ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳ ಹೂಡಿಕೆಗೆ ರುವಾಂಡಾ ಮೊದಲ ಆದ್ಯತೆಯಾಗಿರಲಿ: ಜಾಕ್ವೆಲಿನ್ ಮುಕಂಜಿರಾ

Published : 8 ಸೆಪ್ಟೆಂಬರ್ 2024, 16:19 IST
Last Updated : 8 ಸೆಪ್ಟೆಂಬರ್ 2024, 16:19 IST
ಫಾಲೋ ಮಾಡಿ
Comments

ಬೆಳಗಾವಿ: ‘ಪೂರ್ವ ಆಫ್ರಿಕಾ ರಾಷ್ಟ್ರಗಳಲ್ಲಿ ವ್ಯಾಪಾರ-ವಹಿವಾಟು ನಡೆಸಲು ಮತ್ತು ಬಂಡವಾಳ ಹೂಡಲು ಮುಂದಾಗುವ ಉದ್ಯಮಿಗಳಿಗೆ ರುವಾಂಡಾ ದೇಶವೇ ಮೊದಲ‌ ಆದ್ಯತೆಯಾಗಿರಲಿ’ ಎಂದು ರುವಾಂಡಾದ ಹೈಕಮಿಷನರ್‌ ಜಾಕ್ವೆಲಿನ್ ಮುಕಂಜಿರಾ ಹೇಳಿದರು.

ಇಲ್ಲಿ ಭಾನುವಾರ ನಡೆದ ಸ್ಥಳೀಯ ಉದ್ಯಮಿಗಳು ಹಾಗೂ ಬಂಡವಾಳ ಹೂಡಿಕೆದಾರರ ಸಭೆಯಲ್ಲಿ ಅವರು ಮಾತನಾಡಿದರು.

‘ಇ-ಕಾಮರ್ಸ್, ಇ-ಸರ್ವಿಸ್‌ ಸೇರಿ ವಿವಿಧ ರಂಗಗಳಲ್ಲಿ ನಾವು ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದ್ದೇವೆ. ಬಂಡವಾಳ ಹೂಡಿಕೆಗೆ ಪೂರಕವಾದ ತೆರಿಗೆ ಪದ್ಧತಿ ಜಾರಿಯಲ್ಲಿದೆ. ವ್ಯಾಪಾರಿ ಸ್ನೇಹಿ ವಾತಾವರಣವೂ ನಮ್ಮಲ್ಲಿದೆ. ಪೂರ್ವ ಆಫ್ರಿಕಾದಲ್ಲಿ ಆರ್ಥಿಕತೆ ಬೆಳವಣಿಗೆಯಲ್ಲಿ ಕಳೆದ 11 ವರ್ಷಗಳಿಂದ ನಾವೇ ಮುಂದಿದ್ದೇವೆ. ಕೃಷಿ, ಆರೋಗ್ಯ, ಶಿಕ್ಷಣ, ಗಣಿಗಾರಿಕೆ, ಇಂಧನ ಮತ್ತಿತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶಗಳಿವೆ. ಕೈಗಾರಿಕೋದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರು ರುವಾಂಡಾಗೆ ಬರಲು ಇಚ್ಛಿಸಿದರೆ, ಮುಕ್ತವಾಗಿ ಸ್ವಾಗತಿಸಲಾಗುವುದು’ ಎಂದು ತಿಳಿಸಿದರು.

‘ನಮ್ಮಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ಪಾರದರ್ಶಕ ಹಾಗೂ ಉದ್ಯೋಗ ಸ್ನೇಹಿ ವಾತಾವರಣವಿದ್ದು, ಸುರಕ್ಷಿತ ದೃಷ್ಟಿಯಿಂದಲೂ ನಮ್ಮ ದೇಶ ಸೂಕ್ತವಾಗಿದೆ. ನಮ್ಮಲ್ಲಿ ಉದ್ಯಮ ಸ್ಥಾಪನೆಗೆ ಆರೇ ತಾಸು ಸಾಕು. ಒನ್ ಸ್ಟಾಪ್ ಸೆಂಟರ್ ಮಾದರಿಯಲ್ಲಿ 200 ಬಗೆಯ ಅನುಮತಿಗಳನ್ನು ಸರ್ಕಾರವೇ ಉಚಿತವಾಗಿ ನೀಡುತ್ತದೆ’ ಎಂದು ಹೇಳಿದರು.

‘ಮಹಿಳಾ ಸಬಲೀಕರಣ ಹಾಗೂ ಲಿಂಗ ಸಮಾನತೆಗೆ ರುವಾಂಡಾ ಆದ್ಯತೆ ಕೊಟ್ಟಿದೆ. ಹಾಗಾಗಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರೇ ಸಂಸದರಾಗಿದ್ದಾರೆ. ನಾವು ಭಾರತದಿಂದ ಸ್ಟೀಲ್, ಔಷಧ ಸಾಮಗ್ರಿ ಮತ್ತಿತರ ವಸ್ತು ಆಮದು ಮಾಡಿಕೊಳ್ಳುತ್ತಿದ್ದೇವೆ’ ಎಂದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಈ ಸಭೆಯಿಂದ ಎರಡೂ ದೇಶಗಳ ಮಧ್ಯೆ ವ್ಯಾವಹಾರಿಕ ಸಂಬಂಧ ಗಟ್ಟಿಗೊಳ್ಳಲಿದೆ’ ಎಂದರು.

ಶಾಸಕ ಆಸೀಫ್‌ ಸೇಠ್, ನಗರ ಪೊಲೀಸ್ ಕಮಿಷನರ್‌ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಇದ್ದರು.

–––––––––

‘ರುವಾಂಡಾದಲ್ಲಿ ಕ್ರೀಡಾ ಶಾಲೆ ಸ್ಥಾಪನೆ’

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ‘ವಿವಿಧ ರಂಗಗಳಲ್ಲಿ ಅಭಿವೃದ್ಧಿಯತ್ತ ಸಾಗಿರುವ, ಸ್ವಚ್ಛ ನಗರವಾಗಿರುವ ರುವಾಂಡಾದಲ್ಲಿ ಭಾರತೀಯ ಕ್ರೀಡಾಶಾಲೆ ಆರಂಭಿಸಲು ನಾನು ಉದ್ದೇಶಿಸಿದ್ದೇನೆ. ಇದಕ್ಕಾಗಿ ಕೆಲವು ಜಾಗವನ್ನೂ ಗುರುತಿಸಿದ್ದೇನೆ’ ಎಂದು ತಿಳಿಸಿದರು.

‘ಅಲ್ಲಿ ಉದ್ದಿಮೆಗಳ ಸ್ಥಾಪನೆಗೆ ಹೆಚ್ಚಿನ ಅವಕಾಶಗಳಿವೆ. ಹಾಗಾಗಿ ಜಿಲ್ಲೆಯ ಉದ್ಯಮಿದಾರರು ಈ ಬಗ್ಗೆ ಆಸಕ್ತಿ ತೋರಬೇಕು. ಉದ್ಯಮಿಗಳು ಸಿಂಗಾಪುರದತ್ತ ಹೋದಾಗ, ರುವಾಂಡಾಕ್ಕೆ ತಪ್ಪದೆ ಭೇಟಿ ಕೊಡಬೇಕು’ ಎಂದರು.

‘ರುವಾಂಡಾದಲ್ಲಿ ಹೂಡಿಕೆಗೆ ಲಭ್ಯವಿರುವ ಅವಕಾಶಗಳ ಕುರಿತು ತಿಳಿಸಲು ಈ ಸಭೆ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT