ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ರೋಗ ನಿಯಂತ್ರಣಕ್ಕೆ ಕ್ರಮ

ಉದ್ಘಾಟಿಸಿದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ
Last Updated 11 ಸೆಪ್ಟೆಂಬರ್ 2019, 13:38 IST
ಅಕ್ಷರ ಗಾತ್ರ

ಬೆಳಗಾವಿ: ಬೈಲಹೊಂಗಲ ತಾಲ್ಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಲಾಯಿತು.

ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೇಂದ್ರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮಂತ್ರಾಲಯ ಸಹಯೋಗದಲ್ಲಿ ಜಾನುವಾರುಗಳ ಕಾಲುಬಾಯಿ ಜ್ವರ ಮತ್ತು ಕಂದು ರೋಗಗಳ ನಿಯಂತ್ರಣ ಮತ್ತು ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ನೆರವೇರಿಸಿದರು.

ನಂತರ ಮಾತನಾಡಿ, ‘ಕೇಂದ್ರವು 2019ರಿಂದ 2024ರವರೆಗೆ ₹ 13,343 ಕೋಟಿ ಆರ್ಥಿಕ ಬೆಂಬಲವನ್ನು ರಾಜ್ಯ ಸರ್ಕಾರಗಳಿಗೆ ನೀಡಲಿದೆ ಹಾಗೂ 2025ರ ಹೊತ್ತಿಗೆ ಕಾಲುಬಾಯಿ ರೋಗದ ಸಂಪೂರ್ಣ ಹತೋಟಿ ಹಾಗೂ 2030ರ ಹೊತ್ತಿಗೆ ನಿರ್ಮೂಲನೆ ಉದ್ದೇಶ ಹೊಂದಲಾಗಿದೆ’ ಎಂದು ತಿಳಿಸಿದರು.

ಏನಿದು ಕಾರ್ಯಕ್ರಮ?:

‘ಹಸು, ಎಮ್ಮೆ, ಕರುಗಳಲ್ಲಿ ತೀವ್ರಗತಿಯಲ್ಲಿ ಕಂದು ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲಾಗುವುದು. ಪ್ರಧಾನಿ ಚಾಲನೆ ನೀಡಿದ ಈ ಯೋಜನೆಯಲ್ಲಿ ದೇಶದ 51 ಕೋಟಿ ಜಾನುವಾರುಗಳಿಗೆ (ಹಸು, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ) ಕಾಲುಬಾಯಿ ರೋಗದ ವಿರುದ್ಧ ವರ್ಷಕ್ಕೆ 2 ಬಾರಿ ಲಸಿಕೆ ನೀಡಲಾಗುವುದು’ ಎಂದರು.

‘ಜಮೀನು ಹೊಂದಿರುವ ಎಲ್ಲಾ ರೈತ ಕುಟುಂಬಗಳಿಗೆ ಆದಾಯದ ಬೆಂಬಲ ನೀಡುವ ದೃಷ್ಟಿಯಿಂದ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು ಮತ್ತು ಮನೆ ಖರ್ಚು ನಿಭಾಯಿಸಲು ನೆರವಾಗಲು ಕೇಂದ್ರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಾರಂಭಿಸಿದೆ. ಪ್ರತಿ ರೈತ ಕುಟುಂಬಕ್ಕೆ 4 ತಿಂಗಳಿಗೊಮ್ಮೆ ₹ 2ಸಾವಿರದಂತೆ 3 ಕಂತುಗಳಲ್ಲಿ ₹ 6ಸಾವಿರ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ:

ಕೃಷಿ ವಿಜ್ಞಾನ ಕೇಂದ್ರದ ಸಲಹೆಗಾರ ಡಾ.ವಿ.ಎಸ್. ಕೋರಿಕಂಥಿಮಠ ಮಾತನಾಡಿ, ‘ರೈತರು ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ರೋಗ ಬಾರದಂತೆ ಕಾಪಾಡಿಕೊಳ್ಳಬೇಕು. ಹಾಲಿನ ಉತ್ಪಾದನೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಸಬಲತೆ ಸಾಧಿಸಬೇಕು’ ಎಂದು ಸಲಹೆ ನೀಡಿದರು.

ಡಾ.ಜಿ.ಪಿ. ಮನಗೂಳಿ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿದರು. ನಾಗನೂರ ಜಿಲ್ಲಾ ಪಂಚಾಯ್ತಿ ಸದಸ್ಯೆ ಲಾವಣ್ಯಾ ಶೀಲೆದಾರ, ಸುತಗಟ್ಟಿ ತಾಲ್ಲೂಕು ಪಂಚಾಯ್ತಿ ಸದಸ್ಯೆ ಸುಜಾತಾ ಬಾಳಿಗಟಿ, ಸುತಗಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದಾಕ್ಷಾಯಿಣಿ ರಾಚನ್ನವರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಶ್ರೀದೇವಿ, ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಐ.ಎಸ್. ಕೋಲಾರ ಇದ್ದರು.

53 ಜಾನುವಾರುಗೆ ಕಾಲುಬಾಯಿ ಹಾಗೂ ಕುಂದುರೋಗಗಳ ಲಸಿಕೆ ನೀಡಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ.ಆರ್. ಪಾಟೀಲ ಸ್ವಾಗತಿಸಿದರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆ ಉಪನಿರ್ದೇಶಕ ಡಾ.ಅಶೋಕ ಕೊಳ್ಳ ಪ್ರಾಸ್ತಾವಿಕ ಮಾತನಾಡಿದರು. ವಿಜ್ಞಾನಿ ಎಸ್.ಎಂ. ವಾರದ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT