ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ– ಧಾರವಾಡ ರೈಲು ಮಾರ್ಗ ಕಾಮಗಾರಿ ಆರಂಭಿಸಲು ಸಚಿವ ಸತೀಶ ಜಾರಕಿಹೊಳಿ ತಾಕೀತು

Published 2 ಮಾರ್ಚ್ 2024, 5:34 IST
Last Updated 2 ಮಾರ್ಚ್ 2024, 5:34 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ– ಧಾರವಾಡ ನೇರ ರೈಲು ಮಾರ್ಗದ ನಕ್ಷೆಯನ್ನು ಯಾವುದೇ ಕಾರಣಕ್ಕೂ ಬದಲಿಸಲಾಗದು. ಇದಕ್ಕೆ ಕೆಲವು ಸಣ್ಣ ಪ್ರಮಾಣದ ಭೂಮಾಲೀಕರು, ರೈತರು ಆಕ್ಷೇಪ ಸಲ್ಲಿಸಿದ್ದಾರೆ. ಇಲ್ಲಸಲ್ಲದ ನೆಪಗಳನ್ನು ಮುಂದುಟ್ಟುಕೊಂಡು ಕಾಮಗಾರಿ ನಿಲ್ಲಸಲು ಸಾಧ್ಯವಿಲ್ಲ. ವಿಶೇಷ ಭೂಸ್ವಾಧೀನ ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ತಮ್ಮ ಕೆಲಸ ಆರಂಭಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಾಕೀತು ಮಾಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ 2023-24ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೆಳಗಾವಿ– ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. ಯೋಜನೆಗೆ 150 ಎಕರೆ ನೀರಾವರಿ ಭೂಮಿ ನೀಡಲು ಹಿಂದೇಟು ಹಾಕುತ್ತಿರುವ ರೈತರು, ಮಾರ್ಗ ಬದಲಿಸುವಂತೆ ಒತ್ತಾಯಿಸುತ್ತಿದ್ದಾರೆ. ಒಂದುವೇಳೆ ಮಾರ್ಗ ಬದಲಿಸಿದರೆ, ಇಡೀ ಯೋಜನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದರು.

ಸಂಸ್ಕರಣಾ ಘಟಕ ಆರಂಭಿಸಿ: ‘ತಾಲ್ಲೂಕಿನ ಹಲಗಾ ಬಳಿ ಕೊಳಚೆ ನೀರು ಸಂಸ್ಕರಣಾ ಘಟಕದ ಕಾಮಗಾರಿಯನ್ನೂ ಪೊಲೀಸ್ ರಕ್ಷಣೆಯಲ್ಲಿ ಆರಂಭಿಸಬೇಕು’ ಎಂದು ಸಚಿವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

‘ಈಗಾಗಲೇ ಶೇ 90ರಷ್ಟು ಕಾಮಗಾರಿ ಮುಗಿದಿದೆ. ಹೆಚ್ಚುವರಿ ಪರಿಹಾರದ ಬೇಡಿಕೆ ಕಾರಣಕ್ಕೆ, ₹103 ಕೋಟಿ ವೆಚ್ಚದ ಯೋಜನೆಗೆ ಯಾವುದೇ ಅಡ್ಡಿಯಾಗಲಾರದು’ ಎಂದರು. ಕಾಮಗಾರಿ ವಿಳಂಬದ ಬಗ್ಗೆ ಶಾಸಕ ಆಸೀಫ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ಭವನಗಳ ದುರಸ್ತಿ ಕಾಮಗಾರಿಯನ್ನು ಪ್ರಸಕ್ತ ಕ್ರಿಯಾ ಯೋಜನೆಯಡಿ ಸೇರಿಸಲಾಗಿದೆ. ಉಳಿದ ಭವನಗಳನ್ನು ಮುಂದಿನ ಕ್ರಿಯಾ ಯೋಜನೆಯಡಿ ಸೇರಿಸಲಾಗುವುದು’ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.

ಬೆಳಗಾವಿ ವಿಮಾನ ನಿಲ್ದಾಣದ ನೂತನ ಅರ್ಮಿನಲ್‌ ನಿರ್ಮಾಣಕ್ಕೆ ಪ್ರಧಾನಿ ನರೇಮದ್ರ ಮೋದಿ ಅವರು ಮಾರ್ಚ್‌ 10ರಂದು ಆನ್‌ಲೈನ್‌ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಡಿ.ಸಿ ತಿಳಿಸಿದರು.

ಸಂಸದೆ ಮಂಗಲಾ ಅಂಗಡಿ, ಶಾಸಕರಾದ ದುರ್ಯೋಧನ ಐಹೊಳೆ, ವಿಠ್ಠಲ ಹಲಗೇಕರ, ಬಾಬಾಸಾಹೇಬ ಪಾಟೀಲ, ಮಹೇಂದ್ರ ತಮ್ಮಣ್ಣವರ, ವಿಧಾನ ಪರಿಷತ್‌ ಸದಸ್ಯರಾದ ಎಂ.ನಾಗರಾಜ್ ಯಾದವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಅನುಕಂಪ ಆಧಾರದಲ್ಲಿ ನೇಮಕಗೊಂಡ ನೌಕರರಿಗೆ ಸಚಿವ ಸತೀಶ ಆದೇಶಪತ್ರ ವಿತರಿಸಿದರು.

ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಕೈಗೆತ್ತಿಕೊಂಡ ವಸತಿ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ
ಆಸೀಫ್‌ ಸೇಠ್‌ ಶಾಸಕ
ನವಿಲುತೀರ್ಥ ಜಲಾಶಯದಿಂದ ಮಲಪ್ರಭೆಗೆ ಹೆಚ್ಚಿನ ನೀರು ಬಿಡಬೇಡಿ. ಇದರಿಂದ ಸವದತ್ತಿ ಚನ್ನಮ್ಮನ ಕಿತ್ತೂರು ಬೈಲಹೊಂಗಲ ತಾಲ್ಲೂಕಿಗೆ ಸಮಸ್ಯೆಯಾಗಬಹುದು
ಮಹಾಂತೇಶ ಕೌಜಲಗಿ ಶಾಸಕ
‘ಭೂತ ಬಂಗಲೆಯಾಗದಿರಲಿ ಆಸ್ಪತ್ರೆ’
‘ಜಿಲ್ಲೆಯಲ್ಲಿ ಐದಾರು ವರ್ಷಗಳ ಹಿಂದೆಯೇ ನಿರ್ಮಾಣವಾದ ಹಲವು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಣ್ಣ–ಪುಟ್ಟ ಕಾರಣಕ್ಕೆ ಅವು ಬಳಕೆಯಾಗುತ್ತಿಲ್ಲ. ಆ ಕಟ್ಟಡಗಳು ಭೂತ ಬಂಗಲೆಯಾಗದಿರಲಿ’ ಎಂದು ಈರಣ್ಣ ಕಡಾಡಿ ಹೇಳಿದರು. ‘ಇಂತಹ ಆಸ್ಪತ್ರೆಗಳನ್ನು ತ್ವರಿತವಾಗಿ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ನಿರ್ದೇಶನ ನೀಡಿದರು.
‘ನೀರು: ತಾಲ್ಲೂಕಿಗೆ ತಲಾ ₹1ಕೋಟಿ’
‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಬಾಧೆ ಉಂಟಾಗಬಹುದಾದ 339 ಗ್ರಾಮಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿನ 49 ವಾರ್ಡ್‌ಗಳನ್ನು ಗುರುತಿಸಿದ್ದೇವೆ. 10 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 12 ಟ್ಯಾಂಕರ್‌ ಮೂಲಕ ನಿತ್ಯ 26 ಟ್ರಿಪ್‌ ನೀರು ಪೂರೈಸುತ್ತಿದ್ದೇವೆ. ಬೈಲಹೊಂಗಲ ತಾಲ್ಲೂಕಿನ 7 ಹಳ್ಳಿಗಳಿಗೆ ಖಾಸಗಿ ಕೊಳವೆಬಾವಿ ಮೂಲಕ ಪೂರೈಕೆಯಾಗುತ್ತಿದೆ. ನೀರಿನ ಸಮಸ್ಯೆ ನಿರ್ವಹಣೆಗಾಗಿಯೇ ಪ್ರತಿ ತಾಲ್ಲೂಕಿಗೆ ತಲಾ ₹1 ಕೋಟಿ ಅನುದಾನ ಮೀಸಲಿಡಲಾಗಿದೆ. ಎಲ್ಲಿಯೂ ಅನುದಾನದ ಕೊರತೆ ಇಲ್ಲ’ ಎಂದು ಡಿ.ಸಿ ನಿತೇಶ್‌ ಪಾಟೀಲ ವಿವರಿಸಿದರು. ‘ಪರಿಸ್ಥಿತಿ ಅರ್ಥೈಸಿಕೊಂಡು ನೀರು ಮೇವು ಮತ್ತು ವಿದ್ಯುತ್ ಅಭಾವ ಆಗದಂತೆ ಕ್ರಮ ತೆಗೆದುಕೊಳ್ಳಿ’ ಎಂದು ಸಚಿವ ನಿರ್ದೇಶನ ನೀಡಿದರು. ‘ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಸ್ವಂತ ಟ್ಯಾಂಕರ್ ಖರೀದಿಗೆ ಸೂಚಿಸಲಾಗಿತ್ತು. ಆದರೆ ಈವರೆಗೆ 280 ಗ್ರಾಮ ಪಂಚಾಯ್ತಿಗಳಲ್ಲಿ ಖರೀದಿ ಪ್ರಕ್ರಿಯೆ ನಡೆದಿದೆ. ಉಳಿದ ಪಂಚಾಯ್ತಿಯವರು ಶೀಘ್ರ ಟ್ಯಾಂಕರ್ ಖರೀದಿಸಿದರೆ ಬೇಸಿಗೆಯಲ್ಲಿ ತುರ್ತಾಗಿ ನೀರು ಪೂರೈಸಬಹುದು. ಜಲಬವಣೆ ಇರುವಲ್ಲಿ ಹೊಸ ಕೊಳವೆಬಾವಿ ಕೊರೆಯಿಸುವುದಕ್ಕಿಂತ ಟ್ಯಾಂಕರ್ ಮೂಲಕ ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮ ವಹಿಸಿ’ ಎಂದು ಹೇಳಿದರು.
ಬೆಳೆಹಾನಿ ಪರಿಹಾರ - ಅಂಕಿ ಅಂಶ
3.72 ಲಕ್ಷ ಪರಿಹಾರಕ್ಕೆ ನೋಂದಣಿ ಮಾಡಿದ ರೈತರ ಸಂಖ್ಯೆ 3.45 ಲಕ್ಷ ಬೆಳೆಹಾನಿ ಸಂದಾಯವಾದ ರೈತರ ಸಂಖ್ಯೆ ₹64.19 ಕೋಟಿ ಈವರೆಗೆ ಸಂದಾಯವಾದ ಹಣ 21 ಸಾವಿರ ಇನ್ನೂ ಪರಿಹಾರ ಬಾಕಿ ಉಳಿದ ರೈತರ ಸಂಖ್ಯೆ

ಸಚಿವ ನೀಡಿದ ಸೂಚನೆಗಳು

* ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕ  ಪ್ರಕ್ರಿಯೆ ಮುಗಿದಿದೆ. ಆಕ್ಷೇಪ ಪರಿಶೀಲಿಸಿ ಆಯ್ಕೆಯಾದವರಿಗೆ ತ್ವರಿತವಾಗಿ ನೇಮಕಾತಿ ಆದೇಶ ನೀಡಿ.

* ಶಕ್ತಿ ಯೋಜನೆ ಜಾರಿಯಿಂದಾಗಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಇದರಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದ ಪರೀಕ್ಷಾರ್ಥಿಗಳಿಗೆ ಸಮಸ್ಯೆ ಆಗಬಾರದು. ವಿವಿಧ ಮಾರ್ಗಗಳಲ್ಲಿ ಪರೀಕ್ಷೆ ಅವಧಿಗೆ ಪೂರಕವಾಗಿ ಅವರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು.

* ಪ್ರತಿ ವರ್ಷ ಅರ್ಜಿ ಆಹ್ವಾನಿಸುವುದಕ್ಕಿಂತ ಜಿಲ್ಲೆಯಲ್ಲಿನ ಎಲ್ಲ ಅಂಗವಿಕಲರಿಗೆ ಏಕಕಾಲಕ್ಕೆ ತ್ರಿಚಕ್ರ ವಾಹನಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಪ್ರತಿಬಾರಿ ಕನಿಷ್ಠ ಎರಡು ಜಿಲ್ಲೆಗಳಲ್ಲಿ ಎಲ್ಲ ಅಂಗವಿಕಲರಿಗೂ ವಾಹನ ವಿತರಿಸಬೇಕು.

* ಕುಡಚಿ ಕ್ಷೇತ್ರಕ್ಕೆ ಒಮ್ಮೆ ಮಂಜೂರಾದ ಪಾಲಿಹೌಸ್‌ಗಳನ್ನೇ ಹೊಸದಾಗಿ ಮಂಜೂರಾದ ಫಲಾನುಭವಿಗಳಿಗೆ ಅಕ್ರಮವಾಗಿ ಹಸ್ತಾಂತರಿಸಿದ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.

* ಸರ್ಕಾರದ ನಿರ್ದೇಶನದಂತೆ ಪ್ರತಿ ತಾಲ್ಲೂಕು ಹಾಗೂ ಹೋಬಳಿಮಟ್ಟದಲ್ಲಿ ‘ಗ್ಯಾರಂಟಿ ಸಮಾವೇಶ’ ನಡೆಸಬೇಕು.

ಮತ್ತೊಂದು ಕ್ರೀಡಾ ಹಾಸ್ಟೆಲ್‌ಗೆ ಪ್ರಸ್ತಾವ ಸಲ್ಲಿಸಿ
‘ಹೆಚ್ಚಿನ ಜನಸಂಖ್ಯೆ ಹೊಂದಿದ ಜಿಲ್ಲೆಯಲ್ಲಿ ಮತ್ತೊಂದು ಕ್ರೀಡಾ ಹಾಸ್ಟೆಲ್‌ಗೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು. ಈಗ ಬೆಳಗಾವಿಯ ಕ್ರೀಡಾ ಹಾಸ್ಟೆಲ್‌ನಲ್ಲಿ ಎಷ್ಟು ಕ್ರೀಡಾಪಟುಗಳಿದ್ದಾರೆ? ಅವರ ವಿದ್ಯಾರ್ಹತೆ ಏನು? ಊಟದ ಮೆನು ಹೇಗಿದೆ? ಎಂದು ವಿವರ ಪಡೆದುಕೊಂಡ ಅವರು ‘ಬೆಳಗಾವಿಗೆ ಮತ್ತೊಂದು ಕ್ರೀಡಾ ಹಾಸ್ಟೆಲ್‌ ಅಗತ್ಯವಿದೆ. ಚಿಕ್ಕೋಡಿ ಅಥವಾ ಗೋಕಾಕದಲ್ಲಿ ಅದನ್ನು ಆರಂಭಿಸಲು ಪ್ರಸ್ತಾವ ಸಲ್ಲಿಸಿ’ ಎಂದು ನಿರ್ದೇಶನ ನೀಡಿದರು. ‘ನಾನು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಶೀಘ್ರವೇ ಹಾಸ್ಟೆಲ್‌ಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸುತ್ತೇವೆ’ ಎಂದೂ ಹೇಳಿದರು.
‘ಗ್ರಾಮೀಣ ಕ್ಷೇತ್ರದಲ್ಲೇ ಅಡ್ಡಿ’
‘ಬಹು ನಿರೀಕ್ಷಿತ ರೈಲ್ವೆ ಮಾರ್ಗದ ಯೋಜನೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಕೆಲವು ಗ್ರಾಮಗಳ ರೈತರೇ ಅಡ್ಡಿಪಡಿಸುತ್ತಿದ್ದಾರೆ’ ಎಂದು ಸಂಸದೆ ಮಂಗಲಾ ಅಂಗಡಿ ತಕರಾರು ತೆಗೆದರು. ‘ಈಗಾಗಲೇ ಅನುದಾನ ಬಿಡುಗಡೆಯಾಗಿರುವ ಯೋಜನೆ ಆರಂಭಿಸಲು ಅನುಕೂಲವಾಗುವಂತೆ ಸಮೀಕ್ಷೆ ಮತ್ತು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದೂ ಸೂಚಿಸಿದರು. ಈ ವೇಳೆ ಮಾತನಾಡಿದ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ‘ಕಾಮಗಾರಿ ವಿಳಂಬವಾಗುತ್ತಿರುವ ಕಾರಣ ಯೋಜನಾ ವೆಚ್ಚ ಹೆಚ್ಚುತ್ತಿದೆ. ಈಗ ಮತ್ತೆ ನಾವು ರೈಲ್ವೆ ಮಂಡಳಿ ಸಂಪರ್ಕಿಸಬೇಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT