ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಭವನಕ್ಕೆ ಸಿಂಹಪಾಲು: ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ

Last Updated 9 ಅಕ್ಟೋಬರ್ 2021, 13:28 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕಿತ್ತೂರು ಕ್ಷೇತ್ರದ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 2018ರಿಂದ ಇಲ್ಲಿಯವರೆಗೆ ಶೇ 70ರಷ್ಟು ಪಾಲನ್ನು ಸಮುದಾಯ ಭವನ ನಿರ್ಮಾಣಕ್ಕೆ ನೀಡಿದ್ದಾರೆ.

2018ರಲ್ಲಿ ವಿವಿಧ ಸಮಾಜದವರ ಅಥವಾ ದೇವಸ್ಥಾನಗಳ ಭವನಗಳ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 2019 ಮತ್ತು 2020ರಲ್ಲಿ ನೀಡಿದ ಹಣದಲ್ಲಿ ಭವನಗಳ ಕಾಮಗಾರಿ ಕೆಲವೆಡೆ ಮುಗಿದಿವೆ. ಕೆಲವೆಡೆ ಪ್ರಗತಿಯಲ್ಲಿದೆ.

ಶಾಲೆಗಳ ಮೂಲ ಸೌಲಭ್ಯಗಳ ಕೊರತೆ ನೀಗಿಸಲು ಕೂಡ ಹಣ ಬಳಸಲಾಗಿದೆ. ಬಿಡುಗಡೆಯಾದ ಅನುದಾನದಲ್ಲಿ ಶೇ. 10ರಷ್ಟನ್ನು ಶಾಲೆ, ಕಾಲೇಜುಗಳಿಗೆ ಡೆಸ್ಕ್, ಪ್ರೊಜೆಕ್ಟರ್ ಸೇರಿ ಕೆಲವು ಪರಿಕರಗಳನ್ನು ಒದಗಿಸಲು ನೀಡಲಾಗಿದೆ.

ಆಂಬುಲೆನ್ಸ್‌ಗೆ ಅನುದಾನ:ಕೋವಿಡ್ 2ನೇ ಅಲೆ ಸೃಷ್ಟಿಸಿದ ಆತಂಕ ಪರಿಸ್ಥಿತಿ ಎದುರಿಸಲು ಅನುದಾನ ಬಳಸಿದ್ದಾರೆ. ಒಟ್ಟು ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶೇ.5ರಷ್ಟು ಕೊಟ್ಟಿರುವುದು ಅಂಕಿ–ಅಂಶಗಳಿಂದ ತಿಳಿದುಬರುತ್ತದೆ. ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರ ಹಾಗೂ ನೇಸರಗಿ ಹೋಬಳಿ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಿಗೆ ಆಮ್ಲಜನಕ ಸಾಂದ್ರಕಗಳನ್ನು ಕೊಡಿಸಿದ್ದಾರೆ. ನೇಸರಗಿ ಹಾಗೂ ಎಂ.ಕೆ. ಹುಬ್ಬಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ₹ 13.50 ಲಕ್ಷ ಮೊತ್ತದಲ್ಲಿ ಆಂಬುಲೆನ್ಸ್‌ಗಳನ್ನು ಒದಗಿಸಿದ್ದಾರೆ.

ಅಂಗವಿಕಲರಿಗೆ ತ್ರಿಚಕ್ರವಾಹನ ಪೂರೈಕೆಗೆ ಶೇ.5ರಷ್ಟು ನಿಧಿ ಬಳಸಲಾಗಿದೆ. ಪೊಲೀಸ್ ಇಲಾಖೆಗೂ ವಾಹನ ಒದಗಿಸಿದ್ದಾರೆ. ತಿಗಡಿಯ ಗಣಪತಿ ದೇವಸ್ಥಾನ, ಮದನಬಾವಿ ದೇವರಕೊಂಡ ಅಜ್ಜನವರ ಮಠ, ಎಂ.ಕೆ. ಹುಬ್ಬಳ್ಳಿ ಜನತಾ ಪ್ಲಾಟ್ ಬಸವೇಶ್ವರ ದೇವಸ್ಥಾನ, ಸೋಮನಟ್ಟಿಯಲ್ಲಿ ದೇವರಕೊಂಡ ಅಜ್ಜನವರ ಮಠದ ಬಳಿ ಸೇರಿ ಹಲವೆಡೆ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದಾರೆ.

ಹಲವು ಕಾಮಗಾರಿಗೆ:ಚನ್ನಮ್ಮನ ಕಿತ್ತೂರು, ನೇಸರಿಯ ಸರ್ಕಾರಿ ಪಿಯು ಕಾಲೇಜಿಗೆ ಪ್ರೊಜೆಕ್ಟರ್ ಕೊಡಿಸಿದ್ದಾರೆ. ಗಿರಿಯಾಲದ ಕಲ್ಮೇಶ್ವರ ದೇವಸ್ಥಾನ ಮುಂದಿನ ರಸ್ತೆ ಕಾಮಗಾರಿಗೆ ಹಣ ನೀಡಿದ್ದಾರೆ. ಡೊಂಬರಕೊಪ್ಪದ ಹನುಮಂತ ದೇವಸ್ಥಾನದ ಕಾಂ‍ಪೌಂಡ್ ನಿರ್ಮಿಸಿಕೊಟ್ಟಿದ್ದಾರೆ. ಹೋಗರ್ತಿ ಗ್ರಾಮದ ಬಸವೇಶ್ವರ ದೇಗುಲದ ರಂಗಮಂದಿರ ಮುಂದುವರಿದ ಕಾಮಗಾರಿಗೆ ಹಣ ನೀಡಿದ್ದಾರೆ. ಚನ್ನಮ್ಮನ ಕಿತ್ತೂರು ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಗೆ ನೀಡಿದ್ದಾರೆ. ಕೆಲವು ಮಕ್ಕಳಿಗೆ ಶ್ರವಣ ಯಂತ್ರ ವಿತರಣೆಗೆ, ಸರ್ಕಾರಿ ಪ್ರೌಢಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕ ಖರೀದಿಗೆ ಅನುದಾನ ಒದಗಿಸಿದ್ದಾರೆ.

ಕೆಲವು ಶಾಲೆಗಳ ರಂಗಮಂದಿರ ನಿರ್ಮಾಣ ಮತ್ತು ರಸ್ತೆಗಳ ಅಭಿವೃದ್ಧಿಗೆ ಕೊಟ್ಟಿದ್ದಾರೆ. ಸಣ್ಣ ಸಣ್ಣ ಮೊತ್ತದ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದಾರೆ.

‘ಮೂರು ವರ್ಷಗಳಲ್ಲಿ ₹ 2.50 ಕೋಟಿ ಅನುದಾನ ಬಂದಿದೆ. ಅಷ್ಟನ್ನೂ ಖರ್ಚು ಮಾಡಿದ್ದೇನೆ. ಸಮುದಾಯ ಭವನಗಳ ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆಗೆ ಆದ್ಯತೆ ಕೊಟ್ಟಿದ್ದೇನೆ’ ಎನ್ನುತ್ತಾರೆ ಶಾಸಕರು.

‘ಕೋವಿಡ್ ಸೋಂಕು ಬಾಧಿತರಿಗೆ ಹೆಚ್ಚು ತೊಂದರೆ ಆಗಬಾರದೆಂದು ಕಾಳಜಿ ವ್ಯಕ್ತಪಡಿಸಿ ಆರೋಗ್ಯ ಕೇಂದ್ರಕ್ಕೆ ಆಮ್ಲಜನಕ ಸಾಂದ್ರಕಗಳನ್ನು ಹಾಗೂ ಆಂಬುಲೆನ್ಸ್‌ಗಳನ್ನು ಶಾಸಕ ಮಹಾಂತೇಶ ದೊಡ್ಡಗೌಡರ ಒದಗಿಸಿರುವುದು ಮಾನವೀಯತೆಗೆ ಮತ್ತು ಕಾಳಜಿಗೆ ಸಾಕ್ಷಿಯಾಗಿದೆ’ ಎನ್ನುತ್ತಾರೆ ತಿಗಡೊಳ್ಳಿ ಗ್ರಾಮಸ್ಥ ಗೋಪಾಲ ಹುಕ್ಕೇರಿ.

ಹೆಚ್ಚು ಅನುದಾನ

ಗ್ರಾಮಗಳ ಯುವಕರಿಗೆ ಸಭೆ, ಸಮಾರಂಭ ನಡೆಸಲು ಮತ್ತು ಅವರ ಆರೋಗ್ಯಕರ ಚರ್ಚೆಗೆ ತಾಣವೊದಗಿಸಲು ಸಮುದಾಯ ಭವನಕ್ಕೆ ಹೆಚ್ಚು ಅನುದಾನ ನೀಡಲಾಗಿದೆ.

– ಮಹಾಂತೇಶ ದೊಡ್ಡಗೌಡರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT