ರಾಯಬಾಗ(ಬೆಳಗಾವಿ): ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಯಲ್ಲವ್ವ ಅರ್ಜುನ ಕರಿಹೊಳೆ(30), ಅವರ ಮಕ್ಕಳಾದ ಸ್ವಾತಿ(5), ಮುತ್ತಪ್ಪ(1) ಮೃತರು.
‘ಪತಿ ಅರ್ಜುನ ಅವರೊಂದಿಗೆ ಯಲ್ಲವ್ವ ಭಾನುವಾರ ಬೆಳಿಗ್ಗೆ ಜಗಳವಾಡಿದ್ದರು. ಪತಿ ಕೃಷಿಭೂಮಿಯತ್ತ ತೆರಳಿದ ನಂತರ, ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಶಂಕೆ: ಆರೋಪ
‘ನನ್ನ ಮಗು ಯಲ್ಲವ್ವಳ ಪತಿ ವಿಪರೀತ ಮದ್ಯ ವ್ಯಸನಿಯಾಗಿದ್ದ. ವರದಕ್ಷಿಣೆ ತರುವಂತೆ ಆಗಾಗ ಪೀಡಿಸುತ್ತಿದ್ದ. ಹಾಗಾಗಿ ಆತನೇ ಕೊಲೆ ಮಾಡಿ, ಬಾವಿಯಲ್ಲಿ ಬಿಸಾಕಿರುವ ಶಂಕೆ ಇದೆ’ ಎಂದು ತಾಯಿ ಶೋಭಾ ಹಾಲಗೊಂಡ ಅವರು, ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.