ಆಟೊ ಮೀಟರ್‌; ಆದೇಶವಾಗಿ 4 ವರ್ಷ ಕಳೆದರೂ ಜಾರಿಯಿಲ್ಲ!

ಮಂಗಳವಾರ, ಜೂಲೈ 16, 2019
26 °C
ಪ್ರಯಾಣಿಕರ ಸುಲಿಗೆಗೆ ತಡೆ ಎಂದು?

ಆಟೊ ಮೀಟರ್‌; ಆದೇಶವಾಗಿ 4 ವರ್ಷ ಕಳೆದರೂ ಜಾರಿಯಿಲ್ಲ!

Published:
Updated:
Prajavani

ಬೆಳಗಾವಿ: ಆಟೊ ಪ್ರಯಾಣಿಕರ ಸುಲಿಗೆ ತಡೆಗಟ್ಟಲು ‘ಬ್ರಹ್ಮಾಸ್ಟ್ರ’ವಾಗಬೇಕಾಗಿದ್ದ ‘ಆಟೊ ಮೀಟರ್‌’ ಈಗ ಹಲ್ಲಿಲ್ಲದ ಹಾವಿನಂತಾಗಿದೆ. ಕಡ್ಡಾಯವಾಗಿ ಮೀಟರ್‌ ಬಳಸಬೇಕೆಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿ, ನಾಲ್ಕು ವರ್ಷಗಳು ಗತಿಸಿದ್ದರೂ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಆಟೊ ಚಾಲಕರ ಸುಲಿಗೆ ಮುಂದುವರಿದಿದೆ!

ಪ್ರಯಾಣಿಕರ ಸ್ನೇಹಿಯಾಗಬೇಕಾಗಿದ್ದ ಆಟೊ ಪ್ರಯಾಣವು ಕಂಟಕಪ್ರಾಯವಾಗಿದೆ. ಕರೆದಲ್ಲಿಗೆ ಬರುವುದಿಲ್ಲ, ಬಂದರೂ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಾರೆ, ರಾತ್ರಿಯಾಗಿದ್ದರಂತೂ ಅವರ ಆಟಾಟೋಪ ಹೇಳತೀರದ್ದು. ಹೊತ್ತಿಲ್ಲದ ಹೊತ್ತಿನಲ್ಲಿ ಯಾರಿಗೆ ಹೇಳುವುದೆಂದು ಪ್ರಯಾಣಿಕರು ಮರುಮಾತನಾಡದೆ ಚಾಲಕ ಕೇಳಿದಷ್ಟು ಹಣ ನೀಡಿ, ಪ್ರಯಾಣಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಇಂತಹ ಹಲವಾರು ದೂರುಗಳು ಪ್ರತಿದಿನ ಕೇಳಿಬರುತ್ತವೆ. ಆದರೆ, ಇದ್ಯಾವುದೂ ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಆರ್‌ಟಿಒ ಅಧಿಕಾರಿಗಳು ಕಣ್ಣು– ಕಿವಿ ಮುಚ್ಚಿಕೊಂಡು ಕೂತಿದ್ದಾರೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಆದೇಶವಿದ್ದರೂ, ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಗಳ ಮೇಲೆ ವಾಹನ ತಡೆದು, ದಾಖಲೆ ಪರಿಶೀಲಿಸಲು ತೋರುವ ‘ಉತ್ಸಾಹ’ ಇಲ್ಲಿ ಕಾಣುತ್ತಿಲ್ಲ!

2015ರಲ್ಲಿ ಆದೇಶ: ಬೆಳಗಾವಿ ನಗರದಲ್ಲಿ 5,000ಕ್ಕೂ ಹೆಚ್ಚು ಆಟೊಗಳು ಓಡಾಡುತ್ತಿವೆ. ಪ್ರಯಾಣಿಕರು ಬಯಸುವ ಸ್ಥಳಗಳಿಗೆ, ನ್ಯಾಯ ಸಮ್ಮತ ಬಾಡಿಗೆ ದರ ಪಡೆದು ಅವರನ್ನು ತಲುಪಿಸುವುದು ಇವುಗಳ ಆದ್ಯ ಕೆಲಸ. ಆದರೆ, ತಮ್ಮ ಆದ್ಯ ಕೆಲಸವನ್ನೇ ಮರೆತಂತಿರುವ ಕೆಲವು ಆಟೊ ಚಾಲಕರು, ಕರೆದಲ್ಲಿಗೆ ಬರುವುದಿಲ್ಲ, ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಾರೆ. ವಯಸ್ಸಾದವರಿಗೆ ಹಾಗೂ ಹೆಣ್ಣುಮಕ್ಕಳಿಗೂ ಕನಿಕರ ತೋರುವುದಿಲ್ಲವೆಂದು ಹಲವು ದೂರುಗಳು ಕೇಳಿಬರುತ್ತವೆ.

2015ರಲ್ಲಿ ಇಂತಹದ್ದೇ ಪರಿಸ್ಥಿತಿ ಇತ್ತು. ನೂರಾರು ದೂರುಗಳು ಅಂದಿನ ಜಿಲ್ಲಾಧಿಕಾರಿ ಎನ್‌.ಜಯರಾಮ್‌ ಅವರಿಗೆ ತಲುಪಿದ್ದವು. ತಮ್ಮ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಸಿ, ಕಡ್ಡಾಯವಾಗಿ ಆಟೊ ಮೀಟರ್‌ ಅಳವಡಿಸುವಂತೆ ಆದೇಶಿಸಿದರು.

ಆರಂಭದ 1.9 ಕಿ.ಮೀ ದೂರದ ಪ್ರಯಾಣಕ್ಕೆ ₹ 20. ನಂತರ ಪ್ರತಿ ಕಿ.ಮೀ.ಗೆ ₹ 10ರಂತೆ ದರ ನಿಗದಿಪಡಿಸಲಾಯಿತು. ರಾತ್ರಿ 10ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಸಾಮಾನ್ಯ ದರಕ್ಕಿಂತ 1.5ರಷ್ಟು ಹೆಚ್ಚಿಗೆ ದರ ವಿಧಿಸಲಾಗಿತ್ತು. ಆರಂಭದಲ್ಲಿ ಉತ್ಸಾಹ ತೋರಿದ ಆರ್‌ಟಿಒ ಅಧಿಕಾರಿಗಳು, ರಸ್ತೆಗೆ ಇಳಿದು ಆಟೊಗಳ ಪರೀಕ್ಷೆಗೆ ಮುಂದಾದರು. ಮೀಟರ್‌ ಅಳವಡಿಸದ ಅಲ್ಲೊಂದು, ಇಲ್ಲೊಂದು ಆಟೊಗಳಿಗೆ ದಂಡ ವಿಧಿಸಿದರು. ಕೆಲವು ಆಟೊಗಳ ಲೈಸೆನ್ಸ್‌ ಕೂಡ ತಡೆಹಿಡಿದಿದ್ದರು. ದಿನಗಳೆದಂತೆ ಉತ್ಸಾಹ ಕಳೆದುಕೊಂಡರು. ಮತ್ತೆ ಯಥಾಸ್ಥಿತಿ ಮುಂದುವರಿಯಿತು.

ಅಲಂಕಾರಿಕ ವಸ್ತು: ಲೈಸೆನ್ಸ್‌ ಪಡೆಯುವುದಗೋಸ್ಕರ ಇತ್ತೀಚೆಗೆ ಎಲ್ಲ ಚಾಲಕರು ಆಟೊಗಳಲ್ಲಿ ಮೀಟರ್‌ ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ, ಇವು ಕಾರ್ಯನಿರ್ವಹಿಸುವುದಿಲ್ಲ. ಕೇವಲ ಅಲಂಕಾರಿಕ ವಸ್ತುವಿನಂತಾಗಿವೆ. ಯಾರಾದರೂ ಪ್ರಯಾಣಿಕರು ಆಟೊ ಮೀಟರ್‌ ಹಾಕುವಂತೆ ಹೇಳಿದರೆ, ಅವರನ್ನು ಗುರಾಯಿಸಿ ನೋಡುತ್ತಾರೆ. ‘ಮೀಟರ್‌ ಚಾಲ್ತಿಯಲ್ಲಿ ಇಲ್ಲ, ಬೇರೆ ಆಟೊಗೆ ಹೋಗಿ’ ಎಂದು ಕಟುವಾಗಿ ಹೇಳಿ ಸಾಗಹಾಕುತ್ತಾರೆ. ಬೇರೆ ದಾರಿ ಕಾಣದೆ ಪ್ರಯಾಣಿಕರು, ಚಾಲಕ ಕೇಳಿದಷ್ಟು ಹಣ ನೀಡಿ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ.

ಯಾಕೆ ಕ್ರಮಕೈಗೊಳ್ಳುತ್ತಿಲ್ಲ?: ‘ಆಟೊಗಳಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರೇ ಪ್ರಯಾಣಿಸುತ್ತಾರೆ. ದುಪ್ಪಟ್ಟು ಬಾಡಿಗೆ ಕೇಳಿದರೆ ಎಲ್ಲಿಂದ ಕೊಡಬೇಕು. ನ್ಯಾಯ ಸಮ್ಮತ ಬಾಡಿಗೆ ದರ ನೀಡಲು ನಮ್ಮದು ತಕರಾರಿಲ್ಲ. ಆದರೆ, ಚಾಲಕರು ಬೇಕಾಬಿಟ್ಟಿ ಕೇಳುತ್ತಾರೆ. ಇವರ ವಿರುದ್ಧ ಯಾಕೆ ಅಧಿಕಾರಿಗಳು ಕ್ರಮಕೈಗೊಳ್ಳುವುದಿಲ್ಲ? ಕಾಯ್ದೆ, ನಿಯಮ, ಆದೇಶ ಎಲ್ಲವೂ ಇದ್ದರೂ ಏನೂ ಮಾಡಲಿಕ್ಕಾಗುತ್ತಿಲ್ಲವೇಕೆ?’ ಎಂದು ಹೆಸರು ಹೇಳಲು ಇಚ್ಛಿಸದ ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. 

ಆರ್‌ಟಿಒ ಕ್ರಮಕೈಗೊಳ್ಳಬೇಕು: ‘ಆಟೊ ಮೀಟರ್‌ ಚಾಲ್ತಿಯಲ್ಲಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸುವ ಅಧಿಕಾರ ಆರ್‌ಟಿಒ ಅಧಿಕಾರಿಗಳಿಗೆ ಇದೆ. ಮೀಟರ್‌ ಅಳವಡಿಸದಿದ್ದರೆ ಅಂತಹ ಆಟೊಗಳ ಲೈಸೆನ್ಸನ್ನು ರದ್ದುಪಡಿಸುವ ಅಧಿಕಾರ ಕೂಡ ಅವರಿಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ದರೆ ಅಂತಹ ಆಟೊ ಚಾಲಕರ ವಿರುದ್ಧ ನಾವು ಕ್ರಮ ಜರುಗಿಸುತ್ತೇವೆ. ಈ ಕೆಲಸವನ್ನು ನಾವು ನಿಯಮಿತವಾಗಿ ಮಾಡುತ್ತಿದ್ದೇವೆ’ ಎಂದು ಡಿಸಿಪಿ (ಅಪರಾಧ– ಸಂಚಾರ) ಯಶೋಧಾ ವಂಟಗೋಡಿ ಹೇಳಿದರು.

ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ; ಪ್ರತಿಕ್ರಿಯೆ ಪಡೆಯಲು ಹಲವು ಬಾರಿ ಮಾಡಿದ ದೂರವಾಣಿ ಕರೆಗಳನ್ನು ಆರ್‌ಟಿಒ ಶಿವಾನಂದ ಮಗದುಮ್ಮ ಸ್ವೀಕರಿಸಲಿಲ್ಲ.

‘ಪ್ರಿಪೇಯ್ಡ್‌ ಕೌಂಟರ್‌ ಬಂದ್‌’
ಪರ ಊರುಗಳಿಂದ ನಗರಕ್ಕೆ ಬಂದಿಳಿಯುವ ಪ್ರಯಾಣಿಕರು, ಹೆಚ್ಚಾಗಿ ಆಟೊಗಳನ್ನು ಅವಲಂಬಿಸುತ್ತಾರೆ. ಗಲ್ಲಿ ಗಲ್ಲಿಗಳಲ್ಲಿ ವಿಳಾಸ ಕೇಳಿಕೊಂಡು, ನಡೆದುಕೊಂಡು ಹೋಗುವುದು ಕಷ್ಟವೆಂದು ಅವರು ಆಟೊ ಚಾಲಕರನ್ನೇ ಅವಲಂಬಿಸುತ್ತಾರೆ. ಆದರೆ, ಇಂತಹ ಸ್ಥಿತಿಯನ್ನೇ ಚಾಲಕರು ದುರುಪಯೋಗ ಪಡಿಸಿಕೊಂಡು, ದುಪ್ಪಟ್ಟು ಬಾಡಿಗೆಗೆ ಪೀಡಿಸುತ್ತಾರೆ.

2 ಕಿ.ಮೀ ದೂರ ಸಂಚರಿಸಬೇಕಾದರೆ 40ರಿಂದ 50 ರೂಪಾಯಿ ಕೇಳುತ್ತಾರೆ. ಹೊರವಲಯದ ಪ್ರದೇಶಗಳಾದರೆ ಇನ್ನೂ ಹೆಚ್ಚು ಹೇಳುತ್ತಾರೆ. ಇದನ್ನು ತಡೆಗಟ್ಟಬೇಕೆಂದು ನಗರದ ಕೇಂದ್ರೀಯ ಬಸ್‌ ನಿಲ್ದಾಣ, ರಾಮದೇವ ಹೋಟೆಲ್‌ ಬಳಿ ಹಾಗೂ ರೈಲ್ವೆ ನಿಲ್ದಾಣದ ಬಳಿ ಪ್ರಿಪೇಯ್ಡ್‌ ಆಟೊ ಕೌಂಟರ್‌ ನಿರ್ಮಿಸಲಾಗಿತ್ತು. ಆರ್‌ಟಿಒ ಅಧಿಕಾರಿಗಳ ಸಹಕಾರದೊಂದಿಗೆ ಸಂಚಾರಿ ಪೊಲೀಸರು ಕೆಲವು ದಿನಗಳವರೆಗೆ ನಿರ್ವಹಿಸಿದರು. ನಂತರ ಇವು ಬಾಗಿಲು ಹಾಕಿದವು. ಕಾರ್ಯನಿರ್ವಹಿಸದೇ ಎಷ್ಟೋ ವರ್ಷಗಳಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !