ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸಚಿವರ ಬೆಳಗಾವಿ ಪ್ರವಾಸ ಮುಂದೂಡಿಕೆ

Last Updated 1 ಡಿಸೆಂಬರ್ 2022, 17:22 IST
ಅಕ್ಷರ ಗಾತ್ರ

ಬೆಳಗಾವಿ: ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ, ಶಂಭುರಾಜ್ ದೇಸಾಯಿ ಹಾಗೂ ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ ಮಾನೆ ಅವರ ಬೆಳಗಾವಿ ಪ್ರವಾಸವನ್ನು ಡಿ.6ಕ್ಕೆ ಮುಂದೂಡಲಾಗಿದೆ.

‘ಡಿ.3ರಂದು ಬೆಳಗಾವಿಗೆ ಹೋಗಿ ವಿವಿಧ 10 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಡಿ. 6ರಂದು ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನಾಚರಣೆ ಇರುವ ಕಾರಣ, ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ದಲಿತ ಸಂಘಟನೆಗಳು ಕೋರಿವೆ. ಹೀಗಾಗಿ, ನಾನು ಮತ್ತು ಸಚಿವ ಶಂಭುರಾಜ್‌ ದೇಸಾಯಿ ಪ್ರವಾಸ ಮುಂದೂಡಿದ್ದೇವೆ’ ಎಂದು ಸಚಿವ ಚಂದ್ರಕಾಂತ ಪಾಟೀಲ ಟ್ವೀಟ್‌ ಮಾಡಿದ್ದಾರೆ.

ಮಹಾರಾಷ್ಟ್ರ ಸಚಿವರ ಸಭೆಗಳಿಗಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಕಾರ್ಯಕರ್ತರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಗಡಿ ವಿವಾದದ ಮೂಲಕ ಕನ್ನಡಿಗರನ್ನು ಮತ್ತೆ ಕೆಣಕಲು ತಂತ್ರ ರೂಪಿಸುತ್ತಿದ್ದರು. ಗುರುವಾರ ಕೂಡ ಇಡೀ ದಿನ ಇದರ ಭರದ ಸಿದ್ಧತೆಗಳನ್ನು ನಡೆಸಿದ್ದರು.

ಮಾರ್ಗ ಬದಲಿಸಿದ ರಾಜ್‌ ಠಾಕ್ರೆ

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಗುರುವಾರ ಬರಬೇಕಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್‌ ಠಾಕ್ರೆ ಅವರು, ಗಡಿ ವಿವಾದ ತಾರಕಕ್ಕೇರಿದ ಕಾರಣ ತಮ್ಮ ಪ್ರವಾಸದ ಮಾರ್ಗ ಬದಲಿಸಿದರು.

ಮಹಾರಾಷ್ಟ್ರದ ಸಾವಂತವಾಡಿಯಲ್ಲಿ ಬುಧವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಗುರುವಾರ ರಸ್ತೆ ಮೂಲಕ ಬೆಳಗಾವಿಗೆ ಬಂದು, ಇಲ್ಲಿಂದ ವಿಮಾನದ ಮೂಲಕ ಮುಂಬೈಗೆ ತೆರಳುವವರಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಎಂಇಎಸ್‌ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದರು.

ಆದರೆ, ‘ಗಡಿ ವಿಚಾರವಾಗಿ ನಡೆಯುತ್ತಿರುವ ಗಲಾಟೆಯ ರಗಳೆಯೇ ಬೇಡ’ ಎಂದು ಅವರು ಗೋವಾ ಮೂಲಕ ಮುಂಬೈಗೆ ತೆರಳಿದರು ಎಂದು ಎಂಇಎಸ್‌ ಹಿರಿಯ ಮುಖಂಡರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಂವಿಧಾನಬದ್ಧ ನಿಲುವು– ಸಿ.ಎಂ

ಬೆಂಗಳೂರು: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಪ್ರಕರಣ ವಿಚಾರಣೆಗೆ ಬರಲಿದ್ದು, ಸಂವಿಧಾನಬದ್ಧವಾಗಿ ಮತ್ತು ಕಾನೂನಿನ ಪ್ರಕಾರವೇ ರಾಜ್ಯದ ನಿಲುವು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವಹನುಮಂತಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಮಹಾರಾಷ್ಟ್ರದ ಅರ್ಜಿ ಸಮರ್ಥನೀಯ ಅಲ್ಲ ಎನ್ನುವುದು ನಮ್ಮ ನಿಲುವು. ಅದನ್ನೇ ನಮ್ಮ ವಕೀಲರು ವಾದ ಮಂಡಿಸಿದ್ದಾರೆ. ನಮ್ಮ ನಿಲುವು ಸಂವಿಧಾನಬದ್ಧ ಹಾಗೂ ಕಾನೂನಾತ್ಮಕವಾಗಿದೆ. ಎಲ್ಲಾ ಅಂಶಗಳ ಬಗ್ಗೆ ವಕೀಲರು ವಾದ ಮಾಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT