ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲ–ಪುಷ್ಪ ಕೃಷಿಯಿಂದ ಲಾಭ: ಪೇರಲ, ಮಾವು, ಕರಿಬೇವು ಬೆಳೆಯುವ ಜ್ಯೋತಿ

ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ಕೇರೂರ ಗ್ರಾಮದ ಜ್ಯೋತಿ ಮಲ್ಲಪ್ಪ ಮಾಳಿ ಎನ್ನುವ ಪ್ರಯೋಗಶೀಲ ರೈತರೊಬ್ಬರು ಮಸಾರಿ ಭೂಮಿಯಲ್ಲಿ ಪೇರಲ ಮತ್ತು ಮಾವು ಜೊತೆ ಮಿಶ್ರ ಬೆಳೆಯಾಗಿ ಹೂವು ಹಾಗೂ ತರಕಾರಿ ಬೆಳೆದು ಆದಾಯ ಕಾಣುತ್ತಿದ್ದಾರೆ.

ಸಾಂಪ್ರದಾಯಿಕವಾಗಿ ಕಬ್ಬು ಬೆಳೆಯುತ್ತಿದ್ದ ಅವರು, ಅದರಿಂದ ಹೆಚ್ಚಿನ ಆದಾಯ ಸಿಗದಿದ್ದರಿಂದ ಪರ್ಯಾಯವಾಗಿ ಪೇರಲ ಮತ್ತು ಮಾವು ಬೆಳೆದಿದ್ದಾರೆ. 2 ವರ್ಷಗಳ ಹಿಂದೆ 300 ಪೇರಲ ಮತ್ತು 400 ಮಾವಿನ ಸಸಿಗಳನ್ನು ನೆಟ್ಟಿದ್ದಾರೆ. ನಾಟಿ ಮಾಡಿದ 9ನೇ ತಿಂಗಳಿನಲ್ಲಿಯೇ ಪೇರಲ ಫಲ ಕೊಟ್ಟಿದೆ. ಈ ವರ್ಷ ಮಾವು ಕೂಡ ಕೊಂಚ ಫಲ ನೀಡಿದೆ. ಮುಂದಿನ ವರ್ಷದಿಂದ ಮಾವು ಕೂಡ ಹೆಚ್ಚಿನ ಆದಾಯ ತಂದುಕೊಡಲಿದೆ ಎನ್ನುವ ನಿರೀಕ್ಷೆ ಅವರದು.

ಒಂದೂವರೆ ಎಕರೆ ಭೂಮಿಯಲ್ಲಿ ಬೆಳೆದಿರುವ ಮಾವು ಮತ್ತು ಪೇರಲ ಗಿಡಗಳ ಮಧ್ಯೆ ಋತುಮಾನದ ಪ್ರಕಾರ ಚೆಂಡು ಹೂವು ಮತ್ತು ಆಸ್ಟರ್ ಪುಷ್ಪಗಳನ್ನು ಬೆಳೆಯುತ್ತಾರೆ. ಹೂವಿನ ಗಿಡಗಳು ತೆರವಾದ ನಂತರ ಬಗೆ ಬಗೆಯ ತರಕಾರಿ ಮತ್ತು ಸೊಪ್ಪುಗಳನ್ನು ಹಾಕುತ್ತಿದ್ದಾರೆ.

ಫಲ ಹೇಗೆ?:‘ಒಂದು ಎಕರೆಯಲ್ಲಿ ಗರಿಷ್ಠ 50 ಟನ್ ಕಬ್ಬು ಬೆಳೆಯುತ್ತದೆ. ಟನ್ ಒಂದಕ್ಕೆ ₹ 3ಸಾವಿರ ದರ ನೀಡಿದರೂ ₹ 1.50 ಲಕ್ಷ ಆದಾಯ ಬರುತ್ತದೆ. ಅದರಲ್ಲಿ ಕಬ್ಬು ಬೆಳೆಯಲು ಸುಮಾರು ₹50ಸಾವಿರ ಖರ್ಚಾಗುತ್ತದೆ. ಒಂದು ವರ್ಷಕ್ಕೆ ಒಂದು ಎಕರೆಯಲ್ಲಿ ₹ 1 ಲಕ್ಷ ಆದಾಯ ಕೈ ಸೇರುತ್ತದೆ. ಈಗ ನಾವು ಪೇರಲ ಬೆಳೆದಿದ್ದು, ನಾಟಿ ಮಾಡಿದ 9ನೇ ತಿಂಗಳಿನಿಂದ ಫಲ ಆರಂಭಗೊಂಡಿದೆ. ಒಂದು ಬಾರಿ ಕನಿಷ್ಠ ₹ 45ಸಾವಿರ ಆದಾಯ ಸಿಗುತ್ತಿದೆ. ವರ್ಷದಲ್ಲಿ ಮೂರು ಬಾರಿ ಹಣ್ಣು ಕಟಾವು ಮಾಡುತ್ತೇವೆ. ಪೇರಲ ಬೆಳೆಯಿಂದಲೇ ವರ್ಷಕ್ಕೆ ಖರ್ಚು ವೆಚ್ಚ ಕಳೆದು ಲಕ್ಷ ರೂಪಾಯಿ ಕೈಸೇರುತ್ತದೆ’ ಎನ್ನುತ್ತಾರೆ ಅವರು.

‘ಪೇರಲ ಮತ್ತು ಮಾವು ಬೆಳೆಗಳ ಸುತ್ತಮತ್ತು 10 ಗುಂಟೆ ಭೂಮಿಯಲ್ಲಿ 1,300 ಕರಿಬೇವು ಸಸಿಗಳನ್ನು ನಾಟಿ ಮಾಡಿದ್ದೇವೆ. ವರ್ಷದಲ್ಲಿ 3 ಬಾರಿ ಕಟಾವು ಆಗುತ್ತದೆ. ಸರಾಸರಿ ₹ 45ರಿಂದ 100ಗಳಿಗೆ ಪ್ರತಿ ಕೆ.ಜಿ. ಕರಿಬೇವು ಮಾರಾಟವಾಗುತ್ತಿದೆ. ಕರಿಬೇವು, ಪೇರಲ ಮತ್ತು ಮಾವು ಗಿಡಗಳ ಮಧ್ಯೆ ವಿವಿಧ ಬಗೆಯ ತರಕಾರಿ ಮತ್ತು ಸೊಪ್ಪುಗಳನ್ನೂ ಬೆಳೆಯುತ್ತೇನೆ. ಅದರಿಂದ ವರ್ಷವೊಂದರಲ್ಲಿ ಕನಿಷ್ಠ ₹ 2 ಲಕ್ಷ ಸಿಗುತ್ತದೆ’ ಎಂದು ತಿಳಿಸಿದರು.

ಹನಿ ನೀರಾವರಿ:ಕೃಷ್ಣಾ ನದಿಯಿಂದ ಅಲ್ಲಿನ ರೈತರು ಸಾಮೂಹಿಕವಾಗಿ ಏತ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಜ್ಯೋತಿ ಮಾಳಿ ಕೂಡ ಅದರಿಂದ ನೀರು ಪಡೆಯುತ್ತಾರೆ. ಹೊಲದಲ್ಲಿ ಕೊಳವೆಬಾವಿ ಕೊರೆಸಿದ್ದಾರೆ. ಕೃಷಿ ಹೊಂಡ ನಿರ್ಮಿಸಿದ್ದಾರೆ. ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ.

ಅವರ ಕೃಷಿ ಸಾಧನೆ ಗುರುತಿಸಿ ಕೃಷಿ ಇಲಾಖೆಯು ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿದೆ. ಸಂಪರ್ಕಕ್ಕೆ ಮೊ.ಸಂಖ್ಯೆ: 8722557520.

ನಾನೇ ಮಾರುತ್ತೇನೆ

ಉತ್ಪನ್ನಗಳನ್ನು ದಲ್ಲಾಳಿಗಳ ಮೂಲಕ ಮಾರುವುದಿಲ್ಲ. ಖುದ್ದಾಗಿ ಸುತ್ತಮುತ್ತಲಿನ ಪಟ್ಟಣ ಮತ್ತು ಗ್ರಾಮಗಳ ಸಂತೆಗಳಲ್ಲಿ ಮಾರುತ್ತೇನೆ. ಇದರಿಂದ ಹೆಚ್ಚಿನ ಲಾಭ ಸಿಗುತ್ತಿದೆ.

– ಜ್ಯೋತಿ ಮಾಳಿ, ಕೃಷಿಕ, ಕೇರೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT