ಬುಧವಾರ, ಅಕ್ಟೋಬರ್ 21, 2020
22 °C
ತಲೆನೋವಾಗಿರುವ ‘ಡೆಬ್ರಿಸ್‌’ ನಿರ್ವರ್ಹಣೆ

ತ್ಯಾಜ್ಯ ವಿಲೇವಾರಿಗೆ ‘ಅಡ್ಡಿ’ಗಳ ‘ಗುಡ್ಡ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಉಂಟಾಗಿರುವ ಹಲವು ಸಮಸ್ಯೆಗಳ ‘ಅಡ್ಡಿ’ಯು ‘ಗುಡ್ಡ’ವಾಗಿಯೇ ಪರಿಣಮಿಸಿದೆ.

ಜಿಲ್ಲಾ, ತಾಲ್ಲೂಕು, ಪಟ್ಟಣ ಹಾಗೂ ದೊಡ್ಡ ಗ್ರಾಮಗಳಲ್ಲಿ ಪ್ಲಾಸ್ಟಿಕ್‌ ಒಳಗೊಂಡಂತೆ ಎಲ್ಲ ರೀತಿಯ ಕಸದ ನಿರ್ವಹಣೆಯು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ನಗರವೂ ಸೇರಿದಂತೆ ಜಿಲ್ಲೆಯ ಯಾವುದೇ ಪಟ್ಟಣಗಳಲ್ಲಿ ಗಮನಿಸಿದರೂ ಕಸದ ರಾಶಿಗಳೇ ‘ಸ್ವಾಗತ’ ಹಾಗೂ ‘ಬೀಳ್ಕೊಡುಗೆ’ಯನ್ನು ಹೇಳುವುದನ್ನು  ಕಾಣಬಹುದು. ಹೊರವಲಯಗಳು ಅನಧಿಕೃತ ‘ಡಂಪಿಂಗ್‌ ಯಾರ್ಡ್‌’ನಂತೆ ಆಗಿ ಹೋಗಿವೆ ಹಾಗೂ ರಸ್ತೆ ಬದಿಗಳನ್ನು ಕಟ್ಟಡ ನಿರ್ಮಾಣ ತ್ಯಾಜ್ಯಕ್ಕೆ ‘ನೆಲೆ’ಯನ್ನಾಗಿ ಬಳಸಿಕೊಂಡಿರುವುದು ಕಂಡುಬರುತ್ತಿದೆ.

ಗ್ರಾಮ ಪಂಚಾಯಿತಿಗಳ ಮಟ್ಟದಲ್ಲೂ ಘನತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂಬ ಆದೇಶವಿದ್ದರೂ ಅದು ಇನ್ನೂ ಕಾಗದದಲ್ಲಿಯೇ ಉಳಿದಿದೆ. ಬೆರಳೆಣಿಕೆಯಷ್ಟು ಕಡೆಗಳಲ್ಲಿ ಮಾತ್ರವೇ ವಿಲೇವಾರಿ ಘಟಕ ಸ್ಥಾಪಿಸಿ ಕಸವನ್ನು ಸಂಪನ್ಮೂಲವನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

ಎನ್‌ಜಿಟಿ ಆದೇಶ ಪಾಲನೆಯಾಗಿಲ್ಲ:

ಹೋದ ವರ್ಷ ನಗರಕ್ಕೆ ಬಂದಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷ ನ್ಯಾ.ಸುಭಾಷ್ ಬಿ. ಅಡಿ ಅವರು ತ್ಯಾಜ್ಯ ಮತ್ತು ಡೆಬ್ರಿಸ್‌ ಅಸಮರ್ಪಕ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಹಸಿ, ಒಣ ಹಾಗೂ ಹಾನಿಕಾರಕ ಕಸ ವಿಂಗಡಣೆ ಮಾಡಲು ಪ್ರತಿ ವಾರ್ಡ್‌ನಲ್ಲೂ ವಾರ್ಡ್‌ ವಾಚ್ ಸಮಿತಿ ರಚನೆ ಮಾಡುವಂತೆ ಸೂಚಿಸಿದ್ದರು. ಸಾರ್ವಜನಿಕರು ನಿರ್ಲಕ್ಷ್ಯದಿಂದ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ಅಂತಹ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಪ್ಲಾಸ್ಟಿಕ್ ಬಳಕೆ ಮುಕ್ತ ಮಾಡಲು ಕ್ರಮ ವಹಿಸಬೇಕು. ಪ್ರತಿ ಅಂಗಡಿಗಳು, ಕಲ್ಯಾಣಮಂಟಪ, ಹೋಟೆಲ್‌ಗಳಲ್ಲಿ ಕಸ ವಿಲೇವಾರಿಗೆ ಎರಡು ಬಿನ್‌ಗಳನ್ನು ಇಡಬೇಕು.‌ ಕಸ ಬೇರ್ಪಡಿಸಿ ನೀಡುವಂತೆ ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದ್ದರು.

‘ನಿರುಪಯುಕ್ತ ಕಟ್ಟಡ ಸಾಮಗ್ರಿ ಹಾಕಲು ತಿಂಗಳಲ್ಲಿ ನಿರ್ದಿಷ್ಟ ಜಾಗ ಗುರುತಿಸಬೇಕು. ಅಲ್ಲಿಯೇ ಸಂಸ್ಕರಣೆ ಮಾಡಬೇಕು. ಸಾಗಿಸುವ ವಾಹನಗಳಿಗೆ ಜಿಪಿಎಸ್‌  ಸಾಧನ ಅಳವಡಿಸಬೇಕು. ಎಲ್ಲೆಂದರಲ್ಲಿ ಸುರಿಯುವವರ ವಿರುದ್ಧ ದಂಡ ವಿಧಿಸಬೇಕು. ಇ–ತ್ಯಾಜ್ಯ ಸಂಗ್ರಹಿಸಲು ಸರ್ಕಾರಿ ಕಚೇರಿಗಳಲ್ಲಿ ಸಂಗ್ರಹ ಕೇಂದ್ರ  ಸ್ಥಾ‍‍ಪಿಸಬೇಕು’ ಎಂದು ಸೂಚನೆ ನೀಡಿದ್ದರು. ಇದನ್ನು ಅನುಷ್ಠಾನಗೊಳಿಸುವ ಕಾಳಜಿಯನ್ನು ಸ್ಥಳೀಯ ಸಂಸ್ಥೆಗಳು ತೋರಿಲ್ಲ!

ಅಗ್ರಸ್ಥಾನ ಸಾಧ್ಯವಾಗಿಲ್ಲ: ಕೇಂದ್ರದಿಂದ ಸ್ವಚ್ಛತೆಗೆ ರ‍್ಯಾಂಕಿಂಗ್ ನೀಡಿ, ಹೆಚ್ಚಿನ ಅನುದಾನದ ಖಾತ್ರಿಪಡಿಸಿದ್ದರೂ ಸ್ಥಳೀಯ ಸಂಸ್ಥೆಗಳು ಅಗ್ರಸ್ಥಾನಕ್ಕೆ ಏರುವುದಕ್ಕೆ ಸಾಧ್ಯವಾಗುತ್ತಲೇ ಇಲ್ಲ. ನಗರದ ಅಲ್ಲಲ್ಲಿ ನಿಗದಿತವಾಗಿ ಕಸ ಹಾಕುವ ಸ್ಥಳಗಳಾದ ‘ಬ್ಲಾಕ್ ಸ್ಪಾಟ್‌’ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ನಿಯಂತ್ರಿಸುವುದು ಕೂಡ ನಡೆಯುತ್ತಿಲ್ಲ.

ನಗರದಲ್ಲಿ 58 ವಾರ್ಡ್‌ಗಳಿವೆ. ಪೌರಕಾರ್ಮಿಕರು ಮನೆ–ಮನೆಗಳಿಗೆ ತೆರಳಿ ಕಸವನ್ನು ಸಂಗ್ರಹಿಸುತ್ತಿದ್ದಾರೆ. ಸಾರ್ವಜನಿಕರು ಹಸಿ ಹಾಗೂ ಒಣ ಕಸವನ್ನು  ಮೂಲದಲ್ಲಿ ಬೇರ್ಪಡಿಸಿ ನೀಡುತ್ತಿದ್ದಾರೆ. ‘ತ್ಯಾಜ್ಯವನ್ನು ಸಂಗ್ರಹಿಸಿದ ಬಳಿಕ ವಾಹನಗಳಿಗೆ ತುಂಬುವ ಸಮಯದಲ್ಲಿ ಎಲ್ಲವನ್ನೂ ಬೆರೆಸಲಾಗುತ್ತಿದೆ ಎಂಬ ಮಾತುಗಳು ಜನಪ್ರತಿನಿಧಿಗಳಿಂದಲೇ ಕೇಳಿಬರುತ್ತಿವೆ. ಸ್ವಚ್ಛತೆ ಕಾಪಾಡಿಕೊಳ್ಳಲು ನಾಗರಿಕರು ಸಹಕಾರ ನೀಡುವುದೂ ಮಹತ್ವದ್ದಾಗಿದೆ.

ಖಾನಾಪುರ ಕಸ ‘ವಿಸಿ’: 20ಸಾವಿರ ಜನಸಂಖ್ಯೆ ಹೊಂದಿರುವ ಖಾನಾಪುರ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ಪಟ್ಟಣ ಪಂಚಾಯಿತಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ 20 ವಾರ್ಡ್‌ಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ವಿಲೇವಾರಿ ವಾಹನಗಳವರು ಕಸವನ್ನು ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿ ಪಕ್ಕದ ಖಾಲಿ ಜಾಗದಲ್ಲಿ ಸುರಿಯುತ್ತಿದ್ದಾರೆ. ನಂತರ ಟ್ರ್ಯಾಕ್ಟರ್‌ ಮೂಲಕ 5 ಕಿ.ಮೀ. ದೂರದ ಮಂಚಾಪುರದ ಬಳಿ 8.06 ಎಕರೆ ಜಾಗದಲ್ಲಿರುವ ಘನ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಸಾಗಿಸಲಾಗುತ್ತದೆ. ಈ ನಡುವೆ, ಹೆದ್ದಾರಿ ಪಕ್ಕದ ವಾತಾವರಣ ಕಲುಷಿತಗೊಳ್ಳುತ್ತಿದೆ. ಒಳಚರಂಡಿ ವ್ಯವಸ್ಥೆ ಇಲ್ಲ. ಕಾರಣ ಪಟ್ಟಣದ ಎಲ್ಲ ಭಾಗಗಳಿಂದ  ಹರಿದುಬರುವ ಚರಂಡಿ ನೀರನ್ನು ಮಲಪ್ರಭಾ ನದಿಗೆ ನೇರವಾಗಿ ಹರಿಸಲಾಗುತ್ತದೆ. ಇದರಿಂದ ನದಿ ನೀರು ಮಲಿನಗೊಳ್ಳುತ್ತಿದೆ.

ಸ್ಥಳಾವಕಾಶ ಇಲ್ಲದಂತಾಗಿದೆ: ಎಂ.ಕೆ. ಹುಬ್ಬಳ್ಳಿ ಪಟ್ಟಣದಲ್ಲಿ ನಿತ್ಯ ಸಂಗ್ರಹಗೊಳ್ಳುವ ಕಸ ವಿಲೇವಾರಿಗೆ ಸ್ಥಳಾವಕಾಶ ಇಲ್ಲ. ಹೀಗಾಗಿ, ಸ್ಥಳೀಯ ಆಡಳಿತಕ್ಕೆ ಕಸ ಸಾಗಿಸುವುದೇ ಸವಾಲಾಗಿದೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ 5 ವರ್ಷಗಳು ಸಮೀಪಿಸಿದರೂ, ಕಸ ವಿಲೇವಾರಿಗೆ ಅಗತ್ಯ ಜಾಗ ಸಿಕ್ಕಿಲ್ಲ. ಇದರಿಂದಾಗಿ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುವುದನ್ನು ನಿಲ್ಲಿಸಲಾಗಿದೆ. ಚರಂಡಿ, ವಾರದ ಸಂತೆ ಹಾಗೂ ಇತರೆಡೆ ಜನರು ಹಾಕುವ ಕಸವನ್ನು ನಿತ್ಯ ಟ್ರ್ಯಾಕ್ಟರ್‌ನಲ್ಲಿ ಬೇರೆಡೆ ಸಾಗಿಸಲಾಗುತ್ತಿದೆ.

ಬೈಲಹೊಂಗಲದಲ್ಲಿ ವ್ಯವಸ್ಥೆ: ಕಸ ವಿಲೇವಾರಿಯಲ್ಲಿ ಬೈಲಹೊಂಗಲ ಪುರಸಭೆ ಆದ್ಯತೆ ನೀಡಿದೆ. ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಶಿವಪ್ಪ ಅಂಬಿಗೇರ ಸ್ವಚ್ಛತೆಗೆ ಒತ್ತು ನೀಡಿದ್ದರು. ಪ್ರಸ್ತುತ ಮುಖ್ಯಾಧಿಕಾರಿ ಕವಿರಾಜ ನಾಗನೂರ ಅವರೂ ಆದ್ಯತೆ ಕೊಟ್ಟಿದ್ದಾರೆ.

ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 27 ವಾರ್ಡ್‌ಗಳಿವೆ. ಮನೆಗಳಿಂದ ಕಸ ಸಂಗ್ರಹಣೆ ಸಲುವಾಗಿ ಪುರಸಭೆಯಿಂದ ಉಚಿತವಾಗಿ ಬಿನ್‌ಗಳನ್ನು ಪೂರೈಸಲಾಗಿದೆ. 8  ಟ್ರ್ಯಾಕ್ಟರ್ ಟ್ರೇಲರ್, ಒಂದು ಟಾಟಾ 407, 6-ಆಟೊಟಿಪ್ಪರ್ ಮೂಲಕ ಧ್ವನಿವರ್ಧಕಗಳನ್ನು ಅಳವಡಿಸಿ ಹಸಿ ಮತ್ತು ಒಣಕಸ ಪ್ರತ್ಯೇಕವಾಗಿ ಸಂಗ್ರಹಿಸಿ ನೀಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಕಸ ಸಂಗ್ರಹಿಸಲಾಗುತ್ತದೆ. ನಿತ್ಯ 18 ಟನ್‌ನಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದನ್ನು ದೇವಲಾಪೂರ ರಸ್ತೆ ಅಮಟೂರ ಗ್ರಾಮದ 4.37 ಎಕರೆ ಜಾಗದಲ್ಲಿ ಸ್ಥಾಪಿಸಿರುವ ಘನ ತ್ಯಾಜ್ಯ ವಸ್ತು ನಿರ್ವಹಣೆ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ನಿತ್ಯ 5 ಟನ್ ಸಂಸ್ಕರಿಸಿ ಎರೆಹುಳು ಗೊಬ್ಬರ ತಯಾರಿಸಲಾಗುತ್ತದೆ.

ಯೋಜನೆ ಸಿದ್ಧ: ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿಯಿಂದ ಗೃಹ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಮನೆ, ಮನೆಗೆ ವಾಹನಗಳನ್ನು ಕಳುಹಿಸಿ ಘನ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ.

‘ಮನೆ ಮತ್ತು ಬೀದಿಯಲ್ಲಿ ಸಂಗ್ರಹಿಸಲಾದ ಕಸ ವಿಲೇವಾರಿಗೆ ಕೆಐಎಡಿಬಿ ಬಳಿ ಗೊತ್ತುಪಡಿಸಿರುವ 10 ಎಕರೆ ಜಮೀನಿನಲ್ಲಿ ಹಾಕಲಾಗುತ್ತಿದೆ. ಹಸಿ ಕಸ ವಿಂಗಡಿಸಿ ಸಾಗಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 15ನೇ ಹಣಕಾಸು ಯೋಜನೆಯಲ್ಲಿ ದೊಡ್ಡ ಡಬ್ಬಿಗಳನ್ನು ಬೀದಿ ಬದಿಯಲ್ಲಿಟ್ಟು ಸಂಗ್ರಹಿಸಲಾಗುವುದು. 200 ಮೀ. ಅಂತರದಲ್ಲಿ ಇವುಗಳನ್ನು ಇಡಲಾಗುವುದು. ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ’ ಎಂದು ಮುಖ್ಯಾಧಿಕಾರಿ ಪ್ರಕಾಶ ಮಠದ ತಿಳಿಸಿದರು.

ಅಲ್ಲಲ್ಲಿ ಹಾಕುವುದು ತಪ್ಪಿಲ್ಲ: ‘ಮೂಡಲಗಿ ಪುರಸಭೆಯಿಂದ ಪಟ್ಟಣ ವ್ಯಾಪ್ತಿಯಲ್ಲಿ ತ್ಯಾಜ್ಯದ ನಿರ್ವಹಣೆ ಉತ್ತಮ ರೀತಿಯಲ್ಲಿ ಮಾಡುತ್ತಿದ್ದರೂ ಬಸ್ ‌ನಿಲ್ದಾಣ, ತರಕಾರಿ ಮಾರುಕಟ್ಟೆ ಮತ್ತು ಸ್ಮಶಾನದ ಬಳಿಯ ಹಳ್ಳಕ್ಕೆ ಸಾರ್ವಜನಿಕರು ತ್ಯಾಜ್ಯ ಎಸೆಯುತ್ತಿದ್ದಾರೆ. ಹಳ್ಳದ ಬದಿಯಲ್ಲಿ ಪ್ಲಾಸ್ಟಿಕ್‌, ಕೊಳೆತ ಬಟ್ಟೆ ಮತ್ತು ಇತರೆ ತ್ಯಾಜ್ಯದಿಂದ ಅನೈರ್ಮಲ್ಯ ಹೆಚ್ಚಿದೆ. ಪರಿಸರಕ್ಕೆ ಹಾನಿಯೂ ಆಗುತ್ತಿದೆ. ಹಳ್ಳದ ಬದಿಯಲ್ಲಿ ಕಸ ಸುರಿಯದಂತೆ ಸೂಚನೆ ನೀಡಲಾಗಿದೆ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ.

ಅಥಣಿ ಪಟ್ಟಣದ ಅಲ್ಲಲ್ಲಿ ಹಾಗೂ ಜೋಡಿ ಕೆರೆಯ ಸುತ್ತಮುತ್ತ ತ್ಯಾಜ್ಯ ಸುರಿಯುವುದರಿಂದ ಅಲ್ಲಿನ ವಾತಾವರಣ ಹಾಳಾಗಿದೆ.

(ಪೂರಕ ಮಾಹಿತಿ:ಪ್ರದೀಪ ಮೇಲಿನಮನಿ, ರವಿ ಎಂ. ಹುಲಕುಂದ, ಪ್ರಸನ್ನ ಕುಲಕರ್ಣಿ, ಪರಶುರಾಮ ನಂದೇಶ್ವರ, ಸುಧಾಕರ ತಳವಾರ, ಬಸವರಾಜ ಶಿರಸಂಗಿ)

***

ಅಗತ್ಯ ಭೂಮಿ ಪಡೆದು, ಕಸ ವಿಲೇವಾರಿಗೆ ಮುಂದಾಗಬೇಕು. ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಬೇಕು
ಫಕ್ಕೀರಪ್ಪ ಗುಡೆನ್ನವರ
ನಾಗರಿಕ, ಎಂ.ಕೆ. ಹುಬ್ಬಳ್ಳಿ

***

ಬೆಳಗಾವಿ ನಗರದಾದ್ಯಂತ ನಮ್ಮ ಪೌರಕಾರ್ಮಿಕರು ಮನೆ ಮನೆಗಳ ಬಳಿಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ. ಹಸಿ ಹಾಗೂ ಒಣಕಸವನ್ನು ಬೇರ್ಪಡಿಸಿ ತುರಮುರಿಯಲ್ಲಿರುವ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕದೆ ಸಹಕರಿಸಬೇಕು
ಕೆ.ಎಚ್. ಜಗದೀಶ್
ಆಯುಕ್ತ, ಬೆಳಗಾವಿ ಮಹಾನಗರ ಪಾಲಿಕೆ

***

ಹೊನ್ನಿದಿಬ್ಬ ಬಳಿ 5 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದ್ದು, ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಅಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಯೋಜನೆ ರೂಪಿಸಿದ್ದೇವೆ
ಐ.ಸಿ. ಸಿದ್ನಾಳ
ಮುಖ್ಯಾಧಿಕಾರಿ, ಎಂ.ಕೆ. ಹುಬ್ಬಳ್ಳಿ ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು