ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ನಡೆ ಇದೇ 12ರಂದು ಪ್ರಕಟ: ಸಿ.ಎಂ. ಇಬ್ರಾಹಿಂ

Last Updated 3 ಮಾರ್ಚ್ 2022, 12:55 IST
ಅಕ್ಷರ ಗಾತ್ರ

ಬೆಳಗಾವಿ: ‘ಬಸವಾದಿ ಶರಣರು ನೀಡಿದ ಸಿದ್ಧಾಂತವುಳ್ಳ ಸರ್ಕಾರ ತರಬೇಕು; ಸಜ್ಜನರ ಜೊತೆಗಿರಬೇಕು ಎಂದುಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಮುಂದಿನ ನಡೆಯನ್ನು ಮಾರ್ಚ್‌ 12ರಂದು ಪ್ರಕಟಿಸುತ್ತೇನೆ’ ಎಂದು ವಿಧಾನಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಮದುವೆ ಖಚಿತ. ಆದರೆ, ಬೀಗರಾರು ಎನ್ನುವುದನ್ನು ಅಂದೇ ಹೇಳುತ್ತೇನೆ. ಬಹಳ ಒಳ್ಳೆಯ ಬದಲಾವಣೆ ಆಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲಿ ಹಿಜಾಬ್‌ (ಶಿರವಸ್ತ್ರ) ವಿಷಯದ ಬಗ್ಗೆದೊಡ್ಡ ಚರ್ಚೆ ನಡೆಯುತ್ತಿದೆ. ತಲೆ ಮೇಲೆ ಸೆರಗು ಬೇಡ ಎಂದು ಯಾರು ಹೇಳುತ್ತಾರೆ? ಅದನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಹೋಗಬೇಕೇನು? ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ ಕೂಡ ತಲೆ ಮೇಲೆ ಸೆರಗು ಹಾಕಿಕೊಳ್ಳುತ್ತಿದ್ದರು. ನನ್ನ (ಮುಸ್ಲಿಮರು) ಮಗಳು ಹಾಕಬಾರದು ಎನ್ನುವುದರಲ್ಲಿ ಏನರ್ಥವಿದೆ?’ ಎಂದು ಕೇಳಿದರು.

ಬೊಮ್ಮಾಯಿ ತಾಯಿಯೂ ಹಾಕುತ್ತಿದ್ದರು:‘ಈ ಭಾಗದಲ್ಲಿ ತಲೆ ಮೇಲೆ ಸೆರಗು ಹಾಕಿಕೊಳ್ಳದ ಹೆಣ್ಣು ಮಕ್ಕಳಿದ್ದರೆ ತೋರಿಸಿ. ಎಲ್ಲ ಜಾತಿಯವರೂ ಹಾಕಿಕೊಳ್ಳುತ್ತಾರೆ. ಹೆಣ್ಣಿಗೆ ಸೆರಗು ಒಳ್ಳೆಯ ಪ್ರಭೆ ನೀಡುತ್ತದೆ. ಮಹಾಲಕ್ಷ್ಮಿ ರೀತಿ ಕಾಣಿಸುತ್ತಾರೆ. ಸೆರಗಿಲ್ಲದ ತಲೆ ತಲೆಯಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಾಯಿಯೂ ಸೆರಗು ಹಾಕುತ್ತಿದ್ದರು. ಸೊಸೆಗೂ ಹಾಕಿಸಲಿ. ಅದಕ್ಕೆ ಜಾತಿ ಬಣ್ಣ ಕಟ್ಟಬಾರದು’ ಎಂದರು.

‘ಬಿಜೆಪಿಯವರಿಗೆ ಕೆಲಸವಿಲ್ಲದಿರುವುದಕ್ಕೆ ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ’ ಎಂದು ಟೀಕಿಸಿದರು.

‘ಬಿಜೆಪಿಯವರು ಕೆಡಿಸುವುದು, ನಾವು ಸರಿಪಡಿಸುವುದು ಮಾಡುತ್ತಿದ್ದೇವೆ’ ಎಂದರು.

ಕಾಂಗ್ರೆಸ್‌ನಿಂದ ನಡೆದ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿಲ್ಲವೇಕೆ ಎಂಬ ಪ್ರಶ್ನೆಗೆ, ‘ಅವರದು ಮೇಕೆದಾಟು; ನಮ್ಮದು ಸಿಂಹದಾಟು’ ಎಂದಷ್ಟೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT