ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕರ್ನಾಟಕದ ಪ್ರವಾಸಿ ತಾಣಗಳಿಗೆ ಬೇಕು ಹೆಚ್ಚು ಪ್ರಚಾರ: ಕೆ.ವಿ. ರಾಜೇಂದ್ರ

‘ಕನೆಕ್ಟ್‌’ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ‌ ಇಲಾಖೆ ನಿರ್ದೇಶಕ ರಾಜೇಂದ್ರ ಅಭಿಮತ
Published : 13 ಆಗಸ್ಟ್ 2024, 11:14 IST
Last Updated : 13 ಆಗಸ್ಟ್ 2024, 11:14 IST
ಫಾಲೋ ಮಾಡಿ
Comments

ಬೆಳಗಾವಿ: ‘ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ, ಉತ್ತರ ಕರ್ನಾಟಕದಲ್ಲಿ ಪ್ರವಾಸಿ ತಾಣ ಕಡಿಮೆ ಇರಬಹುದು. ಆದರೆ, ಅವುಗಳಿಗೆ ಹೆಚ್ಚಿನ ಪ್ರಚಾರ ನೀಡಿ, ಪ್ರವಾಸಿಗರನ್ನು ಈ ಭಾಗದತ್ತ ಸೆಳೆಯುವ ಕೆಲಸವಾಗಬೇಕಿದೆ’ ಎಂದು ಪ್ರವಾಸೋದ್ಯಮ‌ ಇಲಾಖೆ ನಿರ್ದೇಶಕ ಕೆ.ವಿ.ರಾಜೇಂದ್ರ ಹೇಳಿದರು.

ಇಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಧ್ಯಸ್ಥಿಕೆದಾರರೊಂದಿಗೆ ಸಂವಾದ (ಕನೆಕ್ಟ್‌) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಉತ್ತಮ ಪ್ರವಾಸಿ ತಾಣಗಳಿವೆ. ಆದರೆ, ಅವುಗಳಿಗೆ ಪ್ರಚಾರ ಒದಗಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಇಂಥ ಪ್ರವಾಸಿ ತಾಣಗಳಿಗೆ ಪ್ರಚಾರ ಕೊಡಬೇಕಿದೆ’ ಎಂದರು.

‘ಸವದತ್ತಿಯ ಯಲ್ಲಮ್ಮ ದೇವಸ್ಥಾನ, ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತ, ಶ್ರೀಕ್ಷೇತ್ರ ಸೊಗಲ, ರಾಜಹಂಸಗಡ ಕೋಟೆ, ಚನ್ನಮ್ಮನ ಕಿತ್ತೂರು ಕೋಟೆ ಮೊದಲಾದ ಪ್ರವಾಸಿತಾಣಗಳು ಜಿಲ್ಲೆಯಲ್ಲಿವೆ. ಖಾನಾಪುರ ತಾಲ್ಲೂಕು ದಟ್ಟವಾದ ಅರಣ್ಯದಿಂದ ಸುತ್ತುವರಿದಿದೆ. ನಮ್ಮ ನೆಲದ ನೈಸರ್ಗಿಕ ಸೌಂದರ್ಯವನ್ನು ಇಡೀ ನಾಡಿಗೆ ತೋರಿಸುವ ಕೆಲಸವಾಗಬೇಕಿದೆ. ಗ್ರಾಮೀಣ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ಕೊಡಬೇಕಿದೆ’ ಎಂದರು.

‘ಕೈಗಾರಿಕೆ ದೃಷ್ಟಿಯಿಂದಲೂ ಬೆಳಗಾವಿ ಮುಂದಿದೆ. ಬೆಂಗಳೂರು– ಪುಣೆ ರಾಷ್ಟ್ರೀಯ ಹೆದ್ದಾರಿ ಇಲ್ಲಿಯೇ ಹಾಯ್ದುಹೋಗಿದ್ದು, ವಿಮಾನ ಸೌಕರ್ಯವನ್ನೂ ಹೊಂದಿದೆ. ವಿಧಾನಮಂಡಲ ಚಳಿಗಾಲದ ಅಧಿವೇಶನವೂ ಇಲ್ಲಿ ನಡೆಯುತ್ತದೆ. ಇವೆಲ್ಲ ಅವಕಾಶ ಸದ್ಬಳಕೆ ಮಾಡಿಕೊಂಡು ಪ್ರವಾಸೋದ್ಯಮ ಬೆಳವಣಿಗೆಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

‘ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಮಧ್ಯಸ್ಥಿಕೆದಾರರ ಪಾತ್ರವೂ ಮುಖ್ಯ. ತಮ್ಮೂರಿನ ಪ್ರವಾಸಿತಾಣ ವೀಕ್ಷಣೆಗೆ ಬರುವವರೊಂದಿಗೆ ವಾಹನಗಳ ಚಾಲಕರು, ಹೋಟೆಲ್‌ಗಳ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ನಮ್ಮ ವ್ಯಕ್ತಿತ್ವ, ಆತಿಥ್ಯ ಮನೋಭಾವವೂ ಪ್ರವಾಸಿಗರ ಮೇಲೆ ಪ್ರಭಾವ ಬೀರುವುದು ನಿಶ್ಚಿತ’ ಎಂದರು.

‘ಆಹಾರ ಖಾದ್ಯಗಳ ವಿಚಾರದಲ್ಲೂ ಉತ್ತರ ಕರ್ನಾಟಕ ಕಡಿಮೆಯೇನಿಲ್ಲ. ಆದರೆ, ಆ ಆಹಾರ ಪದಾರ್ಥಗಳನ್ನು ‘ಬ್ರ್ಯಾಂಡಿಂಗ್‌’ ಮಾಡಬೇಕು. ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು’ ಎಂದು ಕರೆ ಕೊಟ್ಟರು.

ಅರಣ್ಯ ಪ್ರವಾಸೋದ್ಯಮದ ಬೆಳವಣಿಗೆಗೆ ತೊಡಕಾಗಿರುವ ನಿಯಮಗಳನ್ನು ಸಡಿಲಗೊಳಿಸುವುದು, ಹೋಮ್‌ಸ್ಟೇಗಳಲ್ಲಿ ಹೆಚ್ಚಿನ ಕೊಠಡಿಗಳಿಗೆ ಅವಕಾಶ ಕಲ್ಪಿಸುವುದು, ಮಹಾರಾಷ್ಟ್ರ ಮತ್ತು ಗೋವಾದಿಂದ ಬರುವ ಪ್ರವಾಸಿಗರೊಂದಿಗೆ ಸ್ಥಳೀಯ ಪೊಲೀಸರು ಸೌಜನ್ಯದಿಂದ ವರ್ತಿಸುವುದು, ಸಾಹಸಿ ಪ್ರವಾಸೋದ್ಯಮಕ್ಕೆ ಒತ್ತು ಕೊಡುವುದು, ಪ್ರವಾಸಿತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕುರಿತಾಗಿ ಮಧ್ಯಸ್ಥಿಕೆದಾರರು ಚರ್ಚಿಸಿದರು. ಗಡಿನಾಡಿನಲ್ಲಿ ಪ್ರವಾಸಿ ರಂಗದಲ್ಲಿ ಆಗಬೇಕಿರುವ ಕೆಲಸಗಳ ಕುರಿತು ಗಮನಸೆಳೆದರು. ‘ಹಂತ–ಹಂತವಾಗಿ ನಿಮ್ಮ ಬೇಡಿಕೆ ಈಡೇರಿಸಲಾಗುವುದು’ ಎಂದು ರಾಜೇಂದ್ರ ಭರವಸೆ ಕೊಟ್ಟರು.

ಕರ್ನಾಟಕ ಪ್ರವಾಸೋದ್ಯಮ‌ ಸೊಸೈಟಿ‌ ಕಾರ್ಯದರ್ಶಿ ಮನು ಮಾತನಾಡಿದರು. ಪ್ರವಾಸೋದ್ಯಮ ಇಲಾಖೆ ಬೆಳಗಾವಿ ವಿಭಾಗದ ಜಂಟಿನಿರ್ದೆಶಕಿ ಸೌಮ್ಯಾ ಬಾಪಟ್‌, ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ಎಸ್‌.ತ್ಯಾಗರಾಜನ್‌, ಉದ್ಯಮಿ ವಿಠ್ಠಲ ಹೆಗಡೆ ಇತರರಿದ್ದರು.

–––––––––––

‘ಪ್ರವಾಸೋದ್ಯಮ ನೀತಿ: ಅಭಿಪ್ರಾಯ ಸಂಗ್ರಹ’

‘ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಒತ್ತು ನೀಡಬೇಕೆಂಬ ದೃಷ್ಟಿಯಿಂದ 2024–29ರ ಪ್ರವಾಸೋದ್ಯಮ ನೀತಿಯ ಕರಡು ರೂಪಿಸುತ್ತಿದ್ದೇವೆ. ಇದಕ್ಕಾಗಿ ನಿಮ್ಮ ಅಭಿಪ್ರಾಯ, ಸಲಹೆ ಆಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲೂ ಪ್ರವಾಸಿ ರಂಗದ ಬೆಳವಣಿಗೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ. ಇದಕ್ಕೆ ಮಧ್ಯಸ್ಥಿಕೆದಾರರ ಸಹಕಾರವೂ ಅಗತ್ಯ’ ಎಂದು ರಾಜೇಂದ್ರ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT