ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆ, ಮಾರುಕಟ್ಟೆಗಳಲ್ಲಿ ಸಮಸ್ಯೆಗಳ ‘ಕಂತೆ’

ಅವ್ಯವಸ್ಥೆ ಆಗರ; ಸೌಲಭ್ಯವಿಲ್ಲದೆ ಕಂಗಾಲಾದ ವ್ಯಾಪಾರಿಗಳು, ಜನರು
Last Updated 6 ಡಿಸೆಂಬರ್ 2020, 7:02 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸಂತೆ–ಮಾರುಕಟ್ಟೆಗಳು ಕನಿಷ್ಠ ಮೂಲಸೌಲಭ್ಯಗಳಿಲ್ಲದೆ ಅವ್ಯವಸ್ಥೆಯ ಆಗರವಾಗಿವೆ.

ಹಲವೆಡೆ ಸಂತೆಗೆಂದು ನಿಗದಿತ ಸ್ಥಳ (ಸಂತೆ ಮೈದಾನ)ವಿಲ್ಲ. ಇರುವೆಡೆ ಸವಲತ್ತುಗಳಿಲ್ಲ.

ರಸ್ತೆಗಳು, ರಸ್ತೆ ಬದಿಯ ಚರಂಡಿಗಳ ಪಕ್ಕದಲ್ಲಿ ಅಥವಾ ತ್ಯಾಜ್ಯದ ಗುಂಡಿಗಳ ಪಕ್ಕದಲ್ಲಿ ಮಾರಲಾಗುವ ತರಕಾರಿಗಳು ಮತ್ತು ಧಾನ್ಯಗಳು ಜನರ ಹೊಟ್ಟೆ ಸೇರುತ್ತಿವೆ.

ಕೃಷಿ ಉತ್ಪನ್ನ ಮಾರುಕಟ್ಟೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಜಿಲ್ಲೆಯಲ್ಲಿ 10 ಎಪಿಎಂಸಿಗಳಿವೆ. 36 ಉಪ ಮಾರುಕಟ್ಟೆಗಳಿವೆ. ಜಿಲ್ಲಾ ಕೇಂದ್ರವಾದ ನಗರದಲ್ಲಿ ದೊಡ್ಡ ಪ್ರಮಾಣದ ಕೃಷಿ ಉತ್ಪನ್ನಗಳ ಮಾರುಕಟ್ಟೆ (ಎಪಿಎಂಸಿ ಪ್ರಾಂಗಣ) ಇದೆ. ಇಲ್ಲಿ ಇತ್ತೀಚೆಗೆ ರಸ್ತೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಧೂಳಿನಿಂದ ತುಂಬಿದ ವಾತಾವರಣದಲ್ಲೇ ವ್ಯಾಪಾರ–ವಹಿವಾಟು ನಡೆಯುತ್ತದೆ. ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಪರಿಣಾಮ, ಆವರಣದ ಅಲ್ಲಲ್ಲಿ ಹಂದಿಗಳು ಹಾಗೂ ಬೀದಿನಾಯಿಗಳು ‘ನೆಲೆ’ ಕಂಡುಕೊಂಡಿವೆ.

ವ್ಯಾಪಾರಿಗಳು, ರೈತರು ಅಥವಾ ಗ್ರಾಹಕರಿಗೆ ಸಮರ್ಪಕ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ನಿಯಮಿತವಾಗಿ ನಿರ್ವಹಣೆಯ ಕೊರತೆಯೂ ಕಂಡುಬಂದಿದೆ. ಇದರಿಂದಾಗಿ ಬಳಕೆದಾರರು ಹೈರಾಣಾಗುತ್ತಿದ್ದಾರೆ.

ನಗರದ ಬಹುತೇಕ ಬಡಾವಣೆಗಳಲ್ಲಿ ರಸ್ತೆ ಅಥವಾ ರಸ್ತೆಬದಿಯಲ್ಲಿ ತರಕಾರಿಗಳ ವ್ಯಾಪಾರ ಸಾಮಾನ್ಯವಾಗಿದೆ. ಇದು ಸುಗಮ ಸಂಚಾರಕ್ಕೆ ತೊಡಕಾಗಿದೆ. ಮಾರುಕಟ್ಟೆ ಸ್ಥಳಗಳಲ್ಲೂ ಸಮರ್ಪಕ ರಸ್ತೆ ಮೊದಲಾದ ಅಗತ್ಯ ಸೌಲಭ್ಯಗಳಿಲ್ಲ.

ಹಳೆಯ ಮಾರುಕಟ್ಟೆಯಲ್ಲೇ

ಚಿಕ್ಕೋಡಿಯು ಪಟ್ಟಣವು ಹತ್ತಾರು ಗ್ರಾಮಗಳಿಗೆ ಪ್ರಮುಖ ಮಾರುಕಟ್ಟೆ ಕೇಂದ್ರ. ಪ್ರತಿ ಗುರುವಾರ ವಾರದ ಸಂತೆ ಜರುಗುತ್ತದೆ. ಸಾವಿರಾರು ರೈತರು ಮತ್ತು ಗ್ರಾಹಕರು ಗಾಂಧಿ ಮಾರುಕಟ್ಟೆಗೆ ಬರುತ್ತಾರೆ. ಮಾರುಕಟ್ಟೆಯ ಒಂದು ಭಾಗವನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಬಹುತೇಕ ರೈತರು ಆ ಪ್ರದೇಶದಲ್ಲಿ ಉತ್ಪನ್ನಗಳ ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದು, ಹಳೆ ಮಾರುಕಟ್ಟೆಯಲ್ಲೇ ಸೇರುತ್ತಾರೆ. ಇದರಿಂದ ಸ್ಥಳದ ಆಭಾವ ಎದುರಾಗುತ್ತಿದೆ. ಓತಾರಿ ಗಲ್ಲಿ, ಅಂಕಲಿ ಖೂಟ್ ರಸ್ತೆಗಳ ಬದಿಗಳಲ್ಲೂ ತರಕಾರಿ ಮಾರುತ್ತಾರೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಹೊಸದಾಗಿ ನಿರ್ಮಾಣ:

ಸವದತ್ತಿ ಪಟ್ಟಣದಲ್ಲಿ ಮುಖ್ಯ ರಸ್ತೆಯಲ್ಲೇ ತರಕಾರಿ ಮಾರಲಾಗುತ್ತಿದೆ. ಇದರಿಂದ ಸಂಚಾರಕ್ಕೆ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಪುರಸಭೆಯವರು ವ್ಯಾಪಾರಿಗಳಿಂದ ಕರ ಸಂಗ್ರಹಿಸುತ್ತಾರೆ. ಆದರೆ, ನೀರು ಮೊದಲಾದ ಸೌಕರ್ಯವಿಲ್ಲ.

‘ಹಳೆಯ ದನದ ಮಾರುಕಟ್ಟೆಗೆ ಕಾಯಿಪಲ್ಯ ಮಾರುಕಟ್ಟೆ ಸ್ಥಳಾಂತರಿಸಲಾಗುವುದು. ₹ 2 ಕೋಟಿ ಅನುದಾನದಲ್ಲಿ ಸಕಲ ಸೌಲಭ್ಯಗಳುಳ್ಳ ಮಾರುಕಟ್ಟೆ ನಿರ್ಮಿಸಲಾಗುವುದು’ ಎಂದು ಶಾಸಕ ಆನಂದ ಮಾಮನಿ ತಿಳಿಸಿದರು.

ಮರೀಚಿಕೆಯಷ್ಟೆ!

ಗೋಕಾಕದ ಸಣ್ಣ-ಪುಟ್ಟ ತರಕಾರಿ ವರ್ತಕರು ರಸ್ತೆ ಬದಿಯೇ ದಿನವಿಡೀ ಕುಳಿತು ವ್ಯಾಪಾರ ಮಾಡುತ್ತಿದ್ದಾರೆ. ನಗರಸಭೆಗೆ ಕಂದಾಯ ಕಟ್ಟುತ್ತಿದ್ದಾರೆ. ಆದರೂ ಅವರ ಪಾಲಿಗೆ ಸುಸಜ್ಜಿತ ತರಕಾರಿ ಮಾರುಕಟ್ಟೆ ಎನ್ನುವುದು ಮರೀಚಿಕೆಯಾಗಿ ಪರಿಣಮಿಸಿದೆ. ರೈತರು ಕೃಷಿ ಉತ್ಪನ್ನಗಳನ್ನು ತಂದು ಮಾರಲು ಸುಸಜ್ಜಿತ ವ್ಯವಸ್ಥೆ ಇಲ್ಲ. ಹೀಗಾಗಿ, ಅವರು ನಗರದೆಲ್ಲೆಡೆ ಗಲ್ಲಿ-ಗಲ್ಲಿ ಸುತ್ತಿ ಮಾರುವ ದುಃಸ್ಥಿತಿ ಇದೆ.

‘ರೈತರು, ತರಕಾರಿ ಬೆಳೆಯುವವರ ಹಿತರಕ್ಷಣೆಗೆ ನಾವಿದ್ದೇವೆ ಎಂದೆಲ್ಲ ಮಾತನಾಡುವ ಸರ್ಕಾರ ಮತ್ತು ಅದರ ಭಾಗವಾಗಿರುವ ಜನಪ್ರತಿನಿಧಿಗಳು ಕುಂದುಕೊರತೆಗಳನ್ನು ನಿವಾರಿಸಬೇಕು. ನಗರದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುವುದು ಎಂಬ ಮಾತುಗಳನ್ನು ಮೂರು ದಶಕಗಳಿಂದಲೂ ಕೇಳುತ್ತಿದ್ದೇವೆ. ಆದರೆ, ಅನುಷ್ಠಾನವಾಗಿಲ್ಲ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಬೇಕು’ ಎಂದು ಆಶ್ರಯ ಬಡಾವಣೆ ನಿವಾಸಿ ಸುಭಾಷ ಒತ್ತಾಯಿಸಿದರು.

ಖಾನಾಪುರದಲ್ಲಿ ಹೆಸರಗಿಷ್ಟೇ

ಖಾನಾಪುರ ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ವಾರದ ಸಂತೆಗೆ ಹತ್ತಾರು ಹಳ್ಳಿಗಳ ಜನರು ಬರುತ್ತಾರೆ. ಉಳಿದ ದಿನಗಳಲ್ಲಿ ತರಕಾರಿ ಹಾಗೂ ಹಣ್ಣುಗಳ ವ್ಯಾಪಾರ ಸಾಧಾರಣ ಮಟ್ಟದಲ್ಲಿ ಇರುತ್ತದಾದರೂ ಭಾನುವಾರ ಬಜಾರ್‌ ಪೇಟ್, ಕಡೋಲ್ಕರ್‌ ಗಲ್ಲಿ, ಚುರಮುರಕರ ಗಲ್ಲಿ ಮತ್ತು ಸ್ಟೇಷನ್‌ ರಸ್ತೆಯ ಎರಡೂ ಬದಿಗಳಲ್ಲಿ 400ಕ್ಕೂ ಹೆಚ್ಚು ವ್ಯಾಪಾರಿಗಳು ಕುಳಿತು ತರಕಾರಿ, ಹಣ್ಣು ಮೊದಲಾದ ಅಗತ್ಯ ವಸ್ತುಗಳನ್ನು ಮಾರುತ್ತಾರೆ.

ನಿಂಗಾಪುರ ಗಲ್ಲಿಯಲ್ಲಿ ಪಟ್ಟಣ ಪಂಚಾಯ್ತಿಯಿಂದ ತರಕಾರಿ ಮತ್ತು ಹಣ್ಣು ಮಾರುಕಟ್ಟೆ ನಿರ್ಮಿಸಲಾಗಿದೆ. ಅಲ್ಲಿ ಮೂಲಸೌಕರ್ಯಗಳಿಲ್ಲ. ಸಂಪರ್ಕ ರಸ್ತೆಯೂ ಕಿರಿದಾಗಿದೆ. ಹೀಗಾಗಿ ಆ ಮಾರುಕಟ್ಟೆ ಹೆಸರಿಗಷ್ಟೇ ಎನ್ನುವಂತಾಗಿದೆ. ‘ಅನುಕೂಲ ಒದಗಿಸಿದರೆ ತರಕಾರಿ ಮಾರುಕಟ್ಟೆಗೆ ಹೋಗಲು ಸಿದ್ಧರಿದ್ದೇವೆ’ ಎನ್ನುತ್ತಾರೆ ವ್ಯಾಪಾರಿಗಳು.

ಬೀದಿಯೇ ಮಾರ್ಕೆಟ್

ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಸೋಮವಾರ ಹಾಗೂ ಗುರುವಾರ ನಡೆಯುವ ಸಂತೆಗೆ ಶತಮಾನದ ಇತಿಹಾಸವಿದೆ. 50ಕ್ಕಿಂತಲೂ ಹೆಚ್ಚಿನ ಹಳ್ಳಿಗಳ ಜನರು ಬರುತ್ತಾರೆ. ಇವರಲ್ಲಿ ಬೀದಿ ಬದಿಯ ವ್ಯಾಪಾರಿಗಳು, ತರಕಾರಿ ಮಾರಾಟಗಾರರು, ಜೋಳ, ಸೋಯಾಅವರೆ ಸಗಟು ಖರೀದಿ ಮಾಡುವ ದೊಡ್ಡ ಕುಳಗಳೂ ಸೇರಿವೆ. ಅಕ್ಕಿ ಮಾರಾಟಕ್ಕೆ, ಬೆಲ್ಲ ಮತ್ತು ಜವಳಿಗೆ ಪ್ರತ್ಯೇಕ ಪೇಟೆಗಳು ಇಲ್ಲಿದ್ದವು. ಈಗಲೂ ಆ ಓಣಿಗಳಿಗೆ ಅಕ್ಕಿ ಓಣಿ, ಬೆಲ್ಲದ ಓಣಿಗಳೆಂದೆ ಹೆಸರಿದೆ. ಮೊದಲಿನ ಖದರ್ ಅನ್ನು ಅವು ಕಳೆದುಕೊಂಡಿವೆ.

ಸಾವಿರಾರು ಜನರು ಸೇರುವ ಇಲ್ಲಿ ಹೆಚ್ಚು ಶೌಚಾಲಯದ ವ್ಯವಸ್ಥೆ ಆಗಬೇಕಿದೆ. ಕುಡಿಯುವ ನೀರಿನ ಸೌಲಭ್ಯವನ್ನು ಬೇಸಿಗೆಯಲ್ಲಾದರೂ ಕಲ್ಪಿಸಬೇಕು ಎನ್ನುತ್ತಾರೆ ವ್ಯಾಪಾರಿಗಳು. ಸಂತೆಯು ಪಂಚಾಯ್ತಿಗೆ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡುತ್ತದೆ. ಆದರೆ, ಪ್ರತ್ಯೇಕ ವ್ಯವಸ್ಥೆ ಇಲ್ಲದಾಗಿದೆ.

ಸೂಕ್ತ ಜಾಗವಿಲ್ಲ

ರಾಮದುರ್ಗದಲ್ಲಿ ಸಾರ್ವಜನಿಕ ಸಂತೆಗೆ ಸೂಕ್ತ ಜಾಗವಿಲ್ಲ. ತೇರ ಬಜಾರಿನ ಬಯಲು, ರಸ್ತೆ ಬದಿಯಲ್ಲಿ ಜರುಗುತ್ತದೆ. ಪುರಸಭೆಯಿಂದ ತರಕಾರಿ ಮಾರುಕಟ್ಟೆ ನಿರ್ಮಿಸಿದ್ದರೂ ಎಲ್ಲ ವ್ಯಾಪಾರಿಗಳಿಗೂ ಸಾಲುತ್ತಿಲ್ಲ ಎಂಬ ಕಾರಣಕ್ಕೆ ತೇರ ಬಜಾರನ್ನೇ ಅವಲಂಬಿಸಲಾಗಿದೆ. ನೇಕಾರ ಪೇಟೆಯ ರಸ್ತೆ ಮಗ್ಗುಲಲ್ಲೂ ಸಂತೆ ಕಟ್ಟುತ್ತದೆ.

ಎಂ.ಕೆ. ಹುಬ್ಬಳ್ಳಿ ಪಟ್ಟಣದಲ್ಲಿ ಸೋಮವಾರಕ್ಕೊಮ್ಮೆ ನಡೆಯುವ ಸಂತೆಯಲ್ಲಿ ವ್ಯಾಪಾರಿಗಳಿಗೆ ಅಗತ್ಯ ವ್ಯವಸ್ಥೆಗಳಿಲ್ಲ. ಕಸ ವಸೂಲಿ ಮಾಡುತ್ತಿದ್ದರೂ, ಸಂತೆಗಾಗಿ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಿಲ್ಲ. ಪೇಟೆ ಓಣಿ, ಮನೆ ಹಾಗೂ ಅಂಗಡಿಗಳ ಎದುರಿನ ರಸ್ತೆ ಬದಿಯೇ ವ್ಯಾಪಾರಿಗಳಿಗೆ ಆಧಾರವಾಗಿದೆ. ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿ 5 ವರ್ಷ ಕಳೆದರೂ ಪ್ರತ್ಯೇಕ ಮಾರುಕಟ್ಟೆ ಇಲ್ಲದಾಗಿದೆ.

ಅಥಣಿ ಪಟ್ಟಣದಲ್ಲೂ ಸರಿಯಾದ ವ್ಯವಸ್ಥೆ ಇಲ್ಲ. ಮಳೆ, ಚಳಿ, ಗಾಳಿ, ಬಿಸಿಲೆನ್ನದೆ ತೆರೆದ ಪ್ರದೇಶವೇ ಸಂತೆಯಾಗಿದೆ. ಕೃಷಿ ಉತ್ಪನ್ನ ಹೊತ್ತು ತರುವ ರೈತರೂ ಪರದಾಡುವ ಸ್ಥಿತಿ ಇದೆ. ವ್ಯಾಪಾರಿಗಳಿಗೆಂದು ಶೌಚಾಲಯದ ಬೇಡಿಕೆ ನಿರ್ಮಾಣದ ಬೇಡಿಕೆ ಈಡೇರಿಲ್ಲ.

ಮೂಡಲಗಿಯಲ್ಲಿ ತರಕಾರಿ ಸಂತೆಯು ಸಂಗಪ್ಪಣ್ಣ ಅಂಗಡಿ ವೃತ್ತದ ಬಳಿಯ ಪುರಸಭೆಯ ಸ್ಥಳದಲ್ಲಿ ಸೇರುತ್ತದೆ. ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು ಎನ್ನುವ ಬಗ್ಗೆ ಯಾರೂ ಯೋಚಿಸಿಲ್ಲ. ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಇದೆ.

***

ಪ್ರತಿಕ್ರಿಯೆಗಳು

ಎಂ.ಕೆ. ಹುಬ್ಬಳ್ಳಿ ಪಟ್ಟಣದಲ್ಲಿ ಶಾಶ್ವತ ಮಾರುಕಟ್ಟೆ ನಿರ್ಮಿಸಲು ಸರ್ಕಾರ ಹಾಗೂ ಸ್ಥಳೀಯ ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆ ಇಲ್ಲದಿರುವುದರಿಂದ ಸಂತೆಯನ್ನು ರಸ್ತೆ ಬದಿಯಲ್ಲೇ ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ಬಹಳ ಸಮಸ್ಯೆಯಾಗುತ್ತಿದೆ. ಇದನ್ನು ನಿವಾರಿಸಬೇಕು.

- ದೊಡ್ಡಪ್ಪ ಗಣಾಚಾರಿ, ಅಧ್ಯಕ್ಷರು, ರೈತ ಸೇವಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಎಂ.ಕೆ.ಹುಬ್ಬಳ್ಳಿ

ಚಿಕ್ಕೋಡಿಯ ಗಾಂಧಿ ಮಾರುಕಟ್ಟೆಯಲ್ಲಿ ಸಂತೆ ದಿನವಾದ ಗುರುವಾರ ಸಾವಿರಾರು ಮಂದಿ ಸೇರುತ್ತಾರೆ. ಆದರೆ, ಅಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ವಿಶೇಷವಾಗಿ ಮಹಿಳೆಯರ ಪಾಡು ಹೇಳತೀರಗಾಗಿದೆ. ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು.

– ಡಾ.ಮಾಣಿಕಮ್ಮ ಕಬಾಡಗಿ, ವಕೀಲೆ, ಚಿಕ್ಕೋಡಿ

ರಾಮದುರ್ಗದಲ್ಲಿ ತರಕಾರಿ ಸಂತೆ ನಡೆಸಲು ಪುರಸಭೆಯಿಂದ ನಿರ್ಮಿಸಿದ ವ್ಯಾಪಾರಿ ಮಳಿಗೆಯು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಸಾಕಾಗುತ್ತಿಲ್ಲ. ಈ ಅವಧಿಯ ಪ್ರಥಮ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

– ಎಸ್‌.ಜಿ ಅಂಬಿಗೇರ, ಮುಖ್ಯಾಧಿಕಾರಿ, ಪುರಸಭೆ, ರಾಮದುರ್ಗ

(ಪ್ರಜಾವಾಣಿ ತಂಡ: ಚನ್ನಪ್ಪ ಮಾದರ, ಪ್ರದೀಪ ಮೇಲಿನಮನಿ, ರಾಮೇಶ್ವರ ಕಲ್ಯಾಣಶೆಟ್ಟಿ, ಪ್ರಸನ್ನ ಕುಲಕರ್ಣಿ, ಸುಧಾಕರ ತಳವಾರ, ಬಸವರಾಜ ಶಿರಸಂಗಿ, ಬಾಲಶೇಖರ ಬಂದಿ, ಎಸ್.ವಿಭೂತಿಮಠ, ಪರಶುರಾಮ ನಂದೇಶ್ವರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT