ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ. 25ಕ್ಕೆ 'ಮಹಾತ್ಮರ ಚರಿತಾಮೃತ’ ಪುಸ್ತಕ ಬಿಡುಗಡೆ

ಬೆಂಗಳೂರಿನಲ್ಲಿ ಸಮಾರಂಭ, ಸ್ವಾಮೀಜಿಗಳ ಸಮಾಗಮ
Last Updated 9 ಸೆಪ್ಟೆಂಬರ್ 2021, 13:05 IST
ಅಕ್ಷರ ಗಾತ್ರ

ಬೆಳಗಾವಿ: ‘ಶರಣರು ಹಾಗೂ ಸೂಫಿಸಂತರ ಜೀವನ ಪರಿಚಯಿಸುವ, ಎಲ್ಲ ಧರ್ಮಗಳ ಪರಂಪರೆ ತಿಳಿಸುವ ಉದ್ದೇಶದಿಂದ ಅಥಣಿಯ ಮೋಟಗಿಮಠದ ಪ್ರಭು ಚನ್ನಬಸವ (ಅಥಣೀಶ) ಸ್ವಾಮೀಜಿ ರಚಿಸಿರುವ ‘ಮಹಾತ್ಮರ ಚರಿತಾಮೃತ’ ಪುಸ್ತಕ ಬಿಡುಗಡೆ ಸಮಾರಂಭ ಸೆ.25ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯಲಿದೆ’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ತಿಳಿಸಿದರು.

ಇಲ್ಲಿನ ನಾಗನೂರು ರುದ್ರಾಕ್ಷಿ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡುವರು. 1,100 ಪುಟಗಳ ಬೃಹತ್ ಗ್ರಂಥ ಇದಾಗಿದ್ದು, ಇದೊಂದು ನೂತನ ಪ್ರಯೋಗವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸುತ್ತೂರು ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ಶಿವಮೂರ್ತಿ ಮುರುಘಾ ಶರಣರು, ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಬಸವಲಿಂಗ ಪಟ್ಟದ್ದೇವರು, ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’.

ಹಲವರು ಭಾಗಿ: ‘ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್ ಉದ್ಘಾಟಿಸುವರು. ವಸತಿ ಸಚಿವ ವಿ. ಸೋಮಣ್ಣ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಬಿ.ಎಸ್. ಪರಮಶಿವಯ್ಯ ಮುಖ್ಯಅತಿಥಿಯಾಗಿ ಪಾಲ್ಗೊಳ್ಳುವರು. ನಿವೃತ್ತ ಕುಲಪತಿ ಮಲ್ಲೇಶ್ವರಂ ಜಿ. ವೆಂಕಟೇಶ್ ಗ್ರಂಥ ಪರಿಚಯಿಸುವರು. ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮೊದಲಾದವರು ಉಪಸ್ಥಿತರಿರುವರು’ ಎಂದು ಮಾಹಿತಿ ನೀಡಿದರು.

‘ಆದಿ ಕವಿ ವಾಲ್ಮೀಕಿಯಿಂದ ಆಧುನಿಕ ಕವಿ ರವೀಂದ್ರನಾಥರವರೆಗೆ ಅನೇಕ ಕವಿಗಳು, ಮಹಾವೀರ, ಬುದ್ಧ, ಬಸವಣ್ಣರಂತಹ ದಾರ್ಶನಿಕರು, ಶಂಕರ ರಾಮಾನುಜ ಮಧ್ವರಂತಹ ಆಚಾರ್ಯರು, ಯೇಸು, ಮಹಮ್ಮದ್ ಪೈಗಂಬರ್, ಗುರುನಾನಕ್‌ ಮೊದಲಾದ ಧರ್ಮ ಪ್ರವರ್ತಕರು, ಜ್ಞಾನೇಶ್ವರ ತುಕಾರಾಮ, ಸೇವಾಲಾಲ್, ರಾಮದಾಸರಂತಹ ಸಂತರು, ಕನಕ, ಪುರಂದರದಾಸರು, ಅಕ್ಕ, ಅಲ್ಲಮ, ಸಿದ್ಧರಾಮೇಶ್ವರರಂತಹ ಯೋಗ ಸಾಧಕರ ಕುರಿತು ಕಟ್ಟಿಕೊಡಲಾಗಿದೆ. ಒಟ್ಟು 216 ಧಾರ್ಮಿಕ ಹಾಗೂ ಸಾಮಾಜಿಕ ಚಿಂತಕರ ಜೀವನ ಪರಿಚಯವಿದೆ. ಕರ್ನಾಟಕ, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ಬಿಹಾರ ಮತ್ತು ಆಂಧ್ರದ ಧಾರ್ಮಿಕ ಮುಖಂಡರು, ಸೂಫಿಸಂತರ ಕುರಿತು ಬರೆಯಲಾಗಿದೆ’.

ಗಡಿ ಮೀರುವ ಪ್ರಯತ್ನ: ‘ಜಾತಿ, ಮತ, ಪಂಥ, ಭಾಷೆ ಮತ್ತು ಗಡಿಗಳನ್ನು ಮೀರಿದ ಪ್ರಯತ್ನ ಇದಾಗಿದೆ. ಸಂಕುಚಿತ ಮನೋಭಾವ, ಅಸ್ಪೃಶ್ಯತೆ, ಅಂಧಶ್ರದ್ಧೆ, ಅನಕ್ಷರತೆ ನಿವಾರಿಸಲು ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ’ ಎಂದು ವಿವರಿಸಿದರು.

‘ಗ್ರಂಥವೊಂದರ ಬಿಡುಗಡೆ ಸಮಾರಂಭದಲ್ಲಿ ವಿವಿಧ ಮಠಗಳ ಪೀಠಾಧಿಪತಿಗಳು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿರುವುದು ವಿಶೇಷವಾಗಿದೆ’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಂಥ ರಚಿಸಿದ ಅಥಣಿ ಮೋಟಗಿ ಮಠದ ಚನ್ನಬಸವ ಸ್ವಾಮೀಜಿ, ‘ಕೋವಿಡ್ ಕಾಲದ ಎರಡು ವರ್ಷವನ್ನು ಗ್ರಂಥ ರಚನೆಗಾಗಿ ಮೀಸಲಿಟ್ಟೆ. 500ಕ್ಕೂ ಅಧಿಕ ಪುಸ್ತಕಗಳ ಪರಾಮರ್ಶೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಗ್ರಂಥದಲ್ಲಿ ಮಾಹಿತಿ ಲಭ್ಯವಿಲ್ಲದ ಸಂದರ್ಭದಲ್ಲಿ ಹಲವು ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದೆ’ ಎಂದು ತಿಳಿಸಿದರು.

ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ಮುಖಂಡ ಶಂಕರ ಗುಡಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT