ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕಾರ ಕಲಿತು ರಾಜಕೀಯ ಮಾಡಿ: ಮೃಣಾಲ್‌ ಹೆಬ್ಬಾಳಕರಗೆ ಮಂಗಲಾ ಅಂಗಡಿ ತಾಕೀತು

Published 22 ಏಪ್ರಿಲ್ 2024, 12:48 IST
Last Updated 22 ಏಪ್ರಿಲ್ 2024, 12:48 IST
ಅಕ್ಷರ ಗಾತ್ರ

ಬೆಳಗಾವಿ: ‘ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಅವರು ಮೊದಲು ಹಿರಿಯರಿಗೆ ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಬೇಕು. ನಂತರ ರಾಜಕೀಯ ಮಾಡಬೇಕು’ ಎಂದು ಸಂಸದೆ ಮಂಗಲಾ ಅಂಗಡಿ ಕಿಡಿ ಕಾರಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಭಾವಚಿತ್ರ ಅಳವಡಿಸಿ ಒಂದು ಪೋಸ್ಟನ್ನು ಮೃಣಾಲ್‌ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ‘ಬೆಳಗಾವಿಗೆ ಇವರು ಏನೂ ಮಾಡಿಲ್ಲ, ನಾಚಿಕೆ ಆಗಬೇಕು’ ಎಂಬ ಪದ ಬಳಸಿದ್ದಾರೆ. ಅವರು ಇನ್ನೂ ಚಿಕ್ಕ ಹುಡುಗ. ರಾಜಕೀಯ ಮಾಡಲು ಸಾಕಷ್ಟು ವಯಸ್ಸಿದೆ. ಆದರೆ, ದೊಡ್ಡವರ ಬಗ್ಗೆ ಹೇಗೆ ಮಾತನಾಡಬೇಕು ಎಂಬ ಸಂಸ್ಕಾರ ಕಲಿಯಬೇಕು’ ಎಂದರು.

‘ಲಕ್ಷ್ಮಿ ಹೆಬ್ಬಾಳಕರ ಆರೋಪಿಸಿದರೆ ಸಹಿಸಿಕೊಳ್ಳಬಹುದು. ಆದರೆ, ಅವರ ಮಗ ಕೂಡ ಅವಾಚ್ಯ ಪದ ಬಳಸಿ ಮಾತನಾಡಿದರೆ ಸಹಿಸುವುದು ಹೇಗೆ? ಅವರಂತೆ ನಾನು ಮಾತನಾಡುವುದಿಲ್ಲ. ನನ್ನ ತಂದೆ– ತಾಯಿ ನನಗೆ ಸಂಸ್ಕಾರ ಕಲಿಸಿದ್ದಾರೆ’ ಎಂದರು.

‘₹1,100 ಕೋಟಿಯ ಸ್ಮಾರ್ಟ್‌ ಸಿಟಿ ಮಾಡಿದ್ದೇವೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮಾಡಿದ್ದೇವೆ. ಈಗ ಹೊಸ ಕಟ್ಟಡವೂ ಮಂಜೂರಾಗಿದೆ. ಶಿಕ್ಷಣಕ್ಕಾಗಿ ಎರಡು ಹೆಚ್ಚುವರಿ ಕೇಂದ್ರೀಯ ವಿಶ್ವವಿದ್ಯಾಲಯ ನಿರ್ಮಿಸಿದ್ದೇವೆ. ನಾನೊಬ್ಬಳೇ 2.73 ಲಕ್ಷ ಕುಟುಂಬಗಳಿಗೆ ಪಿಎಂ ಮುದ್ರಾ ಯೋಜನೆ ಅಡಿ ₹1,555 ಕೋಟಿ ಸಾಲ ಕೊಡಿಸುವ ಕೆಲಸ ಮಾಡಿದ್ದೇನೆ. 1.89 ಲಕ್ಷ ಕುಟುಂಬಗಳಿಗೆ ರಿಯಾಯಿತಿ ಗ್ಯಾಸ್‌ ಕೊಟ್ಟಿದ್ದೇವೆ’ ಎಂದು ತಿಳಿಸಿದರು.

‘ಸುರೇಶ ಅಂಗಡಿ ಅವರು 17 ವರ್ಷಗಳಲ್ಲಿ ₹16,495 ಕೋಟಿ ವೆಚ್ಚದ ಕಾಮಗಾರಿ ಮಾಡಿಸಿದ್ದಾರೆ. ₹210 ಕೋಟಿಯಲ್ಲಿ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ, ವಿಮಾನ ನಿಲ್ದಾಣ ಎರಡನೇ ಟರ್ಮಿನಲ್, ಪಾಸ್‌ಪೋರ್ಟ್‌ ಕಚೇರಿ, ₹927 ಕೋಟಿ ವೆಚ್ಚದ ರೈಲು ಮಾರ್ಗ, ₹100 ಕೋಟಿಯಲ್ಲಿ ನಾಲ್ಕು ಮೇಲ್ಸೇತುವೆ, ₹3600 ಕೋಟಿ ವೆಚ್ಚದಲ್ಲಿ ರೈಲ್ವೆ ಡಬ್ಲಿಂಗ್‌ ಕಾಮಗಾರಿ, ರಿಂಗ್‌ ರಸ್ತೆ ಮಂಜೂರು ಎಲ್ಲ ಯಾರು ಮಾಡಿದ್ದಾರೆ. ನೀವೇನು ಕಣ್ಣು ಮುಚ್ಚಿಕೊಂಡು ಕುಳಿತಿದ್ದೀರಾ’ ಎಂದರು.

‘ಕೊರೊನಾ ದಿನಗಳಲ್ಲೂ ಸುರೇಶ ಅಂಗಡಿ ಜನರ ಮಧ್ಯೆ ನಿಂತು ಕೆಲಸ ಮಾಡಿದರು. ಜನ ಸೇವೆಗಾಗಿ ತಮ್ಮ ಪ್ರಾಣ ಬಿಟ್ಟರು. ಆಗ ಮೃಣಾಲ್‌ ಎಲ್ಲಿದ್ದರು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ ಪ್ರಶ್ನಿಸಿದರು.

ಬಿಜೆಪಿ ನಗರ ಘಟಕದ ವಕ್ತಾರ ಹಣಮಂತ ಕೊಂಗಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT