ಸೋಮವಾರ, ಜನವರಿ 20, 2020
18 °C
ಅವ್ಯವಸ್ಥೆಯ ಆಗರವಾದ ಬೆಳಗಾವಿಯ ಎಪಿಎಂಸಿ

ಬೆಳಗಾವಿ: ಮೂಲಸೌಲಭ್ಯವಿಲ್ಲದ ‘ಪ್ರಾಂಗಣ’; ಜನ ಹೈರಾಣ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಕನಿಷ್ಠ ಮೂಲಸೌಲಭ್ಯಗಳ ಕೊರತೆಯಿಂದಾಗಿ ಜನರು, ರೈತರು, ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಹೈರಾಣಾಗುತ್ತಿದ್ದಾರೆ.

‘ಎಪಿಎಂಸಿಗಳನ್ನು ಹೈಟೆಕ್‌ ಮಾಡಲಾಗುವುದು, ಇದಕ್ಕಾಗಿ ಕೋಟ್ಯಂತರ ರೂಪಾಯಿ ವಿನಿಯೋಗಿಸಲಾಗುತ್ತಿದೆ’ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೇಳಿಕೊಳ್ಳುತ್ತಿವೆ. ಆದರೆ, ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಇಲ್ಲಿದೆ. ಪ್ರತಿ ವಾರ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವ ಈ ಅಂಗಳದಲ್ಲಿ ವ್ಯವಸ್ಥೆಗಳು ತಾಂಡವವಾಡುತ್ತಿವೆ. ನಿರ್ವಹಣೆಯಲ್ಲಿ ಕೊರತೆ ಇರುವುದನ್ನು ಅಲ್ಲಿನ ವಾತಾವರಣವು ಬೊಟ್ಟು ಮಾಡಿ ತೋರಿಸುತ್ತಿದೆ.

ಈರುಳ್ಳಿ, ಆಲೂಗಡ್ಡೆ, ಸಿಹಿಗೆಣಸು ಹಾಗೂ ತಾಜಾ ತರಕಾರಿಗಳಿಗೆ ಈ ಮಾರುಕಟ್ಟೆ ಬಹಳ ಪ್ರಸಿದ್ಧಿಯಾಗಿದೆ. ಜಿಲ್ಲೆ, ನೆರೆಯ ವಿಜಯಪುರ, ಬಾಗಲಕೋಟೆ ಜಿಲ್ಲೆಗಳೊಂದಿಗೆ ಪಕ್ಕದ ಮಹಾರಾಷ್ಟ್ರದಿಂದಲೂ ಇಲ್ಲಿನ ಸಗಟು ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ತರಲಾಗುತ್ತದೆ. ವಾರದಲ್ಲಿ ಎರಡು ದಿನಗಳು ಅಂದರೆ ಬುಧವಾರ ಹಾಗೂ ಶನಿವಾರ ಹರಾಜು ನಡೆಯುತ್ತದೆ. ಹರಾಜು ಮುಗಿದ ನಂತರ ಎರಡ ದಿನಗಳಲ್ಲೂ ಇಲ್ಲಿನ ಉತ್ಪನ್ನಗಳನ್ನು ಹೊರಗಡೆಗೆ ಸಾಗಿಸುವ ಕೆಲಸಗಳು ನಡೆಯುತ್ತವೆ. ಅಂದರೆ, ಬಹುತೇಕ ವಾರವಿಡೀ ಚಟುವಟಿಕೆಯಿಂದ ಕೂಡಿರುವ ದೊಡ್ಡ ಮಾರುಕಟ್ಟೆ ಇದು.

ಹಾಳಾಗಿರುವ ರಸ್ತೆಗಳು

ಪಿ.ಬಿ. ರಸ್ತೆಯಲ್ಲಿ ಕೇಂದ್ರ ಬಸ್‌ ನಿಲ್ದಾಣದ ಸಮೀಪ ದಂಡು ಮಂಡಳಿಯ ಜಾಗದಲ್ಲಿ ನಡೆಯುತ್ತಿದ್ದ ಸಗಟು ತರಕಾರಿ ಮಾರುಕಟ್ಟೆಯನ್ನು ಎಸಿಎಂಸಿ ಆವರಣದಲ್ಲಿ ನಿರ್ಮಿಸಿರುವ ಆಧುನಿಕ ಸಗಟು ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿದೆ. 131 ಅಂಗಡಿಗಳನ್ನು ಹರಾಜು ಕಟ್ಟೆಗಳೊಂದಿಗೆ ನಿರ್ಮಿಸಲಾಗಿದೆ. ಅವುಗಳನ್ನು ವ್ಯಾಪಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ, ವಾರವಿಡೀ ಪ್ರಾಂಗಣದಲ್ಲಿ ಚಟುವಟಿಕೆಗಳು ಇರುತ್ತವೆ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ನೀರು, ರಸ್ತೆಗಳು, ಶೌಚಾಲಯ ಹಾಗೂ ಬೀದಿದೀಪಗಳ ವ್ಯವಸ್ಥೆಗಳನ್ನು ಮಾಡಿಲ್ಲ. ಇನ್ನೂ ಹಲವರಿಗೆ ಮಳಿಗೆಗಳು ಅಗತ್ಯವಿದ್ದು, ಹಂಚಿಕೆ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎನ್ನುವ ಆರೋಪ ವ್ಯಾಪಾರಿಗಳದಾಗಿದೆ.

ಮಾರುಕಟ್ಟೆ ಪ್ರವೇಶಿಸುವ ಮುಖ್ಯರಸ್ತೆಯೂ ಸೇರಿದಂತೆ ಒಳಗಿನ ಬಹುತೇಕ ರಸ್ತೆಗಳು ಹಾಳಾಗಿವೆ. ಗುಂಡಿಗಳು ಉಂಟಾಗಿವೆ. ಡಾಂಬರು ಕಿತ್ತು ಬಂದಿದೆ. ವಾಹನಗಳು ಸಾಗುತ್ತಿದ್ದಂತೆಯೇ ಆ ಪರಿಸರದಲ್ಲಿ ‘ಧೂಳಿನ ಅಭಿಷೇಕ’ವಾಗುತ್ತದೆ. ಚರಂಡಿ, ರಸ್ತೆಗಳ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆಯಾದರೂ ತ್ವರಿತವಾಗಿ ಪೂರ್ಣಗೊಳ್ಳುತ್ತಿಲ್ಲ. ನಿರ್ಮಾಣ ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಸುರಿಯಲಾಗಿದೆ. ಬಹುತೇಕ ರಸ್ತೆಗಳ ಪಕ್ಕದಲ್ಲಿ ಗುಂಡಿಗಳನ್ನು ತೆಗೆದು ಹಾಗೆಯೇ ಬಿಡಲಾಗಿದೆ. ಕೃಷಿ ಉತ್ಪನ್ನಗಳನ್ನು ಹೇರಿಕೊಂಡು, ಗುಂಡಿ ಬಿದ್ದ ರಸ್ತೆಗಳಲ್ಲಿ ಸರ್ಕಸ್‌ ಮಾಡಿಕೊಂಡು ಬರುವ ವಾಹನಗಳು ಕೊಂಚ ಆಯತಪ್ಪಿದರೂ ಗುಂಡಿಗಳಿಗೆ ಬೀಳುವ ಅಪಾಯವಿದೆ. ಕೆಲವರು ಬಿದ್ದು ಗಾಯಗೊಂಡ ಉದಾಹರಣೆಗಳೂ ಇವೆ ಎನ್ನುತ್ತಾರೆ ಅಲ್ಲಿನವರು.

ಕಸ ವಿಲೇವಾರಿಯಲ್ಲಿ ವಿಳಂಬ

ತ್ಯಾಜ್ಯ ವಿಲೇವಾರಿ ಕಾರ್ಯವೂ ಸಮರ್ಪಕವಾಗಿ ಆಗುತ್ತಿಲ್ಲ. ಕೆಲವು ಕಡೆಗಳಲ್ಲಿ ಕಸದ ಗುಡ್ಡೆಯೇ ಇರುವುದನ್ನು ಗಮನಿಸಬಹುದು. ತ್ಯಾಜ್ಯ ಹಾಗೂ ಧೂಳಿನಿಂದಾಗಿ ವಾತಾವರಣವೇ ಹಾಳಾಗುತ್ತಿದೆ. ಇದರಿಂದಾಗಿ ಅಲ್ಲಿನ ವ್ಯಾಪಾರಿಗಳು, ನೌಕರರು, ಸಿಬ್ಬಂದಿ ಹಲವು ಸಾಂಕ್ರಾಮಿಕ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಪರಿಸ್ಥಿತಿ ಸುಧಾರಿಸಬೇಕು, ಕನಿಷ್ಠ ಮೂಲಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಆಗ್ರಹವಾಗಿದೆ. ಬಳಕೆದಾರರಿಂದ ಶುಲ್ಕ ವಸೂಲಿ ಮಾಡಲಾಗುತ್ತಿದ್ದರೂ, ಅದಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಮಾಡಿಕೊಡುವಲ್ಲಿ ಎಪಿಎಂಸಿ ವಿಫಲವಾಗಿದೆ ಎನ್ನುವುದು ರೈತರ ಆರೋಪವಾಗಿದೆ.

ವಿವಿಧ ಕಾಮಗಾರಿಗಳು

‘ಪ್ರಸ್ತುತ ₹ 15 ಕೋಟಿ ವೆಚ್ಚದಲ್ಲಿ ಚರಂಡಿ, ರಸ್ತೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಈ ಕಾಮಗಾರಿ ಪೂರ್ಣಗೊಂಡರೆ ಪರಿಸ್ಥಿತಿ ಸುಧಾರಿಸಲಿದೆ. ಸಗಟು ತರಕಾರಿ ಮಾರುಕಟ್ಟೆಗೆ ಹೋಗುವ ವಾಹನಗಳಿಗೆಂದೇ ಪ್ರತ್ಯೇಕ ದ್ವಾರ ಮಾಡಲಾಗುತ್ತಿದೆ. ರಸ್ತೆ ನಿರ್ಮಾಣ ಪ್ರಗತಿಯಲ್ಲಿದ್ದು, ಪೂರ್ಣಗೊಳ್ಳುತ್ತಿದ್ದಂತೆಯೇ ಪ್ರತ್ಯೇಕ ದ್ವಾರ ತೆರೆಯಲಾಗುವುದು. ಈರುಳ್ಳಿ ಹಂಗಾಮಿನಲ್ಲಿ ಸರಾಸರಿ 300ರಿಂದ 500 ವಾಹನಗಳು ಬರುತ್ತವೆ. ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದನ್ನು ತಡೆಯುವುದಕ್ಕೆ ಪ್ರತ್ಯೇಕ ದ್ವಾರ ನೆರವಾಗಲಿದೆ. ₹ 23 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರವೇ ಟೆಂಡರ್‌ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಎಪಿಎಂಸಿ ಅಧ್ಯಕ್ಷ ಆನಂದ ಪಾಟೀಲ, ಕಾರ್ಯದರ್ಶಿ ಕೋಡಿಗೌಡ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು