ಶುಕ್ರವಾರ, ಮೇ 20, 2022
26 °C

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಎಂಇಎಸ್ ಹುತಾತ್ಮ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಮತ್ತು ಶಿವಸೇನಾ ಮುಖಂಡರು ಹಾಗೂ ಕಾರ್ಯಕರ್ತರು ಕೋವಿಡ್–19 ಮಾರ್ಗಸೂಚಿ ಉಲ್ಲಂಘಿಸಿ ಇಲ್ಲಿನ ಹುತಾತ್ಮ ವೃತ್ತದಲ್ಲಿ ‘ಹುತಾತ್ಮ ದಿನಾಚರಣೆ’ ಕಾರ್ಯಕ್ರಮವನ್ನು ಸೋಮವಾರ ನಡೆಸಿದರು. ಈ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಕಮಿಷನರೇಟ್‌ ವತಿಯಿಂದ ಅನುಮತಿ ನಿರಾಕರಿಸಲಾಗಿತ್ತು.

ಎಂಇಎಸ್ ಅಧ್ಯಕ್ಷ ದೀಪಕ ದಳವಿ ನೇತೃತ್ವದಲ್ಲಿ ರಾಂಲಿಂಗಖಿಂಡ್‌ ಗಲ್ಲಿಯಲ್ಲಿರುವ ಸಮಿತಿಯ  ಕಚೇರಿ ಬಳಿಯಿಂದ ಹುತಾತ್ಮ ವೃತ್ತದವರೆಗೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಬಂದರು. ಕೆಲವರು ವಿವಿಧ ಗುಂಪುಗಳಾಗಿ ಬಂದು ಅಲ್ಲಿ ಸೇರಿದ್ದರು.

ಮರಾಠಿ ಭಾಷಿಗರು ಹೆಚ್ಚಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಘೋಷಣೆ ಕೂಗಿದರು.

ದಳವಿ ಮಾತನಾಡಿ, ‘ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆಗ್ರಹಿಸಿ 1956ರ ಜ.17ರಂದು ನಡೆದ ಹೋರಾಟದಲ್ಲಿ ಗಲಭೆಯಾದಾಗ ಮತ್ತು ಬೇರೆ ಬೇರೆ ಸಂದರ್ಭದಲ್ಲಿ ಸೇರಿ ಈವರೆಗೆ ಗಡಿ ಹೋರಾಟದಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ. ನಮ್ಮ ಭವಿಷ್ಯವನ್ನು ಸುಧಾರಿಸಲು ಅವರೆಲ್ಲವರೂ ಹುತಾತ್ಮರಾಗಿದ್ದಾರೆ. ಅವರಿಗೆ ನಾವೆಲ್ಲರೂ ಕೃತಜ್ಞತೆ ಸಲ್ಲಿಸಬೇಕು. ಮರಾಠಿ ಸಂಸ್ಕೃತಿ ಮತ್ತು ಭಾಷೆಗಾಗಿ ನಿರಂತರವಾಗಿ ಹೋರಾಡಬೇಕು’ ಎಂದರು.

‘ನಮ್ಮ ಗುರಿ ತಲುಪುವುದಕ್ಕಾಗಿ ಮತ್ತಷ್ಟು ಸವಾಲುಗಳನ್ನು ನಾವು ಎದುರಿಸಬೇಕಾಗಿದೆ. ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು’ ಎಂದು ಕರೆ ನೀಡಿದರು.

‘ಸಮಿತಿಯನ್ನು ನಿಷೇಧಿಸಬೇಕು ಎಂದು ಕೆಲವು ಹಿತಾಸಕ್ತಿಗಳು ಆಗ್ರಹಿಸುತ್ತಿವೆ. ಮುಖಂಡರಿಗೆ ಹಲವು ರೀತಿಯಲ್ಲಿ ಕಿರುಕುಳ ಕೊಡಲಾಗುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ಸಂಘಟಿತ ಹೋರಾಟವಷ್ಟೆ ನಮ್ಮನ್ನು ಕಾಯಬಲ್ಲದು’ ಎಂದು ತಿಳಿಸಿದರು.

ಮುಖಂಡರಾದ ಮಾಲೋಜಿರಾವ್ ಅಷ್ಟೇಕರ, ರೋಮಾ ಠಾಕೂರ, ಪ್ರಕಾಶ ಮರಗಾಳೆ, ಗಣೇಶ ದಡ್ಡೆಕರ, ಸುಧಾ ಭಾತ್ಕಾಂಡೆ, ರೇಣು ಕೀಲ್ಲೆಕರ, ನೇತಾಜಿ ಜಾಧವ್, ವರ್ಷಾ ಆಜರೆಕರ, ಶಿವಸೇನಾದ ಬಂಡು ಕೇರವಾಡಕರ, ರಾಜು ತುಡೆಯೇಕರ, ರಾಜು ಭೊಂಗಾಳೆ ಪಾಲ್ಗೊಂಡಿದ್ದರು.

‘ಎಂಇಎಸ್‌ನವರು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿರುವ ಕುರಿತು ಮಹಾನಗರಪಾಲಿಕೆ ಅಧಿಕಾರಿಗಳು ದೂರು ನೀಡಿದರೆ ಪ್ರಕರಣ ದಾಖಲಿಸಲಾಗುವುದು’ ಎಂದು ಡಿಸಿಪಿ ರವೀಂದ್ರ ಗಡಾದಿ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯೆಗೆ ನಗರಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮೊಬೈಲ್‌ ಫೋನ್‌ ಕರೆ ಸ್ವೀಕರಿಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು