ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮದುರ್ಗ | ತಾಳೆ ಬೆಳೆ: ರೈತನ ಮೊಗದಲ್ಲಿ ‘ಕಳೆ’

Published 17 ಮೇ 2024, 6:25 IST
Last Updated 17 ಮೇ 2024, 6:25 IST
ಅಕ್ಷರ ಗಾತ್ರ

ರಾಮದುರ್ಗ: ಫಲವತ್ತತೆಯಿಂದ ಕೂಡಿದ ಕೃಷಿಭೂಮಿ ಇದ್ದರೂ ನಷ್ಟವಾಗಿದೆ ಎಂದು ಕೊರಗುವ ರೈತರ ಮಧ್ಯೆ, ಇಲ್ಲೊಬ್ಬ ರೈತ ಸಾಧಾರಣ ಜಮೀನಿನಲ್ಲೇ ತಾಳೆ ಬೆಳೆ ಬೆಳೆದು ಮಾಸಿಕವಾಗಿ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಇದು ತಾಲ್ಲೂಕಿನ ರಂಕಲಕೊಪ್ಪ ಗ್ರಾಮದ ಸದಾನಂದ ಕರಾಂಡೆ ಅವರ ಯಶೋಗಾಥೆ.

14 ಎಕರೆ ಜಮೀನು ಹೊಂದಿದ ಅವರು, ಸರ್ಕಾರದ ಯಾವ ಸೌಲಭ್ಯ ಪಡೆಯದೆ ಐದು ಎಕರೆ ಜಮೀನಿನಲ್ಲಿ ತಾಳೆ ಬೆಳೆ ಬೆಳೆಯಲು ಆರಂಭಿಸಿದ್ದರು. ಅದರಲ್ಲಿ ಸಫಲವಾಗಿದ್ದರಿಂದ ಈಗ 9 ಎಕರೆಗೆ ವಿಸ್ತರಿಸಿದ್ದಾರೆ.

ಒಮ್ಮೆ ತಾಳೆ ಬೆಳೆ ನಾಟಿ ಮಾಡಿದರೆ, ನಾಲ್ಕು ವರ್ಷಗಳ ನಂತರ ಇಳುವರಿ ಬರುತ್ತದೆ. ಅಲ್ಲಿಯವರೆಗೆ ಆರ್ಥಿಕವಾಗಿ ನೆರವಾಗಲೆಂದು ತಾಳೆಯೊಂದಿಗೆ ಮಿಶ್ರ ಬೆಳೆಗಳಾಗಿ ಕಬ್ಬು, ಬಾಳೆ, ಅಲಸಂದಿ ಬೆಳೆ ಬೆಳೆದರು. ಈಗ ಐದು ಎಕರೆಯಲ್ಲಿ ತಾಳೆ ಬೆಳೆ ಫಸಲು ಬರುತ್ತಿದೆ. ಅದರೊಂದಿಗೆ ಮಿಶ್ರ ಬೆಳೆಗಳಿಂದಲೂ ಉತ್ತಮ ಆದಾಯ ಗಳಿಸಿ, ಆರ್ಥಿಕವಾಗಿ ಸದೃಢವಾಗಿದ್ದಾರೆ.

‘ಗಿಡದಿಂದ ಗಿಡಕ್ಕೆ 27 ಅಡಿ ಅಂತರದಲ್ಲಿ ತಾಳೆ ನಾಟಿ ಮಾಡಿದ್ದೇನೆ. ಐದು ಎಕರೆಯಲ್ಲಿ 400ಕ್ಕೂ ಹೆಚ್ಚು ಗಿಡ ಬೆಳೆಸಿದ್ದೇನೆ. ಪ್ರತಿ ಎಕರೆ ಗಿಡಗಳಲ್ಲಿ 10 ಟನ್‌ ತಾಳೆ ಬೀಜ ಲಭ್ಯವಾಗುತ್ತಿವೆ. ಪ್ರತಿ ಟನ್‌ ಬೀಜಕ್ಕೆ ₹13,440 ದರವಿದೆ’ ಎಂದು ಸದಾನಂದ ಕರಾಂಡೆ ತಿಳಿಸಿದರು.

‘ಜಮೀನಿಗೆ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿನ ನೀರು, ರಸಗೊಬ್ಬರ ಉಣಿಸಬಾರದು. ವೈಜ್ಞಾನಿಕವಾಗಿ ಸಲಹೆ ಪಡೆದು ಕೃಷಿ ಕೈಗೊಳ್ಳಬೇಕು. ಆಗ ಯಶಸ್ಸು ಖಾತ್ರಿ’ ಎಂಬುದು ಅವರ ಅಭಿಪ್ರಾಯ.

ಸದಾನಂದ ಅವರು ಬೆಳೆಗಳಿಗೆ ನೀರುಣಿಸಲು ಹೊಲದ ಪಕ್ಕದಲ್ಲಿರುವ ಮಲಪ್ರಭಾ ನದಿ ನೆಚ್ಚಿಕೊಂಡಿದ್ದಾರೆ. ಮೂರು ಕೊಳವೆಬಾವಿ ಮೂಲಕ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಮಿತವ್ಯಯವಾಗಿ ನೀರು ಬಳಸಿ, ಉತ್ತಮ ಬೆಳೆ ಬೆಳೆದು ಮಾದರಿ ರೈತನಾಗಿ ಹೊರಹೊಮ್ಮಿದ್ದಾರೆ.

ರಾಮದುರ್ಗ ತಾಲ್ಲೂಕಿನ ರಂಕಲಕೊಪ್ಪದಲ್ಲಿ ತಾಳೆ ಬೆಳೆಯೊಂದಿಗೆ ರೈತ ಸದಾನಂದ ಕರಾಂಡೆ
ರಾಮದುರ್ಗ ತಾಲ್ಲೂಕಿನ ರಂಕಲಕೊಪ್ಪದಲ್ಲಿ ತಾಳೆ ಬೆಳೆಯೊಂದಿಗೆ ರೈತ ಸದಾನಂದ ಕರಾಂಡೆ
ರೈತರು ಸಾಮಾನ್ಯ ಬೆಳೆ ಬೆಳೆಯುವುದಕ್ಕಿಂತ ತಾಳೆ ಗಿಡಗಳನ್ನು ಬೆಳೆಸಬೇಕು. ಇದರೊಂದಿಗೆ ಮಿಶ್ರ ಬೆಳೆಗಳಾಗಿ ವಿವಿಧ ಬೆಳೆ ಬೆಳೆದು ಆರ್ಥಿಕವಾಗಿ ಸದೃಢವಾಗಬೇಕು
ಸದಾನಂದ ಕರಾಂಡೆ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT