ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರೊಂದಿಗೂ ಒಳ ಒಪ್ಪಂದವಾಗಿಲ್ಲ: ಕವಟಗಿಮಠ

Published 8 ಜೂನ್ 2024, 6:41 IST
Last Updated 8 ಜೂನ್ 2024, 6:41 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಬೇಕೆಂದು ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ್ದೇವೆ. ಆದರೆ, ಬೆಳಗಾವಿಯಲ್ಲಿ ಜನ ಕೈಹಿಡಿದಿದ್ದಾರೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ಕ್ಷೇತ್ರದಲ್ಲಿ ನಾನು ಸೇರಿದಂತೆ ಹೆಚ್ಚಿನ ನಾಯಕರು ಪ್ರಚಾರ ಕೈಗೊಂಡಿರಬಹುದು. ಆದರೆ, ಚಿಕ್ಕೋಡಿಯಲ್ಲೂ ಗೆಲುವಿಗೆ ಯತ್ನಿಸಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್‌ ಷಾ ಸೇರಿದಂತೆ ಅನೇಕ ನಾಯಕರು ಚಿಕ್ಕೋಡಿಗೆ ಬಂದು ಪ್ರಚಾರ ಮಾಡಿದ್ದಾರೆ. ಆದರೆ, ಸೋಲಿಗೆ ಕಾರಣ ಕಂಡುಕೊಳ್ಳುತ್ತೇವೆ. ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ’ ಎಂದರು.

‘ಬೆಳಗಾವಿ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್‌ ಗೆಲುವಿಗಾಗಿ ಅನೇಕ ನಾಯಕರು ಮತ್ತು ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಿದ್ದಾರೆ. ಭಾಷೆಗಿಂತ ರಾಷ್ಟ್ರ ಮೊದಲು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರವೊಂದರಲ್ಲೇ ಬಿಜೆಪಿಗೆ 73 ಸಾವಿರ ಮತಗಳ ಮುನ್ನಡೆ ಸಿಕ್ಕಿದೆ. ಈ ಗೆಲುವನ್ನು ಎಲ್ಲ ನಾಯಕರು ಮತ್ತು ಕಾರ್ಯಕರ್ತರ ಬಳಗಕ್ಕೆ ಅರ್ಪಿಸುತ್ತೇವೆ’ ಎಂದು ತಿಳಿಸಿದರು.

‘ತಮ್ಮ ಬೆಂಬಲಿಗರು ಅಭಿನಂದನೆ ಸಮಾರಂಭ ಹಮ್ಮಿಕೊಂಡಿದ್ದಕ್ಕೆ ಜಗದೀಶ ಶೆಟ್ಟರ್‌ ಹುಬ್ಬಳ್ಳಿಗೆ ಹೋಗಿರಬಹುದು. ಈಗ ಅವರು ಬೆಳಗಾವಿ ಸಂಸದ. ಬೆಳಗಾವಿ ನಗರದಲ್ಲೇ ವಾಸವಿದ್ದು, ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ಬೆಳಗಾವಿ ಕ್ಷೇತ್ರಕ್ಕೆ ಜಗದೀಶ ಶೆಟ್ಟರ್‌ ಅಭ್ಯರ್ಥಿ ಎಂದು ಘೋಷಿಸಲು ತಡವಾಯಿತು. ಇದರಿಂದಾಗಿ ಪ್ರಚಾರವೂ ವಿಳಂಬವಾಯಿತು. ಎರಡೂ ವಾರ ಮೊದಲೇ ಅಭ್ಯರ್ಥಿ ಘೋಷಿಸಿದ್ದರೆ, ಲೀಡ್‌ ಪ್ರಮಾಣ ಮತ್ತಷ್ಟು ಹೆಚ್ಚುತ್ತಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT