ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಈ ಸಾರಿ 15ರಿಂದ 20 ಸ್ಥಾನ ಗೆಲ್ಲುವ ಗುರಿ– ಸತೀಶ ಜಾರಕಿಹೊಳಿ

Published 18 ಮಾರ್ಚ್ 2024, 8:05 IST
Last Updated 18 ಮಾರ್ಚ್ 2024, 8:05 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 15ರಿಂದ 20 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ವಿವಿಧ ರಾಜಕೀಯ ಪಕ್ಷಗಳಿಗೆ ಮತ ಚಲಾಯಿಸುತ್ತಾರೆ. ಹಾಗಾಗಿ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲಲು ಸಾಧ್ಯವಿಲ್ಲ. ನಾವೂ ಅಂಥ ಹೇಳಿಕೆ ನೀಡುವುದಿಲ್ಲ. ಬಿಜೆಪಿ ಎದುರಿಸಲು ಮತ್ತು ನಮ್ಮ ಶಕ್ತಿಗೆ ಅನುಗುಣವಾಗಿ ಸ್ಥಾನ ಗೆಲ್ಲಲು ತಂತ್ರ ಹೆಣೆಯುತ್ತಿದ್ದೇವೆ’ ಎಂದರು.

‘ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀರಾಮ ಇದ್ದಾರೆ. ಶ್ರೀರಾಮನು ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿಯವರು ರಾಮನ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಹೆಚ್ಚಿನ ಪ್ರಯತ್ನ ನಡೆಸಿದ್ದಾರೆ. ಆದರೆ, ಎಲ್ಲ ಪಕ್ಷದವರೂ ರಾಮನನ್ನು ಪೂಜಿಸುತ್ತಾರೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಫನೆ ವೇಳೆ, ಅನೇಕ ಮನೆಗಳ ಮೇಲೆ ಕೇಸರಿ ಧ್ವಜ ಅಳವಡಿಸಲಾಗಿತ್ತು. ಅವರೆಲ್ಲರೂ ಬಿಜೆಪಿಯ ಮತದಾರರು ಎಂದರ್ಥವಲ್ಲ’ ಎಂದು ಹೇಳಿದರು.

‘ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿನ ಅಸಮಾಧಾನ ಮುನ್ನೆಲೆಗೆ ಬಂದಿತ್ತು. ಈಗಲೂ ಅದು ಮುಂದುವರಿದಿದೆ. ಆ ಪಕ್ಷದಿಂದ ದೂರ ಸರಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರೆ ಸ್ವಾಗತಿಸುತ್ತೇವೆ’ ಎಂದರು.

‘ರಮೇಶ ಕತ್ತಿ ಕಾಂಗ್ರೆಸ್‌ ಸೇರುತ್ತಾರಾ?’ ಎಂಬ ಪ್ರಶ್ನೆಗೆ, ‘ನಮ್ಮ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬರಲು ಯಾವುದೇ ಅಡೆತಡೆ ಇಲ್ಲ. ಆದರೆ, ಅವರಿಗೆ ಟಿಕೆಟ್‌ ಕೊಡುವ ಕುರಿತಾಗಿ ಪಕ್ಷದ ಹೈಕಮಾಂಡ್‌ನವರೇ ತೀರ್ಮಾನ ಕೈಗೊಳ್ಳುತ್ತಾರೆ’ ಎಂದರು.

‘ಮೋದಿ ಗೆಲ್ಲಿಸಿ, ದೇಶ ಉಳಿಸಿ’ ಎಂಬ ಕೆಲವರು ಅಭಿಯಾನ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸತೀಶ, ‘ಚುನಾವಣೆಯಲ್ಲಿ ಎಲ್ಲ ಪಕ್ಷದವರೂ ಒಂದಿಲ್ಲೊಂದು ತಂತ್ರ ಅನುಸರಿಸುತ್ತಾರೆ. ನಾವು ಸಂವಿಧಾನ ಉಳಿಸಿ, ಕಾಂಗ್ರೆಸ್‌ ಗೆಲ್ಲಿಸಿ ಎಂಬ ಅಭಿಯಾನ ನಡೆಸುತ್ತೇವೆ. ಬಿಜೆಪಿಯ ಹಿಂದುತ್ವದ ಅಜೆಂಡಾ ಎದುರಿಸಲು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

‘ಚಿಕ್ಕೋಡಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರೆ ಗೆಲ್ಲಬಹುದೆಂದು ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಅಲ್ಲಿನ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಈಗಾಗಲೇ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಬಾಕಿ ಇದೆ. ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿ, ಮಾ.20ರಂದು ಅಭಿಪ್ರಾಯ ಸಂಗ್ರಹ ಸಭೆ ನಡೆಯಲಿದೆ’ ಎಂದರು.

‘ಬೆಳಗಾವಿ ಕ್ಷೇತ್ರಕ್ಕೆ ಇನ್ನೂ ಟಿಕೆಟ್‌ ಘೋಷಿಸಿಲ್ಲ. ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂದು ಕಾದು ನೋಡುತ್ತಿದ್ದೀರಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದಕ್ಕೂ ನಮಗೂ ಸಂಬಂಧವಿಲ್ಲ. ಇನ್ನೂ ಕೆಲವು ಹಂತದ ಸಭೆ ಮಾಡಿ ಅಭ್ಯರ್ಥಿ ಅಂತಿಮಗೊಳಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT