ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲ್ಲಿಸಿದವರ ‘ಋಣ’ ಮರೆತ ಕುಮಠಳ್ಳಿ!

ರಮೇಶ ಜಾರಕಿಹೊಳಿ ನಿಷ್ಠನೆಂಬ ಸಂದೇಶ ರವಾನೆ
Last Updated 7 ಜುಲೈ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮಗೆ ‘ಹೆಚ್ಚು ನೆರವಾದ’ ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಹಿಂಬಾಲಿಸುವ ಮೂಲಕ ‘ಋಣ ಸಂದಾಯದ ಕಾಣಿಕೆ’ ಕೊಟ್ಟಿರುವ ಅಥಣಿಯ ಶಾಸಕ ಮಹೇಶ ಕುಮಠಳ್ಳಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕ್ಷೇತ್ರದ ಮತದಾರರ ಋಣವನ್ನು ಮರೆತು ಆಕ್ರೋಶಕ್ಕೆ ತುತ್ತಾಗಿದ್ದಾರೆ.

‘ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ’ ಎಂದು ಹೇಳುತ್ತಲೇ ಬಂದಿದ್ದ ಅವರು, ಅತೃಪ್ತರ ಗುಂಪಿನಲ್ಲಿ ರಾಜಾರೋಷವಾಗಿ ಗುರುತಿಸಿಕೊಂಡು ವೈಯಕ್ತಿಕ ‘ಹಿತ’ ಸಾಧನೆ ಮಾಡಿಕೊಂಡಿದ್ದಾರೆ. ಅವರನ್ನು ಗೆಲ್ಲಿಸಲು ಶ್ರಮಿಸಿದ ಬಹುಜನರನ್ನು ಕಡೆಗಣಿಸಿ, ಸರ್ಕಾರವನ್ನೇ ಕೆಡವಲು ಮುಂದಾದವರೊಂದಿಗೆ ‘ಕೈ’ ಜೋಡಿಸಿ ಮತದಾರರಿಗೆ ಕೊಟ್ಟಿದ್ದ ಮಾತು ತಪ್ಪಿದ್ದಾರೆ. ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದ ಅವರ ಇನ್ನೊಂದು ಮುಖವನ್ನು ಅನಾವರಣಗೊಳಿಸಿದ್ದಾರೆ.

ಎಲ್ಲರೂ ದುಡಿದಿದ್ದರು:

ಅಥಣಿ ಕ್ಷೇತ್ರದಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಹೇಶ ಕುಮಠಳ್ಳಿ ಗೆಲ್ಲುವುದಕ್ಕೆ ರಮೇಶ ಜಾರಕಿಹೊಳಿ ಮಾತ್ರ ಕಾರಣವಾಗಿರಲಿಲ್ಲ. ಮುಖಂಡ ಸತೀಶ ಜಾರಕಿಹೊಳಿ ಹಾಗೂ ಆ ಭಾಗದ ಕಾಂಗ್ರೆಸ್ ಮುಖಂಡರು ಕೂಡ ಕೈಜೋಡಿಸಿದ್ದರು. ಮುಖ್ಯವಾಗಿ ಮತದಾರರು ಅವರ ಮೇಲೆ ವಿಶ್ವಾಸವಿಟ್ಟು, ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದರು. ಇವರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಶಾಸಕರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಸ್ವತಃ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮನವೊಲಿಕೆಗೂ ಜಗ್ಗದೇ, ರಾಜಕೀಯ ಗುರು ರಮೇಶ ಜೊತೆ ‘ಭಿನ್ನ ಹಾದಿ’ ತುಳಿದಿದ್ದಾರೆ.

ಹಿಂದೊಮ್ಮೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೇ ಇದ್ದಾಗ ‘ಶಾಸಕರು ಕಾಣೆಯಾಗಿದ್ದಾರೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಹಾಕಿ ಬಿಸಿ ಮುಟ್ಟಿಸಿದ್ದ ಮತದಾರರು, ರಾಜೀನಾಮೆಯನ್ನೇ ನೀಡಿರುವ ತಮ್ಮ ‍ಪ್ರತಿನಿಧಿಯ ಬಗ್ಗೆ ಸಿಟ್ಟು ಹೊರಹಾಕುತ್ತಿದ್ದಾರೆ. ‘ಮತಕ್ಕೆ ನಾವು ಬೇಕು; ರಾಜೀನಾಮೆಯಂತಹ ತೀರ್ಮಾನ ಕೈಗೊಳ್ಳುವಾಗ ನಮ್ಮನ್ನು ಕಡೆಗಣಿಸಿರುವುದು ಸರಿಯೇ’ ಎಂಬ ಪ್ರಶ್ನೆ ಅವರದಾಗಿದೆ.

ಲೋಕಸಭಾ ಚುನಾವಣೆಯಲ್ಲೂ ಹಿನ್ನಡೆ:

ಲೋಕಸಭೆ ಚುನಾವಣೆಯಲ್ಲೂ ಪಕ್ಷದ ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಪರವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ. ಪರಿಣಾಮ, ಅಲ್ಲಿ ಕಮಲ ಅರಳುವುದಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ ಅವರ ನಡೆಯ ವಿರುದ್ಧ ಪಕ್ಷದ ಮಟ್ಟದಲ್ಲೂ ಆಕ್ರೋಶ ಭುಗಿಲೆದ್ದಿದೆ. ಏಕೆಂದರೆ, ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ. ವಿಜೇತ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅಲ್ಲಿ 95,593 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಅವರಿಗೆ 62,070 ಮತಗಳು ಮಾತ್ರ ಬಂದಿದ್ದವು.

‘ಯಾವ್ಯಾವುದೋ ಕಾರಣಕ್ಕೇಕೆ ನೀವು ರಾಜೀನಾಮೆ ಕೊಡಬೇಕು? ಬರಿದಾಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಹರಿಸದಿರುವ ಕ್ರಮ ಖಂಡಿಸಿ ರಾಜೀನಾಮೆ ಕೊಡಿ. ಆಗ ನಿಮ್ಮೊಂದಿಗೆ ನಾವು ನಿಲ್ಲುತ್ತೇವೆ’ ಎಂದು ಅಥಣಿಯ ಹೋರಾಟ ಸಮಿತಿಯವರು ಹೇಳಿದ್ದರು. ಆಗ, ಜನರಿಗಾಗಿ ರಾಜೀನಾಮೆ ಕೊಡದೇ ಸುಮ್ಮನಿದ್ದ ಶಾಸಕ ಈಗ ತನ್ನ ಲಾಭಕ್ಕಾಗಿ ರಾಜೀನಾಮೆ ನೀಡಿದ್ದಾರೆ’ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

‘ಹಲವು ಬಾರಿಗೆ ಬುದ್ಧಿ ಹೇಳಿದ್ದೆ. ಜನರು ಯಾವ ಉದ್ದೇಶಕ್ಕಾಗಿ ಬೆಂಬಲಿಸಿದ್ದಾರೆ ಎನ್ನುವುದನ್ನು ಮರೆಯಬಾರದು. ಅವರಿಗೆ ಸ್ಪಂದಿಸಬೇಕು. ಆ ಕಡೆ ಈ ಕಡೆ ಹೋಗುವ ಮನಸ್ಸು ಮಾಡಬೇಡಿ ಎಂದು ತಿಳಿಸಿದ್ದೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ ಎಂದು ಅವರೂ ಹೇಳಿದ್ದರು. ಈಗ ದಿಢೀರ್ ರಾಜೀನಾಮೆ ಕೊಟ್ಟಿರುವುದು ಆಘಾತ ಮೂಡಿಸಿದೆ; ನೋವು ನೀಡಿದೆ’ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಪ್ರತಿಕ್ರಿಯಿಸಿದರು.

ಭುಗಿಲೆದ್ದ ಆಕ್ರೋಶ

ಜೆಡಿಎಸ್ ಜಿಲ್ಲಾ ಘಟಕದ ವಕ್ತಾರ ಶ್ರೀಶೈಲ ಫಡಗಲ್ ಫೇಸ್‌ಬುಕ್‌ನ ತಮ್ಮ ಖಾತೆಯಲ್ಲಿ ಈ ಶಾಸಕರ ಫೋಟೊ ಹಾಕಿ ‘ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದು ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಲವರು ಶಾಸಕರನ್ನು ಕಟುವಾಗಿ ನಿಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT