‘ಸಿದ್ದರಾಮಯ್ಯರನ್ನು ಯಾರೂ ಮುಗಿಸಲಾರರು’

ಭಾನುವಾರ, ಮೇ 26, 2019
27 °C
ಸಚಿವ ಸತೀಶ ಜಾರಕಿಹೊಳಿ ಹೇಳಿಕೆ

‘ಸಿದ್ದರಾಮಯ್ಯರನ್ನು ಯಾರೂ ಮುಗಿಸಲಾರರು’

Published:
Updated:

ಬೆಳಗಾವಿ: ‘ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಯಾರೂ ಮುಗಿಸಲಾಗದು’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಸಿದ್ದರಾಮಯ್ಯ ಅವರನ್ನು ಮುಗಿಸಲು ಕಾಂಗ್ರೆಸ್‌ನಲ್ಲಿ ಯತ್ನ ನಡೆಯುತ್ತಿದೆ’ ಎನ್ನುವ ಶಾಸಕ, ಬಿಜೆಪಿಯ ಬಸನಗೌಡ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದರು. ‘ಅವರು ಯಾವಾಗಲೂ ನಾಯಕರೇ. ನಾಯಕತ್ವ ಗುಣ ಅವರೊಂದಿಗೇ ಇರುತ್ತದೆ. ಅದನ್ನು ಮುಗಿಸಲು ಆಗುವುದಿಲ್ಲ’ ಎಂದರು.

‘ಸ್ಥಾನಮಾನಕ್ಕಾಗಿ ಕಾಂಗ್ರೆಸ್‌ನ ಯಾರು ಕೂಡ ಬಿಜೆಪಿಗೆ ಹೋಗುವುದಿಲ್ಲ. ಆದರೆ, ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಮತ್ತೆ ಆಪರೇಷನ್ ಕಮಲ‌ ಪ್ರಯತ್ನ ಮಾಡುತ್ತಾರೆ. ದೇಶದಲ್ಲಿ ಬಿಜೆಪಿಗೆ 273 ಸೀಟುಗಳು ಬಂದರೆ ಮಾತ್ರ ಇಲ್ಲಿ ಆಪರೇಷನ್ ಕಮಲಕ್ಕೆ ಕೈ  ಹಾಕುತ್ತಾರೆ. ಕಡಿಮೆ ಸ್ಥಾನಗಳು ಬಂದರೆ ಪ್ರಯ್ನಿಸುವುದಿಲ್ಲ. ಆಗ, ನಮ್ಮ‌ ಸರ್ಕಾರ ಕೆಡವಲು ಮುಂದಾಗುವುದಿಲ್ಲ’ ಎಂದು ಹೇಳಿದರು.

‘ಕಾಂಗ್ರೆಸ್‌ಗಿಂದ ಹೆಚ್ಚಿನ ಸಮಸ್ಯೆ, ಗೊಂದಲಗಳು ಬಿಜೆಪಿಯಲ್ಲಿವೆ. ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರನ್ನೇ ಬದಲಾಯಿಸಬೇಕು ಎಂದು ಚರ್ಚೆಗಳು ನಡೆದಿಲ್ಲವೇ?’ ಎಂದು ಕೇಳಿದರು.

ಗೋಕಾಕದ ಲೋಳಸೂರು ಮತ್ತು ಶಿಂಧಿಕುರಬೇಟ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದರಿಂದ ಶಾಸಕ ರಮೇಶ ಜಾರಕಿಹೊಳಿ ಆ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಂದ ರಾಜೀನಾಮೆ ಕೊಡಿಸಿರುವುದು ನಿಜ. ಒಬ್ಬಿಬ್ಬರು ರಾಜೀನಾಮೆ ಕೊಡುವುದರಿಂದ ಕಾಂಗ್ರೆಸ್‌ನ ಮತಗಳು ವೋಟ್ ಬದಲಾಗುವುದಿಲ್ಲ. ಎಲ್ಲ ಮತದಾರರನ್ನೂ ಹೆದರಿಸಲು ಆಗೋಲ್ಲ. ನಮ್ಮ‌ ಹೋರಾಟ ಬೇರೆ ಇದೆ; ಇದು ಸಮಿಫೈನಲ್ ಅಷ್ಟೆ’ ಎಂದು ಸೋದರಗೆ ಟಾಂಗ್ ನೀಡಿದರು.

‘ಕಾಂಗ್ರೆಸ್ ಪರ ಇರುವವರನ್ನು ರಮೇಶ ಟಾರ್ಗೆಟ್ ಮಾಡುತ್ತಿದ್ದಾರೆ. ಅವರ ಈ ನಡೆ ಸರಿಯಲ್ಲ. ಆದರೂ ಅದನ್ನು ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !