ಮಹಾಲಿಂಗಪುರ: ಪಟ್ಟಣದ ಚನ್ನಗಿರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಾರ್ವಜನಿಕ ಜಟೋತ್ಸವ ಆಯೋಜನೆಯೊಂದಿಗೆ ಪವಾಡ ಪುರುಷ ಮಹಾಲಿಂಗೇಶ್ವರ ಜಾತ್ರೆಗೆ ಅದ್ದೂರಿ ಚಾಲನೆ ನೀಡಲಾಯಿತು.
ಶಿವಭಕ್ತೆ ಸಿದ್ದಾಯಿ ತಾಯಿಗೆ ಮಹಾಲಿಂಗೇಶ್ವರರು ನೀಡಿದ ಪವಿತ್ರ ಜಡೆಯನ್ನು ಹೂವುಗಳಿಂದ ಅಲಂಕೃತವಾದ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮೂಲಕ ಮಹಾಲಿಂಗೇಶ್ವರ ದೇವಸ್ಥಾನದಿಂದ ಚನ್ನಗಿರೇಶ್ವರ ದೇವಸ್ಥಾನಕ್ಕೆ ತರಲಾಯಿತು.
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವಕ್ಕೆ ಹಾಗೂ ಜನಪದ ಕಲಾತಂಡಗಳ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ಚಾಲನೆ ನೀಡಲಾಯಿತು.
ಮಿರ್ಜಿಯ ಕುದುರೆ ಕುಣಿತ, ಶಿರೋಳದ ತಾಷಾರಮ ಡೋಲು, ಗೋವನಕೊಪ್ಪದ ಗೊಂಬೆ ಕುಣಿತ, ಬಳ್ಳಾರಿಯ ಹಕ್ಕಿ-ಪಿಕ್ಕಿ ಕುಣಿತ, ತಿಕೋಟಾದ ಸತ್ತಿಗೆ ಕುಣಿತ, ಜಾಂಝ ಪತಕ್, ಸಂಬಾಳ ಮಜಲು, ಕರಡಿ ಮಜಲು ಸೇರಿದಂತೆ ವಿವಿಧ ಮಂಗಲ ವಾದ್ಯಗಳು ಮೆರವಣಿಗೆಗೆ ಕಳೆ ಕಟ್ಟಿದವು. ಕಂಡ್ಯಾಳ ಬಾಸಿಂಗ, ನಂದಿಕೋಲು, ಉಚ್ಛಾಯಿ ಬಂಡಿ ಗಮನ ಸೆಳೆದವು.
ಚನ್ನಗಿರೇಶ್ವರ ದೇವಸ್ಥಾನದಲ್ಲಿ ಮಹಾಲಿಂಗೇಶ್ವರ ಮಠದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಪವಿತ್ರ ಗಂಧೋದಕ, ಗುಗ್ಗಳ ಧೂಮದಿಂದ ಜಡೆಯನ್ನು ತೊಳೆದು ಅಭಿಷೇಕ ಮಾಡಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ ಜಟೋತ್ಸವದ ದರ್ಶನ ಪಡೆದರು. ಜಟೋತ್ಸವ ನಿಮಿತ್ತ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಿತು. ಜಾತ್ರೆ ಅಂಗವಾಗಿ ಮಹಾಲಿಂಗೇಶ್ವರ ಹಾಗೂ ಚನ್ನಗಿರೇಶ್ವರ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು.
//ಬಾಕ್ಸ್//
ಮಹಾರಥೋತ್ಸವ ಇಂದು
ಜಾತ್ರೆ ಅಂಗವಾಗಿ ಸೆ.18 ರಂದು ಸಂಜೆಯಿಂದ ಅಹೋರಾತ್ರಿ ಮಹಾಲಿಂಗೇಶ್ವರರ ಮಹಾರಥೋತ್ಸವ ನಡೆಯಲಿದೆ. ಮಹಾಲಿಂಗೇಶ್ವರ ದೇವಸ್ಥಾನದಿಂದ ಚನ್ನಗಿರೇಶ್ವರ ದೇವಸ್ಥಾನದವರೆಗೆ ರಥ ಸಾಗಲಿದೆ.
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಜೆ ‘ಹರಿವಾಣ ಕಟ್ಟೆ ಲೂಟಿ’ ಕಾರ್ಯಕ್ರಮ ನಡೆಯಲಿದ್ದು, ನಂತರ ರಥೋತ್ಸವ ನಡೆಯಲಿದೆ. ಸೆ.19 ರಂದು ಚನ್ನಗಿರೇಶ್ವರ ದೇವಸ್ಥಾನದಿಂದ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಅಹೋರಾತ್ರಿ ಮರುರಥೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.