ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಲಾಕ್‌ಡೌನ್‌ ಪರಿಹಾರ: ಮರು ಸಮೀಕ್ಷೆಗೆ ರೈತರ ಒತ್ತಾಯ

Last Updated 6 ಜೂನ್ 2020, 11:19 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್‌ಡೌನ್‌ ಅವಧಿಯಲ್ಲಿ ನಷ್ಟಕ್ಕೊಳಗಾಗಿರುವ ಹಣ್ಣು, ತರಕಾರಿ ಹಾಗೂ ಹೂವು ಬೆಳೆಗಾರರಿಗೆ ಪರಿಹಾರ ನೀಡಲು ಮುಂಗಾರು– ಹಿಂಗಾರು ಬೆಳೆ ಸಮೀಕ್ಷೆಯನ್ನು ಪರಿಗಣಿಸದೇ ಹೊಸದಾಗಿ ಸಮೀಕ್ಷೆ ಕೈಗೊಳ್ಳುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಳೆಯ ಸಮೀಕ್ಷೆಯನ್ನೇ ಪರಿಗಣಿಸಿದರೆ ಪರಿಹಾರದಿಂದ ವಂಚಿತರಾಗುವ ಆತಂಕ ಸಾವಿರಾರು ರೈತರನ್ನು ಕಾಡುತ್ತಿದೆ.

ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರವು ಮಾರ್ಚ್‌ 20ರಿಂದ ಮೇ 30ರವರೆಗೆ ಲಾಕ್‌ಡೌನ್‌ ಘೋಷಿಸಿತ್ತು. ಈ ಅವಧಿಯಲ್ಲಿ ಹಣ್ಣು, ತರಕಾರಿ ಹಾಗೂ ಹೂವುಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗಲಿಲ್ಲ. ಹೊಲದಲ್ಲಿಯೇ ನಾಶವಾಯಿತು. ಇದರಿಂದ ರೈತರು ಅಪಾರ ನಷ್ಟ ಅನುಭವಿಸಿದರು. ಅವರ ನೆರವಿಗೆ ಧಾವಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪರಿಹಾರ ನೀಡುವುದಾಗಿ ಘೊಷಿಸಿದರು. ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಒಂದು ಹೆಕ್ಟೇರ್‌ಗೆ ₹ 15 ಸಾವಿರ ಹಾಗೂ ಹೂವು ಬೆಳೆಗಾರರಿಗೆ ಒಂದು ಹೆಕ್ಟೇರ್‌ಗೆ ₹ 25 ಸಾವಿರರಂತೆ ಗರಿಷ್ಠ ಒಂದು ಹೆಕ್ಟೇರ್‌ ಪ್ರದೇಶಕ್ಕೆ ಪರಿಹಾರ ಘೋಷಿಸಿದರು.

ಕಳೆದ ವರ್ಷ ಜುಲೈ–ಅಕ್ಟೋಬರ್‌ವರೆಗೆ ನಡೆದ ಮುಂಗಾರು ಹಾಗೂ ಅಕ್ಟೋಬರ್‌–ಫೆಬ್ರುವರಿವರೆಗೆ ನಡೆದ ಹಿಂಗಾರು ಬೆಳೆ ಸಮೀಕ್ಷೆಯನ್ನೇ ಪರಿಹಾರ ನೀಡಲು ಆಧಾರವಾಗಿಟ್ಟುಕೊಳ್ಳಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾರ್ಚ್‌– ಏಪ್ರಿಲ್‌ ತಿಂಗಳಿನಲ್ಲಿ ಬೆಳೆದವರು ಏನು ಮಾಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಈಗ ತಕ್ಷಣ ಮತ್ತೊಮ್ಮೆ ಸಮೀಕ್ಷೆ ಕೈಗೊಂಡರೆ, ನಿಜವಾಗಿ ನಷ್ಟ ಅನುಭವಿಸಿದವರ ಮಾಹಿತಿ ದೊರೆಯುತ್ತದೆ. ಅಂತಹವರಿಗೆ ಪರಿಹಾರ ನೀಡಲು ಸಹಾಯವಾಗುತ್ತದೆ ಎನ್ನುವುದು ಅವರ ಅನಿಸಿಕೆ.

ತರಕಾರಿಗಳ ಕಣಜ:ಬೆಳಗಾವಿ, ಬೈಲಹೊಂಗಲ, ಖಾನಾಪುರ, ಸವದತ್ತಿ, ರಾಮದುರ್ಗ, ಹುಕ್ಕೇರಿ ಸೇರಿದಂತೆ ಬಹುತೇಕ ಜಿಲ್ಲೆಯಾದ್ಯಂತ ಸುಮಾರು 33,425 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ತರಕಾರಿ ಬೆಳೆಯುತ್ತಾರೆ. ಹೂಕೋಸು, ಎಲೆಕೋಸು, ಟೊಮೆಟೊ, ಬೆಂಡೆಕಾಯಿ, ಬೀಟ್‌ರೂಟ್‌, ಬೀನ್ಸ್‌, ಹಸಿಮೆಣಸಿನಕಾಯಿ, ಸಿಹಿಕುಂಬಳ, ಬೂದುಗುಂಬಳ, ಗಜ್ಜರಿ, ಈರುಳ್ಳಿ, ಡೊಣ್ಣಮೆಣಸಿನಕಾಯಿ ಸೇರಿದಂತೆ ಹಲವು ತರಕಾರಿ ಇದರಲ್ಲಿ ಸೇರಿವೆ.

ಬಾಳೆ, ಪಪ್ಪಾಯ, ಮಾವು, ಪೇರಲ, ಅಂಜೂರ, ಅನಾನಸ್, ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳನ್ನು 13,600 ಹೆಕ್ಟೇರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಸುಮಾರು 28 ಸಾವಿರದಿಂದ 30 ಸಾವಿರ ರೈತರು ಹಣ್ಣು– ತರಕಾರಿ ಬೆಳೆಯುತ್ತಾರೆ. ಚೆಂಡು ಹೂವು, ಸೇವಂತಿಗೆ, ಗುಲಾಬಿ, ಮಲ್ಲಿಗೆ ಸೇರಿದಂತೆ ವಿವಿಧ ಹೂವುಗಳನ್ನು 1,211 ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ಕೊಳೆತು ನಾಶ:‘ರೈತರು ಕಷ್ಟ ಪಟ್ಟು ಬೆಳೆದ ತರಕಾರಿಗಳು ಕೈಗೆ ಬರುವ ಹೊತ್ತಿಗೆ ಲಾಕ್‌ಡೌನ್‌ ಘೋಷಿಸಿಲಾಗಿತ್ತು. ಇದರಿಂದ ಅವು ಮಾರಾಟವಾಗದೇ ರೈತರಿಗೆ ಸಾಕಷ್ಟು ನಷ್ಟ ಉಂಟಾಯಿತು. ಇವರಿಗೆ ಪರಿಹಾರ ನೀಡುವಾಗ ಮುಂಗಾರು ಹಾಗೂ ಹಿಂಗಾರು ಬೆಳೆ ಸಮೀಕ್ಷೆಯನ್ನು ಆಧಾರವಾಗಿ ಇಟ್ಟುಕೊಳ್ಳಬಾರದು. ಏಕೆಂದರೆ, ಈ ಸಮೀಕ್ಷೆಯು ಫೆಬ್ರುವರಿಯೊಳಗೆ ಮಾಡಿರುವಂತಹದ್ದು. ಆ ನಂತರ ತರಕಾರಿ ಬೆಳೆದವರ ಮಾಹಿತಿ ಈ ಸಮೀಕ್ಷೆಯಲ್ಲಿ ಇಲ್ಲ. ಹೀಗಾಗಿ ಹೊಸದಾಗಿ ಮರು ಸಮೀಕ್ಷೆ ಮಾಡಿಸಿ, ರೈತರ ಮಾಹಿತಿಯನ್ನು ಸಂಗ್ರಹಿಸಬೇಕು. ಅರ್ಹ ಎಲ್ಲ ರೈತರಿಗೂ ಪರಿಹಾರ ನೀಡಬೇಕು’ ಎಂದು ರೈತ ಮುಖಂಡ ಸಿದಗೌಡ ಮೋದಗಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT