪಟ್ಟು ಆಡು ಸಾಕಣೆಯಿದ್ದರೆ ಅವುಗಳನ್ನು ಫಾರಂ ಎಂದು ಪರಿಗಣಿಸಿ ಮಾಹಿತಿ ನಮೂದಿಸಿಕೊಳ್ಳಬೇಕು’ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ರಾಜೀವ ಕೂಲೇರ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 247 ಗಣತಿದಾರರು, 54 ಮೇಲ್ವಿಚಾರಕರು ಇರುತ್ತಾರೆ. ಗಣತಿದಾರರು ಮನೆ ಮನೆಗೆ ತೆರಳಿದರೆ, ಮೇಲ್ವಿಚಾರಕರು ಹಾಗೂ ನೋಡಲ್ ಅಧಿಕಾರಿಗಳು ಅದರ ಒಟ್ಟು ಉಸ್ತುವಾರಿ ವಹಿಸಿಕೊಳ್ಳುಲಿದ್ದಾರೆ. ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿ 3,24,584 ಕುಟುಂಬಗಳ ಸಂಖ್ಯೆಯಿದೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 8,35,657 ಕುಟುಂಬಗಳ ಸಂಖ್ಯೆಯಿದೆ. ಒಟ್ಟು ಜಿಲ್ಲೆಯಲ್ಲಿ ಅಂದಾಜು 11,60,241 ಕುಟುಂಬಗಳ ಸಂಖ್ಯೆಯಿದ್ದು, 247 ಗಣತಿದಾರರು ಹಾಗೂ 54 ಮೇಲ್ವಿಚಾರಕರು ಗಣತಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ರಾಹುಲ್ ಶಿಂಧೆ ಮಾಹಿತಿ ಕೈಪಿಡಿ, ಪೋಸ್ಟರ್‌ ಹಾಗೂ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದರು.

ಮಾಸ್ಟರ್ ಟ್ರೈನರ್ ಡಾ.ಆನಂದ ಪಾಟೀಲ ಮತ್ತು ಡಾ.ವಿರೂಪಾಕ್ಷ ಅಡ್ಡನಗಿ ಮಾಹಿತಿ ನೀಡಿದರು. ಇಲಾಖೆಯ ಸಹಾಯ ನಿರ್ದೇಶಕ ಡಾ.ಅಂಬುರಾಯ ಕೊಡಗಿ, ಡಾ.ಮೋಹನ್ ಕಾಮತ್, ಡಾ.ಸದಾಶಿವ ಉಪ್ಪಾರ, ಮೇಲ್ವಿಚಾರಕರು, ಪಶು ವೈದ್ಯರು ಸೇರಿದಂತೆ ಪಶು ಸಂಗೋಪನಾ ಇಲಾಖೆ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.

ಅಚ್ಚುಕಟ್ಟು ನಿರ್ವಹಣೆ

‘ಕಳೆದ ನಾಲ್ಕು ತಿಂಗಳುಗಳಿಂದ ಪಶುಸಂಗೋಪನಾ ಇಲಾಖೆ ಈ ಬೃಹತ್ ಸಮೀಕ್ಷಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 8 ಜನ ಮಾಸ್ಟರ್ ಟ್ರೇನರ್‌ಗಳು ಆ.12ರಂದು ತರಬೇತಿ ಪಡೆದುಕೊಂಡಿದ್ದಾರೆ’ ಎಂದು ಡಾ.ರಾಜೀವ ಕೂಲೇರ್ ಮಾಹಿತಿ ನೀಡಿದರು. ‘1919ರಿಂದ ಜಾನುವಾರು ಗಣತಿ ನಡೆಯುತ್ತ ಬಂದಿದೆ. ಕಳೆದ 100 ವರ್ಷಗಳಲ್ಲಿ 20 ಗಣತಿ ನಡೆದಿವೆ. ಇದು 21ನೇ ಗಣತಿ. ಈ ಹಿಂದೆ ಪುಸ್ತಕದಲ್ಲಿ 200 ಕಾಲಂಗಳನ್ನು ಭರ್ತಿ ಮಾಡಬೇಕಾಗಿತ್ತು. ಈ ಬಾರಿ ಚುಟುಕಾಗಿ ಆ್ಯಪ್ ಮೂಲಕ ಮಾಹಿತಿ ನಮೂದಿಸಬಹುದು. ನೆಟ್‌ವರ್ಕ್ ಇಲ್ಲದಿದ್ದರೂ ಈ ಆ್ಯಪ್ ನೆಟ್ವರ್ಕ್ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕೇಂದ್ರ ಸರ್ವರ್ ಜತೆ ಮಾಹಿತಿ ಹಂಚಿಕೊಳ್ಳುವಂತೆ ವಿನ್ಯಾಸ ಪಡಿಸಲಾಗಿದೆ. ಎಣಿಕೆದಾರರಿಗೆ ಮತ್ತು ಮೇಲ್ವಿಚಾರಕರಿಗೆ ಪ್ರತ್ಯೇಕವಾದ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT