ಬುಧವಾರ, ಮಾರ್ಚ್ 3, 2021
19 °C
ಕುತೂಹಲ ಮೂಡಿಸಿರುವ ಶ್ರದ್ಧಾ ಶೆಟ್ಟರ್ ನಡೆ

ಬೆಳಗಾವಿ: ಒಂದು ‘ಪೋಸ್ಟ್‌’; ಹಲವು ಚರ್ಚೆ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರವನ್ನು 4ನೇ ಬಾರಿಗೆ ಪ್ರತಿನಿಧಿಸುತ್ತಿದ್ದ ದಿವಂಗತ ಸುರೇಶ ಅಂಗಡಿ ಅವರ ದ್ವಿತೀಯ ಪುತ್ರಿ ಹಾಗೂ ಹಾಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರ ಸೊಸೆ ಶ್ರದ್ಧಾ ಶೆಟ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಒಂದು ‘ಪೋಸ್ಟ್’ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಸಂಚಲನವನ್ನೂ ಮೂಡಿಸಿದೆ.

ಉಪ ಚುನಾವಣೆ ಘೋಷಣೆಯ ಹೊಸ್ತಿಲಲ್ಲಿ ಅವರು ಕ್ಷೇತ್ರದಲ್ಲಿ ‘ಪ್ರದಕ್ಷಿಣೆ’ ಹಾಕಲು ಶುರು ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯ  ಕ್ಷೇತ್ರದಲ್ಲಿನ ಹಲವು ಲೆಕ್ಕಾಚಾರಗಳಿಗೆ ಮುನ್ನುಡಿ ಬರೆದಿದೆ. ಸುರೇಶ ಅಂಗಡಿ ಅವರು ಜೀವಂತವಿದ್ದಾಗ ರಾಜಕೀಯದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಶ್ರದ್ಧಾ, ಇತ್ತೀಚೆಗೆ ಕ್ರಿಯಾಶೀಲರಾಗಿ ಓಡಾಡುತ್ತಿರುವುದು ಮತ್ತು ಕ್ಷೇತ್ರದಲ್ಲಿ ಜನಸಂ‍ಪರ್ಕ ವೃದ್ಧಿಸಿಕೊಳ್ಳುತ್ತಿರುವುದು ಗಮನಸೆಳೆಯುತ್ತಿದೆ.

ಶಾ ಭೇಟಿ ನಂತರ: ಇಲ್ಲಿ ಬಿಜೆಪಿಯಿಂದ ಭಾನುವಾರ ಆಯೋಜಿಸಿದ್ದ ಜನಸೇವಕ ಸಮಾವೇಶ ಸಮಾರೋಪದಲ್ಲಿ ಭಾಗವಹಿಸಿದ್ದ ಪಕ್ಷದ ಹೈಕಮಾಂಡ್‌ನಲ್ಲಿ ಒಬ್ಬರಾದ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ನಾಯಕರು ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಇದಾದ ಮರುದಿನವೇ ಶ್ರದ್ಧಾ ಹೆಚ್ಚು ಸಕ್ರಿಯವಾಗಿದ್ದಾರೆ. ತಾಲ್ಲೂಕಿನ ರಾಜಹಂಸಗಡ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಲ್ಲದೇ, ಸಾರ್ವಜನಿಕರ ಜೊತೆ ಸಮಾಲೋಚನೆಯನ್ನೂ ನಡೆಸಿದ್ದಾರೆ. ಇದನ್ನು ಫೋಟೊಗಳಸಹಿತ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು, ಹಲವು ಲೆಕ್ಕಾಚಾರಗಳಿಗೆ ‘ವಿಷಯ’ ಒದಗಿಸಿದೆ.

ಆ ‘ಪೋಸ್ಟ್‌’ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಹಾಗೂ ವೆಬ್ಬಿಗರು, ‘ರಾಷ್ಟ್ರೀಯ ನಾಯಕರಿಂದ ಹಸಿರು ನಿಶಾನೆ ದೊರೆತಿರುವ ಲಕ್ಷ್ಮಣಗಳಿವೆ’, ‘ಮುಂದಿನ ಸಂಸದೆ’, ‘ನೀವು ರಾಜಕೀಯಕ್ಕೆ ಬರುವುದಕ್ಕಾಗಿ ಕಾಯುತ್ತಿದ್ದೇವೆ’ ಎಂಬಿತ್ಯಾದಿಯಾಗಿ ಪ್ರತಿಕ್ರಿಯೆ ಹಾಕಿದ್ದಾರೆ. ಹಲವರು ಮುಂದಿನ ದಿನಗಳಿಗೆ ಶುಭ ಕೋರಿದ್ದಾರೆ. ಕೆಲವರು, ‘ಗುರಿ ತಲುಪುವವರೆಗೂ ಸಕ್ರಿಯವಾಗಿರಿ’ ಎಂದೂ ಹಾರೈಸಿದ್ದಾರೆ.

‘ಶ್ರದ್ಧಾ ಹಾಕಿರುವ ಒಂದು ಪೋಸ್ಟ್‌ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ. ಅಲ್ಲದೇ, ‘ಕ್ಷೇತ್ರದ ಉತ್ತರಾಧಿಕಾರಿ ಆಗಲು ಪೈಪೋಟಿ ಕೊಡುವುದಕ್ಕೆ ನಾನು ಸಿದ್ಧವಿದ್ದೇನೆ’ ಎಂಬ ಸಂದೇಶವನ್ನು ಶ್ರದ್ಧಾ ಈ ಮೂಲಕ ರವಾನಿಸಿದ್ದಾರೆ. ತಾಲೀಮನ್ನು ಕೂಡ ಆರಂಭಿಸಿದ್ದಾರೆ’ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಅಭಿಮಾನಿಗಳ ಆಗ್ರಹ: ಇಲ್ಲಿನ ಎಪಿಎಂಸಿಯಲ್ಲಿ ಬಿಜೆಪಿಯಿಂದ ಡಿ. 25ರಂದು ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಮತ್ತು ‘ಕೃಷಿ ಸಮ್ಮಾನ್’ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಂಡು ಸಂಚಲನ ಮೂಡಿಸಿದ್ದರು.

ಉಪ ಚುನಾವಣೆಯಲ್ಲಿ ಅಂಗಡಿ ಕುಟುಂಬದವರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷದಲ್ಲಿನ ಒಂದು ಬಣ ಒತ್ತಾಯಿಸುತ್ತಿದೆ. ಅಭಿಮಾನಿಗಳು ಕೂಡ ಆಗ್ರಹ ಮಂಡಿಸುತ್ತಿದ್ದಾರೆ. ನಿತ್ಯವೂ ಒಂದಿಷ್ಟು ಬೆಂಬಲಿಗರು ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.

‘ಅಂಗಡಿ ಕುಟುಂಬಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಆ ಪಕ್ಷದ ಹಲವು ನಾಯಕರು ಹೇಳಿದ್ದಾರೆ. ಈ ನಡುವೆ, ಹಲವು ಮಂದಿ ಆ ಪಕ್ಷದ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಹೀಗಾಗಿ, ಉಪ ಚನಾವಣೆ ಘೋಷಣೆಗೂ ಮುನ್ನವೇ ಇಲ್ಲಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ಪ್ರತಿಕ್ರಿಯೆಗೆ ಶ್ರದ್ಧಾ ಲಭ್ಯವಾಗಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು