ಮಂಗಳವಾರ, ಡಿಸೆಂಬರ್ 7, 2021
24 °C

‘ಕರ್ನಾಟಕ ಸರ್ಕಾರ ನಾಲಾಯಕ್’ ಘೋಷಣೆ: ಮರಾಠಿಯಲ್ಲಿ ದಾಖಲೆಗೆ ಎಂಇಎಸ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ‘ಕರ್ನಾಟಕ ಸರ್ಕಾರಕ್ಕೆ ನಾಲಾಯಕ್ ಸರ್ಕಾರ’ ಎಂದು ಧಿಕ್ಕಾರ ಕೂಗಿದರು. ‘ಜೈ ಮಹಾರಾಷ್ಟ್ರ’ ಘೋಷಣೆ ಮೊಳಗಿಸಿದರು.

ಧರ್ಮವೀರ ಸಂಭಾಜಿ ವೃತ್ತದಲ್ಲಿ ಸೇರಿದ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಭಾಷಾ ಅಲ್ಪಸಂಖ್ಯಾತರಾದ ಮರಾಠಿ ಭಾಷಿಕರ ಮೇಲೆ ನಿರಂತರವಾಗಿ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದರು.

ಮೆರವಣಿಗೆಗೆ ಮುಂದಾದ ಅವರನ್ನು ಪೊಲೀಸರು ತಡೆದರು. ‘ಸದ್ಯದ ಪರಿಸ್ಥಿತಿಯಲ್ಲಿ ಮೆರವಣಿಗೆಗೆ ಅವಕಾಶವಿಲ್ಲ. ಪ್ರತಿಭಟನೆ ನಡೆಸುವುದಕ್ಕೆ ನೀವು ಅನುಮತಿಯನ್ನೂ ಪಡೆದಿಲ್ಲ. ಹೀಗಾಗಿ, ಮೆರವಣಿಗೆ ಬೇಡ’ ಎಂದು ತಿಳಿಸಿದ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು.

ಈ ನಡುವೆ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸ್ಥಳಕ್ಕೆ ಬಂದರು. ಆದರೆ, ಮನವಿ ನೀಡಲು ಮುಖಂಡರು ಸಿದ್ಧವಾಗಲಿಲ್ಲ. ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದ ನಂತರವಷ್ಟೆ ಮನವಿ ಸಲ್ಲಿಸುತ್ತೇವೆ ಎಂದು ರಸ್ತೆಯಲ್ಲೇ ಧರಣಿ ಆರಂಭಿಸಿದರು. ಅಧಿಕಾರಿಗಳ ಮುಂದೆಯೇ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಅಲ್ಲಿಂದ ತೆರಳಿದರು. ಕೆಲ ಹೊತ್ತಿನ ನಂತರ ಪೊಲೀಸರು ಮೆರವಣಿಗೆ ಅನುವು ಮಾಡಿಕೊಟ್ಟರು.

‘ಬೆಳಗಾವಿ, ಖಾನಾಪುರ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸೇರಿದಂತೆ ಗಡಿ ಭಾಗದ ಎಲ್ಲ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಲೇಬೇಕು’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಭವಾನಿ, ಶಿವಾಜಿ ಹಾಗೂ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದರು.

‘ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ಚಜ ತೆರವುಗೊಳಿಸಬೇಕು. ಇಲ್ಲವೇ ಭಗವಾಧ್ವಜ ಹಾರಿಸಲು ನಮಗೂ ಅವಕಾಶ ಕೊಡಬೇಕು. ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಫಲಕದಲ್ಲಿ ಮರಾಠಿ ಭಾಷೆಯಲ್ಲೂ ಮಾಹಿತಿ ಹಾಕಬೇಕು. ನಗರದ ಎಲ್ಲ ಫಲಕಗಳಲ್ಲೂ ಮರಾಠಿ ಬಳಸಬೇಕು’ ಎಂದು ಒತ್ತಾಯಿಸಿದರು.

ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದರು. ಅವರಿಂದ ಹಚ್ಚುವರಿ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು.

‘ಮರಾಠಿಯಲ್ಲೇ ಪ್ರತಿಕ್ರಿಯಿಸಬೇಕು’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ‘ನಿಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಅಧಿಕಾರಿ ಕನ್ನಡದಲ್ಲಿ ತಿಳಿಸಿ ತೆರಳಿದರು.

ಎಂಇಎಸ್ ಅಧ್ಯಕ್ಷ ದೀಪಕ ದಳವಿ, ಮುಖಂಡರಾದ ಸರಿತಾ ಪಾಟೀಲ. ರೇಣು ಕಿಲ್ಲೇಕರ, ಮದನ ಬಾಮ್ನೆ, ಪ್ರಕಾಶ ಶಿರೋಳಕರ, ಶುಭಂ ಶೆಳಕೆ, ರವಿ ಸಾಳುಂಕೆ ನೇತೃತ್ವ ವಹಿಸಿದ್ದರು.

ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪ್ರತಿಭಟನೆ: ‘ಎಂಇಎಸ್‌ನವರು ನಾಡದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ರಾಣಿ ಚನ್ನಮ್ಮ ವೃತ್ತದಲ್ಲಿ ಬಳಿಕ ಪ್ರತಿಭಟಿಸಿದರು.

‘ಮಹಾನಗರಪಾಲಿಕೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ಎಂಇಎಸ್‌ನವರು ಕರ್ನಾಟಕ ರಾಜ್ಯೋತ್ಸವದ ಹೊಸ್ತಿಲಲ್ಲಿ ಕಾಲು ಕೆರೆದು ಜಗಳ ತೆಗೆಯುತ್ತಿದ್ದಾರೆ’ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು