ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡವಾಡ | ಜಲಮೂಲದ ರಕ್ಷಣೆಗೆ ಅಧಿಕಾರಿಗಳ ನಿರ್ಲಕ್ಷ: ಭಣಗುಡುತ್ತಿರುವ ದೊಡ್ಡ ಕೆರೆ

ರವಿಕುಮಾರ ಎಂ.ಹುಲಕುಂದ
Published 23 ಮೇ 2024, 6:40 IST
Last Updated 23 ಮೇ 2024, 6:40 IST
ಅಕ್ಷರ ಗಾತ್ರ

ಬೈಲಹೊಂಗಲ: ತಾಲ್ಲೂಕಿನ ದೊಡವಾಡ ಗ್ರಾಮದ ಐತಿಹಾಸಿಕ ದೊಡ್ಡ ಕೆರೆ ಅತಿಕ್ರಮಣದಾರರು ಮತ್ತು ಪ್ರಭಾವಿಗಳ ಒತ್ತಡಕ್ಕೆ ಸಿಲುಕಿ ನರಳುತ್ತಿದೆ.

ಸುಮಾರು 60 ಎಕರೆ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಈ ಕೆರೆ ಅತಿಕ್ರಮಣ ಮತ್ತು ಒತ್ತುವರಿಯಿಂದ ಇದೀಗ ಕೇವಲ 30 ಎಕರೆ ಮಾತ್ರ ಉಳಿದಿದೆ.

ಜಲ ಮೂಲಗಳನ್ನು ರಕ್ಷಣೆ ಮಾಡಬೇಕು. ಅತಿಕ್ರಮಣಕಾರರ ಮೇಲೆ ಸೂಕ್ತ ಕ್ರಮ ಕೈಗೊಂಡು ಕೆರೆಗಳ ಒತ್ತುವರಿ ತೆರವುಗೊಳಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ, ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಕೆರೆಗಳ ನಿರ್ವಹಣೆ ಉಸ್ತುವಾರಿಗಾಗಿ ಜಿಲ್ಲಾಡಳಿತಗಳು ಕೆರೆ ಸಂರಕ್ಷಣಾ ಉಸ್ತುವಾರಿ ಸಮಿತಿಯನ್ನು ರಚಸಿ, ಆದೇಶ ಹೊರಡಿಸಿದ್ದರೂ ಅಧಿಕಾರಿಗಳ ನಿರ್ಲಕ್ಷದಿಂದ ಕೆರೆಗಳು ಕಣ್ಮರೆಯಾಗುತ್ತಿವೆ. ಇದಕ್ಕೆ ಈ ಗ್ರಾಮದ ದೊಡ್ಡ ಕೆರೆ ಜ್ವಲಂತ ಸಾಕ್ಷಿಯಾಗಿದೆ.

ಅಂತರ್ಜಲ ಮಟ್ಟ ಕುಸಿತ: ಗ್ರಾಮದ ಐತಿಹಾಸಿಕ ದೊಡ್ಡ ಕೆರೆಯಲ್ಲಿ ಈಗ ಹನಿ ನೀರೂ ಇಲ್ಲ. ಜಾನುವಾರುಗಳ ಮೈ ತೊಳೆಯಲು, ಭಟ್ಟೆ ಒಗೆಯಲು, ಅಕ್ಕಪಕ್ಕದ ಜಮೀನಿನ ರೈತರು ನಿತ್ಯ ಚಟುವಟಿಕೆಗಳಿಗಾಗಿ ಇಲ್ಲಿನ ನೀರು ಬಳಸುತ್ತಿದ್ದರು. ಈಗ ಅವರಿಗೂ ತೊಂದರೆಯಾಗಿದೆ. ಕೆರೆ ನೀರು ಬರಿದಾಗಿರುವುದರಿಂದ ಕೊಳವೆ ಬಾವಿಗಳ ಅಂತರ್ಜಲ ಮಟ್ಟವೂ ಕುಸಿಯುತ್ತಿವೆ. ಈ ಬಾರಿ ಸಕಾಲಕ್ಕೆ ಮಳೆ ಬಾರದಿದ್ದರೆ ಗ್ರಾಮದ ಕೊಳವೆ ಬಾವಿಗಳು ಪೂರ್ಣ ಬತ್ತಿ ಹೋಗಬಹುದೆಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.

ದುರ್ವಾಸನೆ: ಕೆರೆಯ ಅರ್ಧ ಜಾಗ ಒತ್ತುವರಿಯಾಗಿ ಇನ್ನರ್ಧ ಜಾಗದಲ್ಲಿ ಪಾದ ಮುಳುಗುವಷ್ಟು ನೀರು ಇರುವುದರಿಂದ ಆಗಾಗ ಸುರಿಯುತ್ತಿರುವ ಮಳೆ ನೀರಿನ ಜೊತೆಗೆ ಹರಿದು ಬರುವ ಗ್ರಾಮದ ಚರಂಡಿ ನೀರು ಕೆರೆಗೆ ಬಂದು ಸೇರುತ್ತಿದೆ. ಅಲ್ಲದೆ ಕೆರೆಯಲ್ಲಿ ಎಸೆಯುವ ಮಾಂಸದ ತುಂಡು, ಕೋಳಿ ಪುಚ್ಚ, ತ್ಯಾಜ್ಯದಿಂದ ಕೆರೆ ದುರ್ವಾಸನೆಯಿಂದ ಕೂಡಿದೆ.

ಕನಸಾಗಿಯೇ ಉಳಿದ ಯೋಜನೆ: ಈ ಹಿಂದೆ ಗ್ರಾಮದ ದೊಡ್ಡ ಕೆರೆಯ ಹೂಳು ತೆಗೆಯುವ ಕೆಲಸ ಸುತ್ತಮುತ್ತಲಿನ ಗ್ರಾಮದಲ್ಲೂ ಭಾಗಿ ಸದ್ದು ಮಾಡಿತ್ತು. ಗ್ರಾಮದ ಬಹುತೇಕ ಜನರು ಸ್ವಯಂ ಪ್ರೇರಣೆಯಿಂದ ಕೆರೆಯ ಹೂಳು ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ವರುಣನ ಕೃಪೆಯಿಂದ ಕೆರೆಯಲ್ಲಿ ನೀರು ತುಂಬಿತ್ತು. ಕ್ರಮೇಣ ಕೆರೆಯ ಜಾಗ ಅತಿಕ್ರಮಣ, ಒತ್ತುವರಿಯಿಂದಾಗಿ ಬರಿದಾಗುತ್ತ ಬಂದಿತು. ಅಲ್ಲದೆ ತ್ಯಾಜ್ಯ, ಗಲೀಜು ನೀರು ಸೇರಿ ಕೆರೆಯ ನೀರು ಕಲುಷಿತಗೊಂಡಿತು. ಆದರೆ ಗ್ರಾಮದ ಹತ್ತಿರವೇ ಮಲಪ್ರಭಾ ನದಿ ಹರಿದಿದೆ. ನದಿಯಿಂದ ಕೆರೆ ತುಂಬಿಸುವ ಯೋಜನೆಗೂ ಹಿನ್ನಡೆ ಆಗಿದೆ. ಇದರಿಂದ ಕೆರೆ ನೀರು ತುಂಬಿಸುವ ಯೋಜನೆ ಕನಸಾಗಿಯೇ ಉಳಿದೆ ಎನ್ನುತ್ತಾರೆ ಗ್ರಾಮಸ್ಥರು.

‘ಕೆರೆಯಲ್ಲಿರುವ ಹೂಳು, ತ್ಯಾಜ್ಯ ತೆಗೆದು ಕೆರೆ ಸ್ವಚ್ಛಗೊಳಿಸಬೇಕಿದೆ. ಕೆರೆಯಲ್ಲಿ ನೀರು ಸಂಗ್ರಹ ಸಮರ್ಥ್ಯ ಹೆಚ್ಚಿಸಿ ಕೆರೆಯಲ್ಲಿ ನೀರು ನಿಲ್ಲುವಂತೆ ಮಾಡಬೇಕು. ಇದರಿಂದ ಗ್ರಾಮದ ಜನ, ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ಕನ್ನಡಪರ ಹೋರಾಟಗಾರ ಬಸವರಾಜ ಧಾರವಾಡ.

ಬೈಲಹೊಂಗಲ ತಾಲ್ಲೂಕಿನ ದೊಡವಾಡ ಗ್ರಾಮದ ದೊಡ್ಡ ಕೆರೆ ಬೇಸಿಗೆಯಿಂದ ನೀರಿಲ್ಲದೆ ಭಣಗುಡುತ್ತಿರುವುದು
ಬೈಲಹೊಂಗಲ ತಾಲ್ಲೂಕಿನ ದೊಡವಾಡ ಗ್ರಾಮದ ದೊಡ್ಡ ಕೆರೆ ಬೇಸಿಗೆಯಿಂದ ನೀರಿಲ್ಲದೆ ಭಣಗುಡುತ್ತಿರುವುದು
ಬೈಲಹೊಂಗಲ ತಾಲ್ಲೂಕಿನ ದೊಡವಾಡ ಗ್ರಾಮದ ದೊಡ್ಡ ಕೆರೆ ಭಾಗಶಃ ಖಾಲಿಯಾಗಿದ್ದು ಗಿಡಗಂಟೆ ಬೆಳೆದಿರುವುದು
ಬೈಲಹೊಂಗಲ ತಾಲ್ಲೂಕಿನ ದೊಡವಾಡ ಗ್ರಾಮದ ದೊಡ್ಡ ಕೆರೆ ಭಾಗಶಃ ಖಾಲಿಯಾಗಿದ್ದು ಗಿಡಗಂಟೆ ಬೆಳೆದಿರುವುದು
ಕೆರೆಯ ಜಾಗ ನಿರಂತರ ಒತ್ತುವರಿ ಕೆರೆ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕೆರೆಗೆ ನೀರು ತುಂಬಿಸುವ ಯೋಜನೆಗೆ ಆದ್ಯತೆ ಇರಲಿ
ಕೆರೆಯ ಹೂಳು ಎತ್ತಿಸಿ ಕೆರೆ ಸಂಪೂರ್ಣ ನೀರು ತುಂಬಿಸಿ ಗ್ರಾಮದ ಜನರಿಗೆ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೆಕು. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ
ನಿಂಗಪ್ಪ ಚೌಡನ್ನವರ ಕೃಷಿಕ
ತಾಲ್ಲೂಕಿನಲ್ಲಿಯೇ ದೊಡ್ಡ ಕೆರೆ ಇದಾಗಿದೆ. ಒತ್ತುವರಿ ಅತಿಕ್ರಮಣದಾರರಿಂದ ಕೆರೆ ಅವನತಿ ಅಂಚಿಗೆ ತಲುಪಿದೆ. ಅತಿಕ್ರಮಣ ತೆರುವುಗೊಳಿಸಲು ಅಧಿಕಾರಿಗಳು ಕ್ರಮಕೈಕೊಳ್ಳಬೇಕು
ಮಲ್ಲಪ್ಪ ಎರಿಕಿತ್ತೂರು ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT