ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸತೀಶ ಜಾರಕಿಹೊಳಿ ಭರವಸೆ; ರೈತರ ಪ್ರತಿಭಟನೆ ಅಂತ್ಯ

Published 12 ಮಾರ್ಚ್ 2024, 15:06 IST
Last Updated 12 ಮಾರ್ಚ್ 2024, 15:06 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಕಚೇರಿ ಮುಂದೆ ರೈತರು ನಡೆಸುತ್ತಿದ್ದ ಧರಣಿ, ಸಚಿವ ಸತೀಶ ಜಾರಕಿಹೊಳಿ ಅವರ ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕ ಅಂತ್ಯ ಕಂಡಿತು.

ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡ ತಮಗೆ ಹೊಸ ನಿಯಮಾವಳಿ ಪ್ರಕಾರ, ಪರಿಹಾರ ನೀಡುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ರೈತರು ನೀರಾವರಿ ನಿಗಮದ ಕಚೇರಿಯಲ್ಲಿ ಸೋಮವಾರ ಆರಂಭಿಸಿದ ಧರಣಿ, ಮಂಗಳವಾರವೂ ಮುಂದುವರಿಯಿತು.

ಧರಣಿ ಸ್ಥಳಕ್ಕೆ ಬಂದ ಸಚಿವ ಮಾತನಾಡಿ, ರೈತರ ಬೇಡಿಕೆಯಂತೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಗ್ರಾಮಗಳತ್ತ ತೆರಳಿದರು.

‘ನಾಲ್ಕೈದು ದಶಕಗಳ ಹಿಂದೆ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ತ್ವರಿತವಾಗಿ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿ ಮಾಸ್ತಿಹೊಳಿ, ಬೀರನಹೊಳಿ, ಹತ್ತರಗಿ ಮತ್ತು ಗುಡಗನಟ್ಟಿಯ ರೈತರು ಕಚೇರಿ ಆವರಣದಲ್ಲೇ ತಮ್ಮ ಜಾನುವಾರು ಕಟ್ಟಿ, ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು. ಇದರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಮೂರು ದಿನಗಳಲ್ಲಿ ಪ್ರಸ್ತಾವ: ‘ಹಿಡಕಲ್ ಜಲಾಶಯ ಯೋಜನೆಗೆ ಜಮೀನು ಸ್ವಾಧೀನ ಪಡಿಸಿಕೊಂಡ ಹಿಂದಿನ ದಾಖಲೆಗಳು ಈಗ ಲಭ್ಯವಿಲ್ಲ. ಹಾಗಾಗಿ ಹೊಸ ಕಾನೂನಿನ ಪ್ರಕಾರ, ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ನೀರಾವರಿ ನಿಗಮ ಒಪ್ಪಿಗೆ ನೀಡಿದೆ. ಮುಂದಿನ ವಾರದೊಳಗೆ ಲೋಕಸಭೆ ಚುನಾವಣೆ ಘೋಷಣೆಯಾಗುವ ನಿರೀಕ್ಷೆಯಿದ್ದು, ಮೂರು ದಿನಗಳ ಒಳಗೆ ಪ್ರಸ್ತಾವ ಕಳುಹಿಸುವಂತೆ ಸೂಚಿಸಿದ್ದೇನೆ. ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆ ಬಗೆಹರಿಸಬೇಕಿದೆ’ ಎಂದು ಸಚಿವ ಜಾರಕಿಹೊಳಿ ಹೇಳಿದರು.

‘50 ವರ್ಷಗಳ ಹಿಂದೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಅಧಿಕಾರಿಗಳು ಕೆಲವು ವರ್ಷಗಳಿಂದ ಈಗಿನ ಹುದ್ದೆಯಲ್ಲಿದ್ದಾರೆ. ಸರ್ಕಾರದ ಮುಂದೆ ವಾಸ್ತವಾಂಶ ತರಲು ತೀರ್ಮಾನಿಸಲಾಗಿದೆ. ನೀರಾವರಿ ನಿಗಮದ ಅಧಿಕಾರಿಗಳು, ವಿಶೇಷ ಭೂಸ್ವಾಧೀನ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ, ಪ್ರಸ್ತಾವ ಕಳುಹಿಸಲಿದ್ದಾರೆ’ ಎಂದರು.

‘ನಿಮಗೆ ನ್ಯಾಯ ಒದಗಿಸಲು ನಾನು ಬದ್ಧನಿದ್ದೇನೆ’ ಎಂದು ಸಚಿವ ಆಶ್ವಾಸನೆ ನೀಡಿದ್ದರಿಂದ ರೈತರು ಧರಣಿ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT