ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃವಂದನಾ: ನಿಬಂಧನೆ ತೆಗೆಯಲು ಆಗ್ರಹ

ಆಹಾರದ ಹಕ್ಕಿಗಾಗಿ ಆಂದೋಲನ ಕಾರ್ಯಕರ್ತರಿಂದ ಮನವಿ
Last Updated 12 ಡಿಸೆಂಬರ್ 2019, 10:13 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಲ್ಲಿ ಫಲಾನುಭವಿಗಳಾಗಲು ವಿಧಿಸಿರುವ ನಿಬಂಧನೆಗಳನ್ನು ತೆಗೆದು ಹಾಕುವಂತೆ ಆಗ್ರಹಿಸಿ ‘ಆಹಾರದ ಹಕ್ಕಿಗಾಗಿ ಆಂದೋಲನ’ದ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಶಾರದಾ ಗೋಪಾಲ ಮಾತನಾಡಿ, ‘ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಜೊತೆಗೆ ಕೇಂದ್ರ ಸರ್ಕಾರವು 2013ರಲ್ಲಿ ಜಾರಿಯಾಗಿದ್ದ ಆಹಾರ ಭದ್ರತಾ ಕಾನೂನಿನಲ್ಲಿ ತಾಯ್ತನದ ರಕ್ಷಣೆಗಾಗಿ ಭತ್ಯೆ ಇರಿಸಿದೆ. ಇಂದಿ‌ರಾಗಾಂಧಿ ಮಾತೃತ್ವ ಸಹಯೋಗ ಯೋಜನೆ ಎಂದಿದ್ದ ಯೋಜನೆ ಈಗ ಪ್ರಧಾನ ಮಂತ್ರಿ ಮಾತೃ ವಂದನಾ ಎಂದು ಮರು ನಾಮಕರಣಗೊಂಡು ಜಾರಿಯಾಗಿದೆ’ ಎಂದು ತಿಳಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರಿಯಲ್ಲಿರುವ ಮಹಿಳೆಯರನ್ನು ಬಿಟ್ಟು ಉಳಿದೆಲ್ಲಾ ಗರ್ಭವತಿ ಹಾಗೂ ಹಾಲೂಡುವ ತಾಯಂದಿರಿಗೆ ₹ 6ಸಾವಿರ ಸಿಗಬೇಕು ಎನ್ನುವುದು ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನ ಉದ್ದೇಶವಾಗಿತ್ತು. ಮಾತೃವಂದನಾ ಎಂದು ಜಾರಿಯಾದಾಗ ₹ 5ಸಾವಿರವನ್ನು 3 ಕಂತುಗಳಲ್ಲಿ– ಗರ್ಭಿಣಿ ಎಂದು ನೋಂದಾಯಿಸಿದಾಗ ಮೊದಲನೇ ಕಂತು, 6 ತಿಂಗಳಾದಾಗ ಆಕೆ ‘ಎಂಟಿ ನೇಟಲ್‌ ಚೆಕಪ್’ಗಳನ್ನೆಲ್ಲಾ ಮಾಡಿಸಿಕೊಂಡಿದ್ದರೆ 2ನೇ ಕಂತು ಹಾಗೂ ಮಗುವಿಗೆ ಮೊದಲ ಲಸಿಕೆ ಹಾಕಿಸಿದ ನಂತರ 3ನೇ ಕಂತು ಸಿಗುತ್ತದೆ. ಇದರೊಂದಿಗೆ ಸಾಂಸ್ಥಿಕ ಹೆರಿಗೆಯಲ್ಲಿ ಆಕೆಗೆ ಸಿಗುವ ಜನನಿ ಸುರಕ್ಷಾ ಯೋಜನೆ ಮೊತ್ತವೂ ಸೇರಿ ₹6 ಸಾವಿರ ಬರುತ್ತದೆ ಎಂದು ಕಾನೂನು ಆಶಿಸುತ್ತದೆ’ ಎಂದು ಮಾಹಿತಿ ನೀಡಿದರು.

ಬಹುತೇಕರಿಗೆ ಸಿಕ್ಕೇ ಇಲ್ಲ!:‘ಯೋಜನೆಗೆ ಇಟ್ಟಿರುವ ಹಣ ಸದುಪಯೋಗವಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ವಾಸ್ತವವಾಗಿ ಬಹುತೇಕ ತಾಯಂದಿರಿಗೆ ಯೋಜನೆಯ ಲಾಭ ಸಿಗುತ್ತಿಲ್ಲ. ಹಲವು ಜಿಲ್ಲೆಗಳಲ್ಲಿ ಮಾಡಿರುವ ಸಮೀಕ್ಷೆಯಲ್ಲಿ ಈ ವಿಷಯ ತಿಳಿದುಬಂದಿದೆ’ ಎಂದರು.

‘ಬೆಳಗಾವಿಯ ಖಾನಾಪುರ ತಾಲ್ಲೂಕಿನಲ್ಲಿ 193ರಲ್ಲಿ 11 ಮಂದಿಗೆ ಅರ್ಧ ಹಣವಷ್ಟೇ ಸಿಕ್ಕಿದೆ. ರಾಯಚೂರಿನಲ್ಲಿ 172 ಮಹಿಳೆಯರಲ್ಲಿ 14 ಮಂದಿಗೆ ಭಾಗಶಃ, ಬಾಗಲಕೋಟೆಯ 2 ತಾಲ್ಲೂಕುಗಳಲ್ಲಿ 73 ಮಹಿಳೆಯರಲ್ಲಿ ಮೂವರಿಗೆ, ಕೊಪ್ಪಳದಲ್ಲಿ 107ರಲ್ಲಿ 6 ಮಹಿಳೆಯರಿಗೆ, ವಿಜಯಪುರದಲ್ಲಿ 57ರಲ್ಲಿ ಒಬ್ಬರಿಗೆ, ಉತ್ತರ ಕನ್ನಡದ 24 ಮಹಿಳೆಯರಲ್ಲಿ ಒಬ್ಬರಿಗೆ, ಧಾರವಾಡದ ಕಲಘಟಗಿಯಲ್ಲಿ 13 ಮಹಿಳೆಯರಲ್ಲಿ ಒಬ್ಬರಿಗೂ ಸೌಲಭ್ಯ ಸಿಕ್ಕಿಲ್ಲ. ಒಟ್ಟು 639ರಲ್ಲಿ ಕೇವಲ 26 ಮಹಿಳೆಯರಿಗೆ ಮಾತ್ರವೇ ಹಣ ದೊರೆತಿದೆ! ಮಾತೃವಂದನಾ ಜೊತೆಗೆ ಜನನಿ ಸುರಕ್ಷಾ ಹಣ ಸೇರಿ ₹ 6ಸಾವಿರ ಆಗುತ್ತದೆ ಎಂದು ಹೇಳಲಾಗಿದೆ. ಆದರೆ, 76 ಮಂದಿಗೆ ಮಾತ್ರ ಜನನಿ ಸುರಕ್ಷಾ ಯೋಜನೆ ದೊರೆತಿದೆ. ಈ ಯೋಜನೆ ಕೂಡ ಮಹಿಳೆಯರಿಗೆ ಸಾಮಾಜಿಕ ಭದ್ರತೆ ಕೊಡುವಲ್ಲಿ ಸೋತಿರುವುದು ಸ್ಪಷ್ಟವಾಗಿದೆ’ ಎಂದು ಎಂದು ದೂರಿದರು.

ಹಲವು ಷರತ್ತುಗಳು:

‘ತಾಯಂದಿರಿಗೆ ಮಾತೃತ್ವ ರಕ್ಷಣಾ ಸೌಲಭ್ಯ ಸಿಗದಿರುವುದಕ್ಕೆ ಮುಖ್ಯ ಕಾರಣವೇ ಅದಕ್ಕೆ ಹಾಕಿರುವ ಷರತ್ತುಗಳಾಗಿವೆ. ಆಕೆಯ ಹೆಸರಲ್ಲಿ ಬ್ಯಾಂಕ್‌ ಖಾತೆ ಇರಬೇಕು, ಅದಕ್ಕೆ ಆಧಾರ್‌ ಜೋಡಣೆಯಾಗಿರಬೇಕು, ಪಡಿತರ ಚೀಟಿ ಇರಬೇಕು, ಇವೆಲ್ಲವುಗಳಲ್ಲೂ ಪತಿಯ ಹೆಸರೂ ಸೇರಿರಬೇಕು!, ಮೊದಲನೇ ಮಗುವಿಗೆ ಮಾತ್ರ, 2ನೇ ಮಗುವಿಗೆ ಇಲ್ಲ ಎನ್ನುವು ಷರತ್ತುಗಳಿವೆ. ಹಳ್ಳಿಗಳಲ್ಲಿ ಮದುವೆಯಾದ ವರ್ಷದೊಳಗೆ ಗರ್ಭ ಧರಿಸುವುದು ಸಾಮಾನ್ಯ. ಅಷ್ಟು ತ್ವರಿತವಾಗಿ ಪಡಿತರ ಚೀಟಿ, ಬ್ಯಾಂಕ್‌ ಖಾತೆ, ಆಧಾರ್‌ ಕಾರ್ಡ್‌ಗಳು ಬದಲಾಗಿರುವುದಿಲ್ಲ. ಹೀಗಾಗಿ, ಷರತ್ತುಗಳನ್ನು ತೆಗೆಯಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT