ಶನಿವಾರ, ಜೂನ್ 19, 2021
21 °C

ಗೋಕಾಕ: ಸೋಂಕಿತರ ಆರೈಕೆಗೆ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಕುರಿತು ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಇಲ್ಲಿನ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಅಧಿಕಾರಿಗಳ ಸಭೆ ನಡೆಯಿತು.

ಸೋಂಕಿನ ವಿರುದ್ಧ ಹೋರಾಡಲು ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು. ರೋಗಿಗಳ ಸುರಕ್ಷತೆಗೆ ಪ್ರಾಶಸ್ತ್ಯ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರ, ಮಲ್ಲಾಪೂರ ಪಿಜಿ ಮತ್ತು ನಾಗನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಆರೈಕೆ ಕೇಂದ್ರಗಳಿಗೆ ಕೇಂದ್ರೀಕೃತ ಆಮ್ಲಜನಕ ಪೂರೈಕೆಯ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಶಾಸಕರು ವಹಿಸಿಕೊಂಡಿದ್ದಾರೆ. ಸಾವಿನ ಪ್ರಮಾಣ ಇಳಿಕೆಗಾಗಿ ರೋಗಿಗಳಿಗೆ ಆಕ್ಷಿಜನ್ ವ್ಯವಸ್ಥೆ ಮಾಡಲು ನಿರ್ಧರಿಸಿರುವ ಅವರ ನಿಲುವಿಗೆ ಅಭಿನಂದನೆ ವ್ಯಕ್ತವಾಯಿತು.

ಅಧ್ಯಕ್ಷತೆ ವಹಿಸಿದ್ದ ಗೋಕಾಕ ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ‘ಆಂಬುಲೆನ್ಸ್‌ ಕೊರತೆ ಉಂಟಾದರೆ ಬಾಡಿಗೆಗೆ ಪಡೆಯಬೇಕು. ಅಂತ್ಯಸಂಸ್ಕಾರದ ವೇಳೆ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸ್ಥಳೀಯ ವೈದ್ಯಾಧಿಕಾರಿ, ಪಿಡಿಒ, ಮುಖ್ಯಾಧಿಕಾರಿ, ಗ್ರಾಮ ಲೆಕ್ಕಿಗರು, ಪೊಲೀಸರು ಈ ಜವಾಬ್ದಾರಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಕುಂಟು ನೆಪ ಹೇಳಿ ಕರ್ತವ್ಯದಿಂದ ದೂರವಿರಲು ಯತ್ನಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಅರಭಾವಿ ಶಾಸಕರು ಕ್ಷೇತ್ರದ ಜನತೆಗೆ 2.50 ಲಕ್ಷ ಮುಖಗವಸುಗಳನ್ನು ವಿತರಿಸಿದ್ದಾರೆ. ಮತ್ತೆ 2 ಲಕ್ಷ ವಿತರಿಸಿಲು ಸಿದ್ಧತೆ ಮಾಡಲಾಗಿದೆ. ಕೋವಿಡ್ ಕೇರ್ ಕೇಂದ್ರಗಳಲ್ಲಿರುವವರಿಗೆ ಗುಣಮಟ್ಟದ ಆಹಾರ ಕೊಡಲಾಗುತ್ತಿದೆ’ ಎಂದು ಟಿಎಚ್‌ಒ ಡಾ.ಜಗದೀಶ ಜಿಂಗಿ ತಿಳಿಸಿದರು.

ಮೂಡಲಗಿ ತಹಶೀಲ್ದಾರ ದಿಲ್ಶಾದ್ ಮಹಾತ್, ತಜ್ಞ ವೈದ್ಯ ಡಾ.ಆರ್.ಎಸ್. ಬೆಣಚಿನಮರಡಿ, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಬಿ. ಕೋಣಿ, ಮೂಡಲಗಿ ಬಿಇಒ ಅಜಿತ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ. ಬಳಗಾರ, ಮೂಡಲಗಿ ಸಿಡಿಪಿಒ ವೈ.ಎಂ. ಗುಜನಟ್ಟಿ, ಸಬ್ ಇನ್‌ಸ್ಪೆಕ್ಟರ್‌ಗಳಾದ ಮಲ್ಲಿಕಾರ್ಜುನ ಸಿಂಧೂರ, ಎಚ್.ವೈ. ಬಾಲದಂಡಿ, ಎಚ್.ಕೆ. ನರಳೆ, ಶಾಸಕರ ಆಪ್ತಸಹಾಯಕ ನಾಗಪ್ಪ ಶೇಖರಗೋಳ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು