ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ರಾಜ್ಯದಲ್ಲಿ 14ರಿಂದ 17 ಸ್ಥಾನ ಗೆಲ್ಲುವ ನಿರೀಕ್ಷೆ: ಸತೀಶ

Published 18 ಮೇ 2024, 4:54 IST
Last Updated 18 ಮೇ 2024, 4:54 IST
ಅಕ್ಷರ ಗಾತ್ರ

ಬೆಳಗಾವಿ: ‘ನಮ್ಮ ಪಕ್ಷದವರ ಸಮೀಕ್ಷೆಯಂತೆ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 14ರಿಂದ 17 ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲುವ ನಿರೀಕ್ಷೆಯಿದೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ನಮಗೆ ದೊಡ್ಡ ಲಾಭವಾಗಲಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಕಾಂಗ್ರೆಸ್‌ಗೆ ಪೂರಕವಾದ ವಾತಾವರಣ ಹೆಚ್ಚಿದೆ. ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳನ್ನೂ ಸೇರಿದಂತೆ 14ರಿಂದ 17 ಸ್ಥಾನ ಗೆಲ್ಲುತ್ತೇವೆ’ ಎಂದರು.

‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಚಿವರ ಮಕ್ಕಳು ಸ್ಪರ್ಧಿಸಿದ್ದರಿಂದ ಪಕ್ಷಕ್ಕೆ ಅನುಕೂಲವಾಗಿದೆ. ನಾವು ಸಚಿವರ ಮಕ್ಕಳನ್ನು ಕಣಕ್ಕಿಳಿಸಿದಾಗ, ಬಿಜೆಪಿಯವರು ಟೀಕಿಸಿದ್ದರು. ಆದರೆ, ದೇಶದಾದ್ಯಂತ ಬಿಜೆಪಿ ನಾಯಕರೇ ತಮ್ಮ ಸಂಬಂಧಿಕರನ್ನು ಕಣಕ್ಕಿಳಿಸಿದ್ದಾರೆ. ಈ  ವ್ಯವಸ್ಥೆ ಎಲ್ಲ ಪಕ್ಷಗಳಲ್ಲೂ ಇದೆ’ ಎಂದರು.

‘ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿವೆ’ ಎಂಬ ಆರೋಪ ತಳ್ಳಿಹಾಕಿದ ಸತೀಶ, ‘ಚಿಕ್ಕೋಡಿಯಲ್ಲಿ ಪ್ರಚಾರಕ್ಕೆ ಬಿ.ಎಸ್‌.ಯಡಿಯೂರಪ್ಪ ಏಕೆ ಬರಲಿಲ್ಲ ಎಂಬುದಕ್ಕೆ ಬಿಜೆಪಿಯವರೇ ಉತ್ತರಿಸಬೇಕು. ಯಡಿಯೂರಪ್ಪ ಚಿಕ್ಕೋಡಿ ಏಕೆ ಬರಲಿಲ್ಲ ಎನ್ನುವವರು, ಬಸನಗೌಡ ಪಾಟೀಲ ಯತ್ನಾಳ ಪ್ರಚಾರಕ್ಕಾಗಿ ಬೆಳಗಾವಿ ಕ್ಷೇತ್ರಕ್ಕೆ ಏಕೆ ಬರಲಿಲ್ಲ ಎಂದು ಕೇಳಿ’ ಎಂದು ಪ್ರಶ್ನಿಸಿದರು.

ಸಚಿವ ಜಿ.ಪರಮೇಶ್ವರ್‌ ಅವರನ್ನು ನೀವು ಭೇಟಿಯಾದ ಸಂದರ್ಭ ದಲಿತ ಸಿ.ಎಂ ಬಗ್ಗೆ ಚರ್ಚೆಯಾಗಿದೆಯೇ ಎಂಬ ಪ್ರಶ್ನೆಗೆ, ‘ಅಂಥದ್ದೇನೂ ಚರ್ಚೆಯಾಗಿಲ್ಲ. ಲೋಕಸಭೆ ಚುನಾವಣೆ, ‍ಪಕ್ಷ ಸಂಘಟನೆ ಕುರಿತು ಚರ್ಚಿಸಿದ್ದೇವಷ್ಟೇ’ ಎಂದರು.

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಸಂಪುಟ ಪುನರ್‌ರಚನೆ ಆಗುವುದೇ ಎಂಬ ಪ್ರಶ್ನೆಗೆ, ‘ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದರು.

ಶಾಸಕ ಆಸೀಫ್‌ ಸೇಠ್‌, ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲ, ಸುನೀಲ ಹನುಮನ್ನವರ, ರಾಜಾ ಸಲೀಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT